Bellary BJP Manifesto - ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಬಳ್ಳಾರಿ ಮಹಾನಗರ ಪಾಲಿಕೆ ಗದ್ದುಗೆಯನ್ನು ಮರಳಿ ಪಡೆಯುವ ಸಂಕಲ್ಪ ತೊಟ್ಟಿರುವ ಬಿಜೆಪಿ ಅದಕ್ಕೆ ತಕ್ಕಂತೆ ಅವಿರತವಾಗಿ ಶ್ರಮಿಸುತ್ತಿದೆ. ಅದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಏನು ಭರವಸೆಗಳನ್ನ ನೀಡಲಾಗಿದೆ ಎಂಬ ವಿವರ ಇಲ್ಲಿದೆ.

ಬಳ್ಳಾರಿ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಬಳ್ಳಾರಿ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ

  • Share this:
    ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆಯನ್ನ ಬಿಜೆಪಿ ಪಕ್ಷ ಬಹಳ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹೇಗಾದರೂ ಮಾಡಿ ಬಳ್ಳಾರಿ ಮಹಾನಗರಪಾಲಿಕೆ ಗದ್ದುಗೆಯನ್ನು ಬಿಜೆಪಿ ವಶಪಡಿಸಿಕೊಳ್ಳಲಿಕ್ಕೆ, ಎಲ್ಲ ರೀತಿಯ ತಯಾರಿ ನಡೆಸಿದೆ. ಜಿಲ್ಲೆಯಲ್ಲಿ ಅತಿಯಾಗಿ ಕೋವಿಡ್ ಹೆಚ್ಚಾಗುತ್ತಿದ್ದರೂ ಲೆಕ್ಕಿಸದೆ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ಹಿಂದೆ ಆರೋಗ್ಯ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರೇ ಯಾವ ಕೋವಿಡ್ ನಿಯಮಾವಳಿಗಳನ್ನೂ ಲೆಕ್ಕಿಸದೆ ನೂರಾರು ಬೆಂಬಲಿಗರೊಂದಿಗೆ ಪ್ರಚಾರ ಮಾಡಿದ್ದಾರೆ. ಹೇಗಾದರೂ ಪಾಲಿಕೆ ಅಧಿಕಾರ ಗಿಟ್ಟಿಸುವ ಸನ್ನಾಹ ಸ್ಥಳೀಯ ಬಿಜೆಪಿ ನಾಯಕರದ್ದಾಗಿದೆ. ಅದೇ ಪ್ರಕಾರವಾಗಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತೇವೆ ಎಂದು ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಲಾಗಿದೆ.

    ಇಲ್ಲಿನ‌ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆ ಬಯಸಿದಂತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಬಂದ ಮೇಲೆ ಜನತೆಗೆ ಹೆಚ್ಚಿಸಿರುವ ಆಸ್ತಿ ತೆರಿಗೆ ಕಡಿತ ಮಾಡಲಿದೆ. ಮಾಸಿಕ 175 ರೂ ಇರುವ ಕುಡಿಯುವ ನೀರಿನ‌ ತೆರಿಗೆಯನ್ನು‌ 100 ರೂಗೆ ಇಳಿಕೆ ಮಾಡುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವರೂ ಆದ ಬಿ. ಶ್ರೀರಾಮುಲು ಹೇಳಿದ್ದಾರೆ. ಪಾಲಿಕೆ ಚುನಾವಣೆಗೆ ಡಾ. ಅರುಣಾ ಕಾಮಿನೇನಿ, ಡಾ. ಬಿ ಕೆ ಸುಂದರ್, ಸಂಜಯ್ ಬೆಟಗೇರಿ ಮೊದಲಾದವರು ಸಿದ್ದಪಡಿಸಿರುವ ಪ್ರಣಾಳಿಕೆಯನ್ನು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸನಗೌಡ ಅವರೊಂದಿಗೆ ಬಿ ಶ್ರೀರಾಮುಲು ನಿನ್ನೆ ಗುರುವಾರ ಬಳ್ಳಾರ ನಗರದ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಿ‌ ಮಾತನಾಡುತ್ತಿದ್ದರು.

    ಚುನಾವಣಾ ಪ್ರಚಾರ ಸಂದರ್ಭದಲ್ಲಿ ದಿನ‌ನಿತ್ಯ ವಾರ್ಡುಗಳಲ್ಲಿ‌35 ಕಿಲೋ ಮೀಟರ್​ನಷ್ಟು ದೂರ ಪಾದಯಾತ್ರೆ ಮಾಡಿ. ಜನರ ಸಮಸ್ಯೆಗಳನ್ನು ಅರಿತಿರುವೆ. ಎರಡು ಬಾರಿ ಬಿಜೆಪಿ ಬಳ್ಳಾರಿ ಪಾಲಿಕೆಯಲ್ಲಿ ಆಡಳಿತ ನಡೆಸಿತ್ತು. ಆಗ ನಗರಕ್ಕೆ ಸಾಕಷ್ಟು‌ ಕೆಲಸ‌ ಮಾಡಿತ್ತು. ಆಗ ನಗರ ಶಾಸಕರಾಗಿರುವ ಸೋಮಶೇಖರ ರೆಡ್ಡಿ ಅವರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಪಾಲಿಕೆ ಉಪ ಮೇಯರ್ ಆಗಿ ಮಾಡಿದ ಕೆಲಸವನ್ನು ಜನರು ಈಗಲೂ ಸ್ಮರಿಸುತ್ತಿದ್ದಾರೆ. ನಂತರ ಅವರು ಶಾಸಕರಾದರು. ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಅದು ಇಲ್ಲಿನ‌ ಪಾಲಿಕೆಯಲ್ಲೂ ಬಿಜೆಪಿ ಆಡಳಿತ ಇರಬೇಕು ಎಂಬುದು ನಮ್ಮ ಆಶಯವಾಗಿದೆ. ಅದಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿ ಎಂದು‌ ಕೇಳಿದೆ. ಜನತೆ ಬಿಜೆಪಿಗೆ ಮತ‌ ನೀಡಲು ಮನಸು ಮಾಡಿದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಸಮುದಾಯದ ಜನತೆ ಬಿಜೆಪಿಗೆ ಮತ ನೀಡಲು ಉತ್ಸಾಹಕರಾಗಿದ್ದಾರೆ. ಹಾಗಾಗಿ‌ ನಗರ ಪಾಲಿಕೆಯ 39 ವಾರ್ಡುಗಳ ಪೈಕಿ 27 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ ಎಂದು ಬಿ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಪ್ರಧಾನಿ ಮೋದಿ ಮುಂದೆ ಆಮ್ಲಜನಕ, ರೆಮ್​ಡೆಸಿವಿರ್​ಗೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರ

    ಬಿಜೆಪಿ ಆಡಳಿತಕ್ಕೆ ಬಂದರೆ. ಬೀದಿ‌ಬದಿ‌ ವ್ಯಾಪಾರಿಗಳಿಂದ ಈ ಹಿಂದಿನಂತೆ ತೆರಿಗೆ ವಸೂಲಿ‌ ಮಾಡಲ್ಲ, ಜನತೆ ತಮ್ಮ‌ಸಮಸ್ಯೆಗಳನ್ನು‌ ಹೇಳಿಕೊಂಡು ಪಾಲಿಕೆ ಕಚೇರಿಗೆ ಬರುವುದನ್ನು ತಪ್ಪಿಸಲು ವಾರ್ಡ್​ವಾರು ಜನ‌ಸಂಪರ್ಕ ಕಚೇರಿಗಳನ್ನು ತೆರೆಯಲಿದೆ. ಫಾರಂ 2 ಸಮಸ್ಯೆಯನ್ನು ಸರಳೀಕರಣಗೊಳಿಸಿ 21 ದಿನದಲ್ಲಿ ನೀಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳ ಆರಂಭಿಸುತ್ತೇವೆ ಎಂಬಿತ್ಯಾದಿ ವಿಚಾರಗಳ‌ ಬಗ್ಗೆ ಸಮಾಜ ಕಲ್ಯಾಣ ಸಚಿವರು ತಿಳಿಸಿದರು.

    ಪಕ್ಷದ ಮುಖಂಡ ಅನಿಲ್ ನಾಯ್ಡು ಮೋಕಾ ಸ್ವಾಗತಿಸಿದರು. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಮಾಜಿ ಸಂಸದೆ ಜೆ. ಶಾಂತ, ಬಿಜೆಪಿ ಪಕ್ಷದ ಮುಖಂಡರುಗಳಾದ ಎಸ್. ಗುರುಲಿಂಗನಗೌಡ, ಕೌಲ್ ಬಜಾರ್ ಮಂಡಲ್ ಅಧ್ಯಕ್ಷ ಗೌಳಿ ಶಂಕ್ರಪ್ಪ, ಅಲ್ಲಬಕ್ಷ್, ವೀರಶೇಖರ ರೆಡ್ಡಿ, ‌ರಾಜೀವ್ ತೊಗರಿ, ಓಬಳೇಶ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

    ವರದಿ: ವಿನಾಯಕ ಬಡಿಗೇರ
    Published by:Vijayasarthy SN
    First published: