Hassan Meeting: ಹಾಸನ ನಗರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಜಟಾಪಟಿ, ಹೆಚ್.ಡಿ ರೇವಣ್ಣ ಕೆಂಡಾಮಂಡಲ

ಹಾಸನ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೈ ಮಿಲಾಯಿಸಲು ಮುಂದಾದ ಜೆಡಿಎಸ್-ಬಿಜೆಪಿ ಸದಸ್ಯರು. ಹಾಸನ ನಗರಸಭೆ ಆಯುಕ್ತರು, ಇಂಜಿನಿಯರ್​ಗಳು, ನಗರ ಯೋಜನಾ ಅಧಿಕಾರಿ, ಲೋಕಾಯುಕ್ತ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕೆಂಡಾಮಂಡಲ.

ಮಾಜಿ ಸಚಿವ ರೇವಣ್ಣ

ಮಾಜಿ ಸಚಿವ ರೇವಣ್ಣ

  • Share this:
ಹಾಸನ (ಫೆ.28): ಹಾಸನ (Hassan) ನಗರಸಭೆಯಲ್ಲಿ ಬಿಜೆಪಿಗೆ (BJP) ಬಹುಮತವಿಲ್ಲದಿದ್ದರೂ ಮೀಸಲಾತಿ ಅಸ್ತ್ರ ಬಳಸಿ ಅಧಿಕಾರ ಹಿಡಿದಿದೆ. ಇತ್ತ ಬಹುಮತವಿದ್ದರೂ ಜೆಡಿಎಸ್ (JDS) ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಇದರಿಂದಾಗಿ ನಗರಸಭೆಯ ಸಾಮಾನ್ಯ ಸಭೆಗಳು ಸರಿಯಾಗಿ ನಡೆಯುತ್ತಿಲ್ಲ. ಸಭೆ (Meeting) ನಡೆದರೂ ಗದ್ದಲದಲ್ಲೇ ಮುಗಿದು ಹೋಗುತ್ತಿದೆ. ಇಂದು ಕೂಡ ಅದೇ ಆಗಿದೆ, ಹಾಸನ ನಗರಸಭೆ (Municipality) ಸಾಮಾನ್ಯ ಸಭೆ ಗೊಂದಲದ ಗೂಡಾಯಿತು. ಸಮಯಕ್ಕೆ ಸರಿಯಾಗಿ ಸಭೆ ನಡೆಸುತ್ತಿಲ್ಲ, ವಿಷಯಗಳ ಬಗ್ಗೆ ಸರಿಯಾದ ಚರ್ಚೆ ಮಾಡ್ತಿಲ್ಲ, ಯಾವ ನಿರ್ಣಯಗಳನ್ನು ಅಂಗೀಕಾರ ಮಾಡಿದ್ದೀರಾ ಎಂದು ಜೆಡಿಎಸ್ ಸದಸ್ಯರು ನಗರಸಭೆ ಅಧ್ಯಕ್ಷ ಮೋಹನ್‌ ಕುಮಾರ್ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು. ವೇಳೆ ಬಿಜೆಪಿ-ಜೆಡಿಎಸ್ ಸದಸ್ಯರ ನಡುವೆ ಜಟಾಪಟಿ ಕೂಡ ನಡೆಯಿತು.

ನಗರ ಸಭೆಯಲ್ಲಿ ಬಿಜೆಪಿ-ಜೆಡಿಎಸ್​ ಜಟಾಪಟಿ

ಹಾಸನದ ನಗರಸಭೆಯ ಮೀಟಿಂಗ್ ಇವತ್ತು ಗದ್ದಲದ ಗೂಡಾಗಿತ್ತು. ಅಧ್ಯಕ್ಷರ ಪೀಠದ ಎದುರು ನುಗ್ಗಿದ ಜೆಡಿಎಸ್ ಸದಸ್ಯರು ವಾಗ್ದಾಳಿ ನಡೆಸಿದರು. ಇದು ಅತಿರೇಕಕ್ಕೆ ಹೋಗಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇತ್ತ ಅಧ್ಯಕ್ಷರ ಮೇಲೆ ಹಲ್ಲೆಗೆ ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಅಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ಬಿಜೆಪಿ ಸದಸ್ಯರು ಪೌರಾಯುಕ್ತರ ಕಚೇರಿ ಎದುರು ಧರಣಿ ನಡೆಸಿದರು. ಹಲ್ಲೆಗೆ ಯತ್ನ ಮಾಡಿದ ಸದಸ್ಯರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು‌. ಮತ್ತೊಂದೆಡೆ ಬಿಜೆಪಿ ಸದಸ್ಯರು ದುರ್ವರ್ತನೆ ತೋರಿದ್ದಾರೆ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು, ವಿನಾಕಾರಣ ಪದೇ ಪದೇ ಸಭೆ ಮುಂದೂಡುತ್ತಿದ್ದಾರೆ, ಪ್ರಶ್ನೆ ಮಾಡಿದರೆ ಅಧ್ಯಕ್ಷರು ಪಲಾಯನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರ ಮೀಟಿಂಗ್ ಹಾಲ್‌ನಲ್ಲಿ ಜೆಡಿಎಸ್ ಧರಣಿ ನಡೆಸಿದರು.

ಬಿಜೆಪಿ-ಕಾಂಗ್ರೆಸ್​ ವಿರುದ್ಧ ರೇವಣ್ಣ ವಾಗ್ದಾಳಿ

ಇನ್ನೂ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಿಜೆಪಿ-ಕಾಂಗ್ರೆಸ್ ಕಳೆದ ಹತ್ತು ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ್ದು, ಹಾಸನ ನಗರದ ಅಭಿವೃದ್ಧಿ ಕಡೆಗಣಿಸಿದವು. ರಸ್ತೆ, ಅಮೃತ ಯೋಜನೆ, ರೈಲ್ವೆ ಮೇಲ್ಸೇತುವೆ ಮಾಡಲಿಲ್ಲ. ಹಾಸನ ನಗರ ಜಿಲ್ಲೆಯ ಪ್ರಮುಖ ಕೇಂದ್ರವಾಗಿದ್ದು, ಇದನ್ನು ಯಾರಿಗೂ ಬರೆದುಕೊಟ್ಟಿಲ್ಲ, ನನಗೂ ಬರೆದುಕೊಟ್ಟಿಲ್ಲ, ಯಡಿಯೂರಪ್ಪ ದ್ವೇಷದಿಂದ ಬಹುಮತ ಇಲ್ಲದಿದ್ದರೂ ಮೀಸಲಾತಿ ಆಧಾರದ ಮೇಲೆ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ.

‘ಕಾನೂನು ಬಾಹಿರವಾಗಿ ನಗರಸಭೆ ಮೀಟಿಂಗ್‘

ಕಾನೂನು ಬಾಹಿರವಾಗಿ ನಗರಸಭೆ ಮೀಟಿಂಗ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ‌ಕಳೆದ 10 ತಿಂಗಳಿನಿಂದ ನಗರಸಭೆ ಮೀಟಿಂಗ್ ಮಾಡಿಲ್ಲ, ಅಧಿಕಾರಿಗಳು, ಗುತ್ತಿಗೆದಾರರು ದುಡ್ಡು ನುಂಗಲು ಬೋಗಸ್ ಎಸ್ಟಿಮೇಟ್ ಮಾಡಿದ್ದಾರೆ, ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಮಹಾರಾಜ ಪಾರ್ಕ್‌ ಇದೆ, ಇಲ್ಲಿ ಕಾಮಗಾರಿ ಮಾಡಲು ನಗರಸಭೆಯಿಂದ ಅನುಮತಿಯನ್ನೇ ಪಡೆದಿಲ್ಲ, ಮರಗಳನ್ನು ಕಡಿದು ಸ್ವಿಮ್ಮಿಂಗ್ ಪೂಲ್, ವಾಲಿಬಾಲ್ ಕೋರ್ಟ್ ಮಾಡಲು ಮುಂದಾಗಿದ್ದಾರೆ. ಜನಸಾಮಾನ್ಯರು ಒಂದು ಗಿಡ ಕಿತ್ತು ಹಾಕಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ಹಾಕುತ್ತಾರೆ ಆದ್ರೆ ಇಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ ಅಂತ ರೇವಣ್ಣ ಕಿಡಿಕಾರಿದ್ರು.

ಇದನ್ನೂ ಓದಿ: Milk Prices Hike: ದೇಶಾದ್ಯಂತ ಹಾಲಿನ ದರ ಹೆಚ್ಚಳ, ಇನ್ಮುಂದೆ ಹಾಲು ತರಲು 2 ರೂಪಾಯಿ ಹೆಚ್ಚಾಗಿ ತೆಗೆದುಕೊಂಡು ಹೋಗಿ

‘ಲೋಕಾಯುಕ್ತ ಅಧಿಕಾರಿಗಳು ಸತ್ತು ಹೋಗಿದ್ದಾರೆ‘

ಹಾಸನ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸತ್ತು ಹೋಗಿದ್ದಾರೆ, ಲೋಕಾಯುಕ್ತ, ಎಸಿಬಿ ಎರಡು ಸರ್ಕಾರದ ಹಿಡಿತದಲ್ಲಿವೆ. ಲೋಕಾಯುಕ್ತ, ಎಸಿಬಿ ಎರಡು ಬಾಗಿಲು ಮುಚ್ಚಿ, ಲೂಟಿ ಮಾಡಲು ಫ್ರೀಯಾಗಿ ಬಿಟ್ಟು ಬಿಡುವುದು ಒಳ್ಳೆಯದು. ಹಾಸನ ನಗರಸಭೆಯಲ್ಲಿ ಹಗಲು ದರೋಡೆ ನಡೆತಿದೆ. ಆಯುಕ್ತರನ್ನು ಕೂಡಲೇ ಅಮಾನತು ಮಾಡಿ, ನಗರಸಭೆಯಲ್ಲಿ ನಡೆಯುತ್ತಿರುವ ಅವ್ಯವಾಹರದ ಬಗ್ಗೆ ಸಿಓಡಿ ತನಿಖೆ ನಡೆಸಬೇಕು, ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇನೆ ಎಂದರು.

ಹೈಕೋರ್ಟ್‌ಗೆ ಪಿಐಎಲ್ ಹಾಕುವ ಎಚ್ಚರಿಕೆ

ನಗರ ಯೋಜನಾ ಅಧಿಕಾರಿಗೆ ದುಡ್ಡು ಕೊಟ್ಟರೆ ರೋಡ್‌ನಲ್ಲೇ ಮನೆಕಟ್ಟಿಕೊಳ್ಳಲು ಅನುಮತಿ ಕೊಡುತ್ತಾರೆ. ನಗರಸಭೆಯ ಇಂಜಿನಿಯರ್‌ಗಳು, ಆಯುಕ್ತರು ಲೂಟಿ ಹೊಡೆಯುತ್ತಿದ್ದಾರೆ, ಫುಟ್‌ಪಾತ್‌ನ್ನೂ ಬಿಡುತ್ತಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಜರುಗಿಸದಿದ್ದರೆ ಡಿಸಿ, ಆಯುಕ್ತರ ಸೇರಿ ಪಾರ್ಟಿ ಮಾಡಿ ಕೋರ್ಟ್‌‌ನಲ್ಲಿ ಪಿಐಎಲ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು‌.

ಇದನ್ನೂ ಓದಿ: One Kidney Village: ಅಫ್ಘಾನ್​ನಲ್ಲಿ ನಿಂತಿಲ್ಲ ‘ತಾಲಿಬಾನ್​‘ ಅಟ್ಟಹಾಸ? ಹೆಂಡ್ತಿ, ಮಕ್ಕಳನ್ನ ಸಾಕಲು ಕಿಡ್ನಿ ಮಾರ್ತಿದ್ದಾರೆ ಜನ

ನಗರಸಭೆ ಪ್ರತಿ ಮೀಟಿಂಗ್ ವಿಡಿಯೋ ರೆಕಾರ್ಡ್ ಆಗಲಿ, ರಾಜ್ಯಕ್ಕೆ ಒಂದು ಕಾನೂನು, ಹಾಸನ ನಗರಸಭೆಗೆ ಒಂದು ಕಾನೂನು, ಯಡಿಯೂರಪ್ಪ ಒಂದಲ್ಲ, ಎರಡಲ್ಲ ಈ ಜಿಲ್ಲೆಗೆ ಅನ್ಯಾಯ ಮಾಡಿರುವುದು, ಅಧಿಕಾರಿಗಳು ಲೂಟಿಕೋರರ ಜೊತೆ ಸೇರಿಕೊಂಡಿದ್ದಾರೆ ನ್ಯಾಷನಲ್ ಹೈವೆ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ.‌ ಬಿಜೆಪಿಯವರು ಹಾಸನ ನಗರದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ, ಕಾಲೇಜಿಗೆ ಒಂದು ಬೆಂಚ್ ಕೊಡಲು ಆಗುತ್ತಿಲ್ಲ, ಜೆಡಿಎಸ್‌ನಿಂದ ಉಗ್ರ ಹೋರಾಟ ಮಾಡುವುದಾಗಿ ರೇವಣ್ಣ ಎಚ್ಚರಿಸಿದ್ದಾರೆ
Published by:Pavana HS
First published: