HOME » NEWS » District » BJP LOST BAGALKOTE BDCC PRESIDENTIAL ELECTION RBK MAK

ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲಿ ಬಹುಮತವಿದ್ದರೂ ಬಿಜೆಪಿಗೆ ಸೋಲು

ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮಗೆ ಬರಬೇಕಿದ್ದ 8ಮತಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಈ ಬಗ್ಗೆ ವರಿಷ್ಠರು  ಚರ್ಚೆ ನಡೆಸಬೇಕೆಂದು ಪರೋಕ್ಷವಾಗಿ ಅಡ್ಡಮತದಾನವಾಗಿದೆ ಎಂದು ಪರಾಜಿತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ ಗೌಡ ಜನಾಲಿ ಮಾಧ್ಯಮಗಳಿಗೆ ತಿಳಿಸಿದರು.

news18-kannada
Updated:November 27, 2020, 2:23 PM IST
ಬಾಗಲಕೋಟೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಯಲ್ಲಿ ಬಹುಮತವಿದ್ದರೂ ಬಿಜೆಪಿಗೆ ಸೋಲು
ಸಾಂದರ್ಭಿಕ ಚಿತ್ರ
  • Share this:
ಬಾಗಲಕೋಟೆ (ನವೆಂಬರ್ 27): ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷ ಚುನಾಯಿತರಾಗಿದ್ದು, ಅಡ್ಡಮತದಾನ, ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್ ಬೆಂಬಲಿತರಿಗೆ ಜಯ ಲಭಿಸಿದೆ ಎಂದು ಗುಟ್ಟಾಗಿರದ ಮಾತು ಸಾಬೀತಾಗಿದೆ. ಮೂರನೇ ಬಾರಿಗೆ ಅಧ್ಯಕ್ಷರಾಗಿ ಅಜಯ್ ಕುಮಾರ್ ಸರನಾಯಕ, ಉಪಾಧ್ಯಕ್ಷರಾಗಿ ಮುರುಗೇಶ್ ಕಡ್ಲಿಮಟ್ಟಿ ಆಯ್ಕೆಯಾಗಿದ್ದು,  ಪ್ರತಿಷ್ಠಿತ ಬಿಡಿಸಿಸಿ ಅಧಿಕಾರ ಭಾಗ್ಯ  ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಈ ಬಾರಿ ಶತಾಯಗತಾಯವಾಗಿ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿಗರಿಗೆ ಮುಖಭಂಗವಾಗಿದೆ.

ಬಿಜೆಪಿ ಬೆಂಬಲಿತರಿಗೆ ಬೀಳಬೇಕಿದ್ದ 8ಮತಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಬಿಜೆಪಿ ಪಾಳಯದಲ್ಲಿ ಪಕ್ಷ ನಿಷ್ಠೆಗಿಂತ ಜಾತಿ ನಿಷ್ಠೆ ಮುಖ್ಯ ಎನ್ನುವುದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ  ತೋರಿದ್ದು ಚರ್ಚಿತ ವಿಷಯವಾಗಿದೆ.

ಅಡ್ಡಮತದಾನದ ಹೊಡೆತ ಎರಡಂಕಿಯಾಟದಲ್ಲಿ ಬಿಜೆಪಿಗೆ ಮುಖಭಂಗ!

ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಒಟ್ಟು 13,ಓರ್ವ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರಿ ಸಂಘಗಳ ಉಪನಿಬಂಧಕರು,ರಾಜ್ಯ ಸರ್ಕಾರದ ನಾಮನಿರ್ದೇಶನ ಮತ ಸೇರಿ ಒಟ್ಟು 16 ಮತಗಳಲ್ಲಿ 15ಮತ ಚಲಾವಣೆಗೊಂಡಿದ್ದವು.ಆದರೆ ರಾಜ್ಯ ಸರ್ಕಾರದ ನಾಮನಿರ್ದೇಶನ ನಿರ್ದೇಶಕ ಸಿದ್ದನಗೌಡ ಪಾಟೀಲ್ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿತ ಅಜಯ್ ಕುಮಾರ್ ಸರನಾಯಕ ಧಾರವಾಡ ಹೈಕೋರ್ಟ್ ನಲ್ಲಿ ಬಿಡಿಸಿಸಿ ಬ್ಯಾಂಕ್ ನಲ್ಲಿ ರಾಜ್ಯ ಸರ್ಕಾರದ ಷೇರು ಬಂಡವಾಳ ಇಲ್ಲ.

ಹಾಗಾಗಿ ನಾಮನಿರ್ದೇಶನ ಮಾಡುವುದಕ್ಕೆ ಬರುವುದಿಲ್ಲವೆಂದು ಅರ್ಜಿ ಸಲ್ಲಿಸಿದ್ದರು.ನವೆಂಬರ್ 25ರಂದು ಧಾರವಾಡ ಹೈಕೋರ್ಟ್ , ರಾಜ್ಯ ಸರ್ಕಾರದ ನಾಮನಿರ್ದೇಶನ ನಿರ್ದೇಶಕ ಮತ ಹೊರತು ಪಡಿಸಿ ಉಳಿದ ಮತ ಎಣಿಕೆಗೆ ಅವಕಾಶ ಕಲ್ಪಿಸಿ ಆದೇಶಿಸಿತ್ತು. ಇವತ್ತು ಬಿಡಿಸಿಸಿ ಬ್ಯಾಂಕ್ ನಲ್ಲಿ ಬೆಳಿಗ್ಗೆ 11ಗಂಟೆಗೆ ಮತ ಎಣಿಕೆ ಕಾರ್ಯ ಚುನಾವಣಾಧಿಕಾರಿ ಎಂ ಗಂಗಪ್ಪ ನೇತೃತ್ವದಲ್ಲಿ ನಡೆಯಿತು.

ಮತ ಎಣಿಕೆ ಯಾದ 14ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಜಯ್ ಕುಮಾರ್ ಸರನಾಯಕ-8, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುರುಗೇಶ್ ಕಡ್ಲಿಮಟ್ಟಿ-8ಮತಗಳು, ಹಾಗೂ ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ ಗೌಡ ಜನಾಲಿ-6, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ತಪಶೆಟ್ಟಿಗೆ-6ಮತಗಳು ಬಂದಿದ್ದು,ಎರಡು ಮತಗಳಿಂದ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎನ್ನುವುದು ಎರಡಂಕಿಯ ಮೇಲೆ ನಿಂತಿತ್ತು. ಬಿಜೆಪಿ ಬೆಂಬಲಿತ ಇಬ್ಬರು ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಿಗೆ ಮತ ಚಲಾಯಿಸಿದ್ದು,ಬಿಡಿಸಿಸಿ ಬ್ಯಾಂಕ್ ನಲ್ಲಿ ಜಾತಿ ನಿಷ್ಠೆ ವರ್ಕೌಟ್ ಆಗಿದೆ‌‌.ರೆಡ್ಡಿ ಸಮುದಾಯಕ್ಕೆ ಸೇರಿದ ಅಜಯ್ ಕುಮಾರ್ ಸರನಾಯಕ ಮೂರನೇ ಬಾರಿಗೆ ಬಿಡಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.ಧಣಿ ಹಿಡಿತದಲ್ಲಿ ಬಿಡಿಸಿಸಿ ಬ್ಯಾಂಕ್ ಇರಬೇಕು ಎನ್ನುವ ಒಂದೇ ಒಂದು ಕಾರಣಕ್ಕೆ ಪಕ್ಷ ನಿಷ್ಠೆ ಮಕಾಡೆ ಮಲಗಿದೆ..ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಭಾಗ್ಯವಿಲ್ಲ;

ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸೇರಿದಂತೆ ಜಿಲ್ಲೆಯಲ್ಲಿ ಘಟಾನುಘಟಿ ಬಿಜೆಪಿ ನಾಯಕರಿದ್ದಾರೆ. ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಗೆ ಅಧಿಕಾರ ತಪ್ಪುತ್ತಿದೆ ಎಂದು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿರುವ ಮಾತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲೂ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಆಗಲಿಲ್ಲ.

ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತೆ ಹೊಂದಾಣಿಕೆ ರಾಜಕಾರಣ,ಜಾತಿ ಪ್ರತಿಷ್ಠೆ ಎನ್ನುವುದು ಸಾಬೀತಾಗಿದೆ. ಈ ಬಾರಿ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಬಿಜೆಪಿಗೆ ತೆಗೆದುಕೊಳ್ಳಲು ಸಿಎಂ ಬಿಎಸ್ವೈ ಸೂಚನೆ ಮೇರೆಗೆ  ಡಿಸಿಎಂ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ಎರಡುದಿನ ಠಿಕಾಣಿ ಹೂಡಿ, ಬಿಜೆಪಿ ಬೆಂಬಲಿತ ನಿರ್ದೇಶಕರು, ಶಾಸಕರೊಂದಿಗೆ ಸಭೆ ನಡೆಸಿದ್ದರು.ಇದೀಗ ಬಿಜೆಪಿ ಬೆಂಬಲಿತರಿಗೆ ಅಧಿಕಾರ ಭಾಗ್ಯ ಸಿಗದಿರುವುದು ಡಿಸಿಎಂ ಗೋವಿಂದ ಕಾರಜೋಳರಿಗೂ ಮುಖಭಂಗವಾದಂತಾಗಿದೆ.

ಈ ಸೋಲು ನಮ್ಮ ಸೋಲು ಅಲ್ಲ ನಮ್ಮ ಜಿಲ್ಲಾ ವರಿಷ್ಠರು, ಡಿಸಿಎಂ ಗೋವಿಂದ ಕಾರಜೋಳರ ಸೋಲು,ಸೋಲಿನ ಪರಾಮರ್ಶೆಗೆ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ಫಲಿತಾಂಶ ಪ್ರಕಟದ ಬಳಿಕ ಪರಾಜಿತ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಪ್ರಕಾಶ್ ತಪಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದರು.

ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮಗೆ ಬರಬೇಕಿದ್ದ 8ಮತಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಈ ಬಗ್ಗೆ ವರಿಷ್ಠರು  ಚರ್ಚೆ ನಡೆಸಬೇಕೆಂದು ಪರೋಕ್ಷವಾಗಿ ಅಡ್ಡಮತದಾನವಾಗಿದೆ ಎಂದು ಪರಾಜಿತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ ಗೌಡ ಜನಾಲಿ ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ : ವಿಜಯನಗರ ಜಿಲ್ಲೆಗೆ 6 ತಾಲೂಕು ಸೇರ್ಪಡೆ; ಶಿವಮೊಗ್ಗ ವಿಮಾನ ನಿಲ್ದಾಣದ ಅನುದಾನ 384 ಕೋಟಿ ರೂ.ಗೆ ಏರಿಕೆ

ಗೆಲುವಿಗೆ ಸಹಕರಿಸಿದ ಎಲ್ಲ ನಿರ್ದೇಶಕರಿಗೂ ಧನ್ಯವಾದಗಳು!

ನೂತನವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಜಯ್ ಕುಮಾರ್ ಸರನಾಯಕ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಗೆಲುವಿಗೆ ಸಹಕರಿಸಿದ ಎಲ್ಲ ನಿರ್ದೇಶಕರಿಗೂ ಧನ್ಯವಾದಗಳು,ಇದು ಸಹಕಾರಿ ಕ್ಷೇತ್ರದ ಚುನಾವಣೆ,ಇಲ್ಲಿ ಪಕ್ಷ ಬರುವುದಿಲ್ಲ.ಬ್ಯಾಂಕ್  ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಅಡ್ಡಮತದಾನ, ಆಪರೇಷನ್ ಹಸ್ತ ವಿಚಾರವನ್ನು ಅಲ್ಲಗಳೆದರು. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗೈರಾದ ವಿಜಯಾನಂದ ಕಾಶಪ್ಪನವರ್ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ.ಚುನಾವಣೆ ವೇಳೆ ಮತ ಚಲಾಯಿಸುವಂತೆ ನಾವೆಲ್ಲರೂ ಕೇಳಿದ್ದೇವೆ.ಆದರೆ ಅವರು ಮತ ಚಲಾಯಿಸಿಲ್ಲವೆಂದರು‌. ಫಲಿತಾಂಶ ಪ್ರಕಟಣೆೆೆ ಬಳಿಕ ಕಾಂಗ್ರೆಸ್ಸಿಗರು ಪಟಾಕಿ ಸಿಡಿಸಿ,ಗುಲಾಲ ಎರಚಿ ಸಂಭ್ರಮಿಸಿದರು.

ಒಟ್ಟಿನಲ್ಲಿ ,  ಕಾಂಗ್ರೆಸ್ ತಂತ್ರ ರೂಪಿಸಿ, ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಬಿಜೆಪಿ ಪಕ್ಷದಲ್ಲಿ ಅಡ್ಡಮತದಾನ ಮಾಡಿರುವ ಇಬ್ಬರು ನಿರ್ದೇಶಕರ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.ಆದರೆ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪಕ್ಷ ನಿಷ್ಠೆ ಗಿಂತ ಜಾತಿ ಪ್ರೇಮ ಮುಖ್ಯ ಎನ್ನುವುದು ಸಂದೇಶ ರವಾನಿಸಿದ್ದು, ಬಿಜೆಪಿ ಜಿಲ್ಲಾ ವರಿಷ್ಠರು, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ  ಮುನಿಸಿಕೊಂಡು  ಮತದಾನದಿಂದ ಗೈರಾಗಿದ್ದ ವಿಜಯಾನಂದ ಕಾಶಪ್ಪನವರ್ ಗೆ ಜಾತಿ ಟ್ರಂಪ್ ಕಾರ್ಡ್ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಏನೇ ಆಗಲಿ ರೈತರ ಅಭಿವೃದ್ಧಿಯಾಗಲಿ,ರಾಜಕೀಯ ತಿಕ್ಕಾಟ ಕೊನೆಯಾಗಲಿ ಎನ್ನುವುದು ಎಲ್ಲರ ಆಶಯ.
Published by: MAshok Kumar
First published: November 27, 2020, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading