ಧರ್ಮ ಒಡೆದವರಿಗೆ ಬಿಜೆಪಿ ಸೇರಲು ಹೈಕಮಾಂಡ್ ಒಪ್ಪಲ್ಲ: ವಿಜುಗೌಡ ಎಸ್. ಪಾಟೀಲ

ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಲಿಂಗಾಯತ ನಾಯಕರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ವಿಜುಗೌಡ ಪಾಟೀಲ್, ಧರ್ಮ ಒಡೆದವರಿಗೆ ಪಕ್ಷದಲ್ಲಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ವಿಜುಗೌಡ ಎಸ್ ಪಾಟೀಲ್

ವಿಜುಗೌಡ ಎಸ್ ಪಾಟೀಲ್

  • Share this:
ವಿಜಯಪುರ(ಅ. 13): ಧರ್ಮ ಒಡೆದವರನ್ನು ಮತ್ತು ಜಗದ್ಗುರುಗಳ ಮೇಲೆ ಚಪ್ಪಲಿ ಎಸೆದವರನ್ನು ಬಿಜೆಪಿ ಪಕ್ಷಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಎಸ್. ಪಾಟೀಲ ಹೇಳಿದರು. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯಿತ ನಾಯಕರಿಗೆ ಬಿಜೆಪಿ ಗಾಳ ಹಾಕಿದೆ ಎಂಬ ಮಾಹಿತಿಯ ಕುರಿತು ಪ್ರತಿಕ್ರಿಯೆ ನೀಡಿದರು. ಧರ್ಮ ಒಡೆದವರನ್ನು ಮತ್ತು ಜಗದ್ಗುರಗಳ ಮೇಲೆ ಚಪ್ಪಲಿ ಒಗೆದವರನ್ನು ಬಿಜೆಪಿ ಹೈಕಮಾಂಡ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದರು.

ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಿನ ಅಧಿಕಾರಿಗಳು ವಿಜಯಪುರ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯ ಮುಖಂಡರೇ ಬೆಂಬಲ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೆಸರು ಹೇಳದೆ ವಿಜುಗೌಡ ಎಸ್. ಪಾಟೀಲ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ವಿಜಯಪುರದ ಡೋಣಿ ನದಿ ಪ್ರವಾಹ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಸುನಿಲಗೌಡ ಭೇಟಿ; ರೈತರು, ಸಂತ್ರಸ್ತರಿಗೆ ಸಾಂತ್ವನ

ಕಾಂಗ್ರೆಸ್ ಅವಧಿಯಲ್ಲಿದ್ದ ಅಧಿಕಾರಿಗಳೇ ಇನ್ನೂ ಜಿಲ್ಲೆಯಲ್ಲಿದ್ದಾರೆ. ನಮ್ಮ ಪಕ್ಷದ ಕೆಲವರಿಗೆ ಬುದ್ದಿಯಿಲ್ಲ. ಅದೇ ಅಧಿಕಾರಿಗಳು ನಮಗೆ ತುಳಿಯುತ್ತಿರುವುದು ಗೊತ್ತಾಗುತ್ತಿಲ್ಲ. ಕೆಲ ಅಧಿಕಾರಿಗಳು ಬೇರೂರಿದ್ದು ಅವರನ್ನು ಎತ್ತಂಗಡಿ ಮಾಡಬೇಕು. ನಮ್ಮ ಪಕ್ಷದಲ್ಲಿನ ಕೆಲವರ ಹೊಂದಾಣಿಕೆ ರಾಜಕಾರಣದಿಂದ ಹೀಗಾಗುತ್ತಿದೆ. ಹೊಂದಾಣಿಕೆ ರಾಜಕಾರಣದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಎಂ. ಬಿ. ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬಬಲೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಸಿಎಂ ಯಡಿಯೂರಪ್ಪ ಕಾರಣ. ಸಿಎಂಗೆ ನಾನು ಮನವಿ ಮಾಡಿದ ಹಿನ್ನೆಲೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.  ಅದನ್ನೇ ತಾವು ಮಾಡಿದ್ದಾಗಿ ಕಾಂಗ್ರೆಸ್ ಶಾಸಕರು ಕರಪತ್ರ ಹಂಚುತ್ತಿರುವುದು ನಾಚಿಕೆಗೇಡು. ಬಬಲೇಶ್ವರ ಮತಕ್ಷೇತ್ರದ ಅಭಿವೃದ್ಧಿ ವಿಷಯದಲ್ಲೂ ಕೇಂದ್ರ ಸರಕಾರದ ಯೋಜನೆಯನ್ನೂ ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಾರೆ. ರೂ.75 ಲಕ್ಷ ವೆಚ್ಚದ ಎಪಿಎಂಸಿ ಮಾರುಕಟ್ಟೆಯನ್ನು ನಾನು ಮಂಜೂರು ಮಾಡಿಸಿದ್ದೇನೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಬೇರೆ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿದ್ದು ಖೇದಕರ ಎಂದು ಹೇಳಿದರು.

ಇದನ್ನೂ ಓದಿ: ನಿಗದಿಯಾಗದ ಕಬ್ಬಿನ ಎಫ್​​​.ಆರ್.ಪಿ ದರ ; ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳ ತಯಾರಿಗೆ ರೈತರ ಆಕ್ರೋಶ

ರಾಜಕೀಯವಾಗಿ ನಾನು ಸೋತಿರಬಹುದು. ಆದರೆ ನಾನೆಂದೂ ಬಬಲೇಶ್ವರ ಕ್ಷೇತ್ರದ ಜನರ ಮನಸಲ್ಲಿ ಎಂದಿಗೂ ಸೋತಿಲ್ಲ. ಪ್ರೊಟೊಕಾಲ್ ಪ್ರಕಾರ ಭೂಮಿ ಪೂಜೆ ನೆರೆವೇರಿಸಲಿ. ಶಾಸಕರು ತಮ್ಮ ಪುತ್ರನಿಂದ ಭೂಮಿ ಪೂಜೆ ನೆರವೇರಿಸಿದ್ದು ಯಾವ ನ್ಯಾಯ? ಪ್ರೊಟೊಕಾಲ್ ಎಂದರೆ ಇದೇನಾ? ಜನ ಮತ ಹಾಕಿದ್ದು ಯಾರಿಗೆ? ತಾ.ಪಂ., ಜಿ. ಪಂ. ಸದಸ್ಯರಿಲ್ಲದೇ ತಮ್ಮದೇ ಕುಟುಂಬ ಸದಸ್ಯರೆಲ್ಲರೂ ಗುದ್ದಲಿ ಪೂಜೆ ಮಾಡುವುದು ಪ್ರೋಟೋಕಲ್ ಆಗುತ್ತಾ? ಎಂದು ವಿಜುಗೌಡ ಎಸ್. ಪಾಟೀಲ ವಾಗ್ದಾಳಿ ನಡೆಸಿದರು.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: