BJP Infight- ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ; ಬಿಜೆಪಿ ನಾಯಕರಲ್ಲೇ ಜಗಳ

ಶಿರಾ ತಾಲೂಕಿನಲ್ಲಿರುವ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರದ ಬಗ್ಗೆ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹಾಗೂ ಸಚಿವ ಮಾಧು ಸ್ವಾಮಿ ಮಧ್ಯೆ ಭಿನ್ನಾಭಿಪ್ರಾಯ ಬಂದಿದೆ. ಇಬ್ಬರ ಜಗಳದಲ್ಲಿ ಮದಲೂರು ಕೆರೆ ಬಡವಾಗುತ್ತಿದೆಯೇ?

ತುಮಕೂರಿನ ಶಿರಾ ತಾಲೂಕಿನಲ್ಲಿರುವ ಮದಲೂರು

ತುಮಕೂರಿನ ಶಿರಾ ತಾಲೂಕಿನಲ್ಲಿರುವ ಮದಲೂರು

  • Share this:
ತುಮಕೂರು: ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆಯೇ ಈಗ ಜಗಳ‌ ಶುರುವಾಗಿದೆ. ಹೇಮಾವತಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಪುನರುಚ್ಚರಿಸಿದ್ದಾರೆ. ಆದ್ರೆ ಸಂಸದ ಜಿ.ಎಸ್‌ ಬಸವರಾಜು ಅವರು ಮಾಧುಸ್ವಾಮಿಗೆ ಅಧಿಕಾರಿಗಳು ದಾರಿತಪ್ಪಿಸಿದ್ದಾರೆ ಎಂದಿದ್ದಾರೆ. ರಾಜಕೀಯ ನಾಯಕರ ಹಾವು ಏಣಿ ಆಟದಿಂದ ಶಿರಾ ಜನರು ನಲುಗಿ ಹೋಗಿದ್ದಾರೆ.

ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ಈಗ ಬಿಜೆಪಿ ನಾಯಕರಲ್ಲೇ ಜಗಳ ತಾರಕಕ್ಕೇರೋ ಸಾಧ್ಯತೆ ಹೆಚ್ಚಾಗಿದೆ. ತುಮಕೂರು ಉಸ್ತುವಾರಿ ಸಚಿವ ಮಾಧುಸ್ವಾಮಿ ಯಾವುದೇ ಕಾರಣಕ್ಕೂ ನೀರು ಬೀಡಲು ಸಾಧ್ಯವಿಲ್ಲ ಎಂದರೆ. ಮದಲೂರು ಕೆರೆಗೆ ನೀರು ಹರಿಸಲು ಸಾಧ್ಯವಿದೆ ಎಂದು ತುಮಕೂರು ಸಂಸದ ಜಿ.ಎಸ್‌ ಬಸವರಾಜು ಹೇಳಿದ್ದಾರೆ. ಶಿರಾ ತಾಲ್ಲೂಕಿಗೆ 0.9 ಟಿಎಂಸಿ ನೀರು ಹಂಚಿಕೆಯಾಗಿದೆ. ತಾಲ್ಲೂಕಿನ ಕಳ್ಳಂಬೆಳ್ಳ ಹಾಗೂ ಶಿರಾ ನಗರದ ಕೆರೆಗಳನ್ನು ತುಂಬಿಸಿದರೂ 350 ಎಂಟಿಎಫ್‌ ನೀರು ಉಳಿಯುತ್ತದೆ. ಆ 350 ಎಂಟಿಎಫ್‌ ನೀರನ್ನು ಮದಲೂರು ಕೆರೆಗೆ ಹರಿಸಬಹುದು ಎಂದು ಸಂಸದರು ಹೇಳಿದ್ದಾರೆ. ಸಚಿವ ಮಾಧುಸ್ವಾಮಿ ಅವರಿಗೆ ನೀರು ಹರಿಸುವ ವಿಚಾರದಲ್ಲಿ ಅಧಿಕಾರಿಗಳು ದಿಕ್ಕು ತಪ್ಪಿಸಿದ್ದಾರೆ ಎಂದು ಸಂಸದ ಜಿ.ಎಸ್.‌ ಬಸವರಾಜು ಹೇಳಿದ್ದಾರೆ.

ಇನ್ನೊಂದೆಡೆ, ಮೊದಲಿನಿಂದಲ್ಲೂ ಶಿರಾ ಮದಲೂರು ಕೆರೆ ನೀರು ಹರಿಸುವುದನ್ನು ವಿರೋಧಿಸಿಕೊಂಡು ಬರುತ್ತಿರುವ ಸಚಿವ ಮಾಧುಸ್ವಾಮಿ, ಇದೀಗ ಮತ್ತೊಮ್ಮೆ ಮದಲೂರು ಕೆರೆ ಹೇಮಾವತಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ್ದಾರೆ. ನೀರು ಬಿಡಲು ಇರುವ ಅಡೆತಡೆಗಳನ್ನು ಹೈಕೋರ್ಟ್‌ ನೀಡಿರುವ ಆದೇಶದ ಆಧಾರದ ಮೇಲೆ ಮಾಧುಸ್ವಾಮಿ ವಿಶ್ಲೇಷಿಸಿದ್ದಾರೆ. ಶಿರಾ ತಾಲ್ಲೂಕಿಗೆ ಹಂಚಿಕೆಯಾಗಿರುವ 0.9 ಟಿಎಂಸಿ ನೀರನ್ನು ಆ ಭಾಗಕ್ಕೆ ಬಳಸಿಕೊಳ್ಳುವಂತೆ ಹೈಕೋರ್ಟ್ ಹೇಳಿದೆ. ಹಂಚಿಕೆಯಾಗಿರುವ ನೀರನ್ನು ಕಳ್ಳಂಬೆಳ್ಳ ಕೆರೆಗೆ ತುಂಬಿಸಿ, ಶಿರಾ ಕೆರೆಗೆ ನೀರು ಹರಿಸುವುದರ ಒಳಗೆ ಮುಗಿದು ಹೋಗುತ್ತದೆ. ಮದಲೂರು ಕೆರೆಗೆ ಎಲ್ಲಿಂದ ನೀರು ಕೊಡುವುದು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Ex Mayor Tea Seller- ಫುಟ್​ಪಾತ್​ನಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿರುವ ಮಾಜಿ ಮೇಯರ್

ಇದು ಕಾಂಗ್ರೆಸ್ ಮುಖಂಡ ಟಿ.ಬಿ. ಜಯಚಂದ್ರ ಅವರ ರಾಜಕೀಯ ದಾಳ‌ ಎಂದು ವಿಶ್ಲೇಷಿಸುವ ಮಾಧುಸ್ವಾಮಿ, ಜಯಚಂದ್ರ ಅವರು ಶಿರಾ ಕೆರೆಗೆ ನೀರು ಬಿಡುವುದು ಬೇಡ. ಅದೇ ನೀರನ್ನು ಮದಲೂರು ಕೆರೆಗೆ ಹರಿಸಿ ಎಂದು ಹೇಳಿದರೆ ಆಗ ಮಾತ್ರ ನೀರು ಬಿಡಬಹುದು. ಇದಕ್ಕೆ ಶಿರಾ ನಗರದ ಜನರನ್ನು ಒಪ್ಪಿಸಿಕೊಂಡು ಬರಲಿ ಎಂದು ಮಾಧುಸ್ವಾಮಿ ಸವಾಲು ಹಾಕಿದ್ದಾರೆ. ಅಲ್ಲದೆ ಅಧಿಕಾರಿಗಳು ನನ್ನನ್ನು ದಿಕ್ಕು ತಪ್ಪಿಸಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ಬಿಜೆಪಿ ಸಂಸದ ಜಿ.ಎಸ್‌. ಬಸವರಾಜುಗೆ ಟಾಂಗ್‌ ನೀಡಿದ್ದಾರೆ.

ಅಲ್ಲದೇ ನೀರು ಬಿಡೋದಕ್ಕೆ ಅವಕಾಶ ಇದೆ ಅಂತ ಸಂಸದರೇ ನನಗೆ ಹೇಳಬಹುದಿತ್ತು. ಶಿರಾ ನಗರದಲ್ಲಿ 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಅಲ್ಲಿನ ಜನರು ಕುಡಿಯಲು ಕೆರೆ ನೀರನ್ನೇ ಆಶ್ರಯಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಶಿರಾ ಕೆರೆಗೆ ಬಿಡದೆ ಬೇರೆಡೆಗೆ ಕೊಡಲು ಸಾಧ್ಯವಿಲ್ಲ. ಮದಲೂರು ಕೆರೆ ಬಳಿ ಕುಡಿಯುವ ನೀರು ಸರಬರಾಜು ಮಾಡಲು ಯಾವ ವ್ಯವಸ್ಥೆ ಮಾಡಿಕೊಂಡಿದ್ದಾರೆ? ಸುಮ್ಮನೆ ಕೆರೆಗೆ ಬಿಡಲಾಗುತ್ತದೆಯೆ? ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲೇ ನೀರು ಕೊಡಲು ಸಾಧ್ಯವಿಲ್ಲ. ಶಿರಾ–ಮದಲೂರು ನಾಲೆ ಮಧ್ಯದಲ್ಲಿ ಸಾಕಷ್ಟು ಬ್ಯಾರೇಜ್‌ಗಳನ್ನು ಜಯಚಂದ್ರ ನಿರ್ಮಿಸಿದ್ದಾರೆ. ಈ ಬ್ಯಾರೇಜ್‌ಗಳನ್ನು ತುಂಬಿಸಿ ಮುಂದಕ್ಕೆ ನೀರು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ. ಬ್ಯಾರೇಜ್‌ಗಳನ್ನು ತೆರವುಮಾಡಿ, ಪೈಪ್‌ಲೈನ್ ನಿರ್ಮಿಸಿದರೆ ಈಗಲೂ ನೀರು ಬಿಡಲು ಸಿದ್ಧ. ಆಗ ಬೇಕಾದರೆ ರಾಜಿಮಾಡಿಕೊಳ್ಳುತ್ತೇನೆ. ಈಗ ಪೈಪ್‌ಲೈನ್ ನಿರ್ಮಿಸಿ, ನೀರು ಬಿಡುವುದು ಅಸಾಧ್ಯದ ಕೆಲಸ. ಅವರು ಮಾಡಿದ ಅವಾಂತರದಿಂದ ಇಷ್ಟೆಲ್ಲ ಸಮಸ್ಯೆಗಳಾಗಿವೆ ಎಂದು ಟಿ ಬಿ ಜಯಚಂದ್ರ ವಿರುದ್ಧ ಮಾಧುಸ್ವಾಮಿ ಕಿಡಿಕಾರಿದ್ದಾರೆ. ಒಟ್ಟಾರೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪದಿಂದ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಜೀವಂತವಾಗಿದೆ.

ವರದಿ: ವಿಠಲ್ ಕುಮಾರ್
Published by:Vijayasarthy SN
First published: