ಬಾಗಲಕೋಟೆ(ಸೆ. 23): ಮಾಜಿ ಸಚಿವ ಮುರುಗೇಶ್ ನಿರಾಣಿ ಸಕ್ಕರೆ ಕಾರ್ಖಾನೆಗಳ ರಾಜರಾಗಿದ್ದಾರೆ. ಮಂಡ್ಯದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನ ವಹಿಸಿಕೊಂಡಿದ್ದ ಇವರು ಇದೀಗ ಸಿದ್ದರಾಮಯ್ಯ ಮತಕ್ಷೇತ್ರ ಬಾದಾಮಿಯಲ್ಲಿ ಎರಡು ಕಾರ್ಖಾನೆಗಳನ್ನ ಖರೀದಿಸಿದ್ದಾರೆ. ಕಳೆದ 15 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಾದಾಮಿ ಶುಗರ್ಸ್ ಹಾಗೂ ಕೇದಾರನಾಥ್ ಶುಗರ್ಸ್ ಕಂಪನಿಗಳು ಈಗ ನಿರಾಣಿ ತೆಕ್ಕೆಗೆ ಬಂದಿವೆ. ಇದೀಗ ಬಾಗಲಕೋಟೆಯಲ್ಲಿ ನಿರಾಣಿ ಅವರ ಮಾಲಿಕತ್ವದಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಇದ್ದಂತಾಗಿದೆ. ಎಂಆರ್ಎನ್ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ಮುಂದಾಳತ್ವದಲ್ಲಿ ಬಾದಾಮಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಿದ್ದತೆಗಳು ಭರದಿಂದ ಸಾಗಿದೆ. ಸ್ಥಗಿತಗೊಂಡಿದ್ದ ಸಕ್ಕರೆ ಕಾರ್ಖಾನೆ ಮತ್ತೆ ಕಬ್ಬು ಅರಿಯಲು ಮುಂದಾಗಿರುವುದು ರೈತ ಸಮೂಹದಲ್ಲಿ ಹೊಸ ಆಶಾಭಾವ ಮೂಡಿಸಿದೆ.
ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಸಾರಥ್ಯದಲ್ಲಿ ಬಾದಾಮಿ ಬಳಿ ಬಾದಾಮಿ ಶುಗರ್ಸ್ ಲಿಮಿಟೆಡ್ನಿಂದ ಸಕ್ಕರೆ ಕಾರ್ಖಾನೆ ಆರಂಭಗೊಂಡಿತ್ತು. ಕಾರ್ಖಾನೆ ಆರಂಭಗೊಂಡ ಒಂದೆರಡು ವರ್ಷಗಳಲ್ಲೇ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಬ್ಬು ಅರಿಯದೇ ಕಾರ್ಖಾನೆ ತುಕ್ಕು ಹಿಡಿದಿತ್ತು. ಅಂದಿನಿಂದ ಇಂದಿನವರೆಗೂ ಬಾದಾಮಿ ಸುತ್ತಮುತ್ತಲಿನ ಜನತೆ ಕಾರ್ಖಾನೆ ಮೇಲಿನ ಭರವಸೆಯನ್ನೇ ಕಳೆದುಕೊಂಡಿದ್ದರು. ಕಬ್ಬು ಬೆಳೆದ ರೈತರು ಇತರೆ ಸಕ್ಕರೆ ಕಾರ್ಖಾನೆಗಳಿಗೆ ಸಾಗುತ್ತಿದ್ದಾರೆ. ಇದೀಗ ಸ್ಥಗಿತಗೊಂಡಿರುವ ಬಾದಾಮಿ ಶುಗರ್ಸ್ ಕಾರ್ಖಾನೆಯನ್ನು ಎಂಆರ್ಎನ್ ನಿರಾಣಿ ಉದ್ಯಮ ಸಮೂಹ ಸಂಸ್ಥೆ ಹರಾಜು ಪ್ರಕ್ರಿಯೆಯಲ್ಲಿ ತನ್ನ ಸುಪರ್ದಿಗೆ ತೆಗೆದುಕೊಂಡು ಪುನಶ್ಚೇತನಗೊಳಿಸಿ ಆರಂಭಿಸಲು ಮುಂದಾಗಿದೆ.
ಬಾದಾಮಿ ತಾಲೂಕಿನಲ್ಲಿ ಈ ಹಿಂದೆ ಆರಂಭವಾಗಿದ್ದ ಬಾದಾಮಿ ಶುಗರ್ಸ್, ಕೆರಕಲಮಟ್ಟಿ ಗ್ರಾಮದ ಕೇದರನಾಥ ಶುಗರ್ಸ್ ಆರ್ಥಿಕ ಮುಗ್ಗಟ್ಟಿನಿಂದ ಬಂದ್ ಆಗಿದ್ದವು. ವರ್ಷದ ಹಿಂದೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿಯಲ್ಲಿ ಮುರುಗೇಶ್ ನಿರಾಣಿ ಒಡೆತನದಲ್ಲಿ ಸಕ್ಕರೆ ಕಾರ್ಖಾನೆಯೊಂದು ತಲೆ ಎತ್ತಿ, ಯಶಸ್ವಿಯಾಗಿ ನಡೆದಿದೆ. ಅದರ ಬೆನ್ನಲ್ಲೇ ಬಾದಾಮಿ ತಾಲೂಕಿನಲ್ಲಿ ಬಂದ್ ಆಗಿದ್ದ ಬಾದಾಮಿ ಶುಗರ್ಸ್, ಕೆರಕಲಮಟ್ಟಿ ಗ್ರಾಮದಲ್ಲಿನ ಕೇದಾರನಾಥ್ ಶುಗರ್ಸ್ ಈ ಎರಡು ಕಾರ್ಖಾನೆಯನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಖರೀದಿಸಿದ್ದಾರೆ. ಈ ಎರಡು ಸಕ್ಕರೆ ಕಾರ್ಖಾನೆ ಆರಂಭಿಸುವುದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Belagavi: 6 ತಿಂಗಳ ಬಳಿಕ ಮಹಾರಾಷ್ಟ್ರಕ್ಕೆ ಬೆಳಗಾವಿಯಿಂದ ಬಸ್ ಸಂಚಾರ ಆರಂಭ
ಬಾದಾಮಿ ಶುಗರ್ಸ್ ಕಾರ್ಖಾನೆಯಲ್ಲಿ ಸದ್ಯ ಕಾರ್ಮಿಕರು ಅಹೋರಾತ್ರಿ ಕಾರ್ಖಾನೆಯನ್ನು ಕಬ್ಬು ಅರಿಯುವಿಕೆಗೆ ಸಜ್ಜುಗೊಳಿಸುತ್ತಿದ್ದಾರೆ. ಪ್ರಸಕ್ತ ಹಂಗಾಮಿನಲ್ಲೇ ಸಕ್ಕರೆ ಉತ್ಪಾದನೆ ಆರಂಭಿಸಲಿದೆ ಎನ್ನುವ ಅಂಶ ಕಬ್ಬು ಬೆಳೆಗಾರರಲ್ಲಿ, ನಿರುದ್ಯೋಗಿ ಯುವಕರಲ್ಲಿ ಉತ್ಸಾಹ ಮೂಡಿಸಿದೆ. ಜೊತೆಗೆ ಕಾರ್ಖಾನೆಗೆ ಬೇಕಾದ ಕಾರ್ಮಿಕರ ನೇಮಕಾತಿ ಕೂಡಾ ನಡೆಯುತ್ತಿದೆ. ಮಹಾಮಾರಿ ಕೊರೋನಾದಿಂದಾಗಿ ವಿಶ್ವವೇ ಆರ್ಥಿಕ ದುಸ್ಥಿತಿಯಿಂದ ಬಳಲಿ, ಯುವ ಸಮೂಹ ಉದ್ಯೋಗ ಕಳೆದುಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತಿರುವಾಗ ನಿರಾಣಿ ಸಹೋದರರು ಅತ್ಯಂತ ಮುತುವರ್ಜಿ ವಹಿಸಿ ಕಾರ್ಖಾನೆ ಆರಂಭಕ್ಕೆ ಮನಸ್ಸು ಮಾಡಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಸ್ಥಗಿತಗೊಂಡಿದ್ದ ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭಿಸಿರುವ ಎಂಆರ್ಎನ್ ನಿರಾಣಿ ಉದ್ಯಮ ಸಂಸ್ಥೆ, ಅದೇ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಸ್ಥಗಿತಗೊಂಡಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಮುಂದಾಗಿದ್ದಾರೆ. ಈಗ ತವರು ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಬಾದಾಮಿ ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಿ ಆರಂಭಿಸಲು ಹೊರಟಿದ್ದಾರೆ. ಇದು ಬಾದಾಮಿ ತಾಲೂಕು ಮತ್ತು ಸುತ್ತಲಿನ ಪ್ರದೇಶಗಳ ಕಬ್ಬು ಬೆಳೆಗಾರರಿಗೆ ವರದಾನವಾಗಲಿದೆ. ಯುವ ಸಮೂಹಕ್ಕೆ ಉದ್ಯೋಗ ಭದ್ರತೆ ಲಭ್ಯವಾಗಲಿದೆ.
ಕೆರಕಲಮಟ್ಟಿಯ ಕೇದಾರನಾಥ್ ಸಕ್ಕರೆ ಕಾರ್ಖಾನೆ ಆರಂಭಕ್ಕೂ ಪೂರ್ವ ಸಿದ್ಧತೆ ನಡೆದಿದೆ. ಬಾದಾಮಿ ತಾಲ್ಲೂಕಿನಲ್ಲೇ 50 ಕಿಲೋ ಮೀಟರ್ ಅಂತರದಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಎಂಆರ್ಎನ್ ನಿರಾಣಿ ಉದ್ಯಮ ಸಮೂಹ ಸಂಸ್ಥೆಯವರದೇ ಎನ್ನುವುದು ವಿಶೇಷ. ಬಾದಾಮಿ ತಾಲೂಕಿನ 3 ಸಕ್ಕರೆ ಕಾರ್ಖಾನೆಗಳು ಗದಗ, ಬೆಳಗಾವಿ ಜಿಲ್ಲೆ ಸೇರಿದಂತೆ ಬಾಗಲಕೋಟೆ ಜಿಲ್ಲೆ ಕಬ್ಬು ಬೆಳೆಗಾರರಿಗೆ ವರದಾನವಾಗಲಿದೆ. ಜೊತೆಗೆ ಐತಿಹಾಸಿಕ ಪ್ರವಾಸಿ ತಾಣ ಹೊಂದಿರುವ ಚಾಲುಕ್ಯರ ನಾಡು ಬಾದಾಮಿ ಇನ್ಮುಂದೆ ಸಕ್ಕರೆ ನಾಡಾಗಿಯೂ ಹೊರ ಹೊಮ್ಮಲಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಹೆಚ್ಚಾದ ಅಪರಾಧ ಪ್ರಕರಣಗಳ ಸಂಖ್ಯೆ; 20 ದಿನದ ಅಂತರದಲ್ಲಿ 12 ಜನರ ಬರ್ಬರ ಹತ್ಯೆ
ನಿರಾಣಿ ಪಾಲಿಗೆ ಬಾದಾಮಿ ರಾಜಕೀಯ ಶಕ್ತಿಕೇಂದ್ರವಾಗುತ್ತಾ!?
ಹೀಗೊಂದು ಪ್ರಶ್ನೆ ಬಾದಾಮಿ ತಾಲೂಕಿನಲ್ಲಿ ಹರಿದಾಡುತ್ತಿದೆ. ಬಾದಾಮಿ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಗ್ರಾಮಗಳು ಬೀಳಗಿ ಮತಕ್ಷೇತ್ರಕ್ಕೆ ಬರುತ್ತವೆ. ಖರೀದಿಸಿರುವ 2 ಸಕ್ಕರೆ ಕಾರ್ಖಾನೆ ಪೈಕಿ ಕೆರಕಲಮಟ್ಟಿ ಗ್ರಾಮದ ಕೇದಾರನಾಥ್ ಶುಗರ್ಸ್ ಕಾರ್ಖಾನೆ ಬೀಳಗಿ ಮತಕ್ಷೇತ್ರದಲ್ಲಿ ಬರುತ್ತದೆ. ಇನ್ನೆರಡು ಸಕ್ಕರೆ ಕಾರ್ಖಾನೆಗಳಾದ ಬಾದಾಮಿ ಶುಗರ್ಸ್, ಕುಳಗೇರಿ ಕ್ರಾಸ್ ಬಳಿಯ ಎಂಆರ್ಎನ್ ಶುಗರ್ಸ್ ಕಾರ್ಖಾನೆ ಬಾದಾಮಿ ಮತಕ್ಷೇತ್ರದಲ್ಲಿ ಬರುತ್ತವೆ. ಬಾದಾಮಿ ತಾಲ್ಲೂಕಿನಲ್ಲಿ ಕಾರ್ಖಾನೆ ಆರಂಭದೊಂದಿಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವುದರೊಂದಿಗೆ ರಾಜಕೀಯ ಶಕ್ತಿ ಕೇಂದ್ರವನ್ನಾಗಿಸುವುದು ಮುರುಗೇಶ್ ನಿರಾಣಿಯವರ ಉದ್ದೇಶ ಎನ್ನಲಾಗುತ್ತಿದೆ.
ನಿರಾಣಿ ಸಹೋದರರು ಎಂಆರ್ಎನ್ ಫೌಂಡೇಶನ್ ನಡಿ ಆರೋಗ್ಯ, ಶಿಕ್ಷಣ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾದಾಮಿಯಲ್ಲಿ ಸಕ್ಕರೆ ಕಾರ್ಖಾನೆ ಆರಂಭದ ಜೊತೆಗೆ ರಾಜಕೀಯ ಶಕ್ತಿ ಕೇಂದ್ರವನ್ನಾಗಿಸಿಕೊಂಡು ಭವಿಷ್ಯದ ದೃಷ್ಟಿಯಿಂದ ಬಾದಾಮಿ ಮತಕ್ಷೇತ್ರದ ಮೇಲೆ ನಿರಾಣಿ ಸಹೋದರರು ಕಣ್ಣಿಟ್ಟಿದ್ದಾರೆ. ಆ ಮೂಲಕ ಸಂಘಟನೆ ಮಾಡುವುದರೊಂದಿಗೆ ಬಾದಾಮಿ ಮತಕ್ಷೇತ್ರದಲ್ಲಿ ನಿರಾಣಿ ಸಹೋದರೊಬ್ಬರ ಪೈಕಿ ಒಬ್ಬರು ಮುಂದೆ ಅಖಾಡಕ್ಕಿಳಿದರೂ ಅಚ್ಚರಿಪಡಬೇಕಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸಕ್ಕರೆ ಕಾರ್ಖಾನೆಗಳು ಕಬ್ಬು ಸಿಹಿಯೊಂದಿಗೆ ಮುಂಬರುವ ಚುನಾವಣೆಯಲ್ಲಿ ಬಾದಾಮಿ ಮತಕ್ಷೇತ್ರದಲ್ಲಿ ಕಮಲ ಅರಳಿಸುವಲ್ಲಿ ಸಹಾಯಕವಾಗಲಿದೆ ಎನ್ನುವುದು ಚರ್ಚೆಯಾಗುತ್ತಿದೆ.
ಒಟ್ಟಿನಲ್ಲಿ ಬಾದಾಮಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭಕ್ಕೆ ಸಿದ್ದತೆ ನಡೆದಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ, ಕಬ್ಬು ಬೆಳೆಗಾರರಿಗೆ ವರದಾನವಾಗುವದರಲ್ಲಿ ಎರಡು ಮಾತಿಲ್ಲ.
ವರದಿ: ರಾಚಪ್ಪ ಬನ್ನಿದಿನ್ನಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ