news18-kannada Updated:January 11, 2021, 9:11 AM IST
ಹುಬ್ಬಳ್ಳಿಯಲ್ಲಿ ಬಿಜೆಪಿ ಜನಸೇವಕ್ ಸಮಾವೇಶ ಉದ್ಘಾಟಿಸಿದ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಇಲ್ಲಿಯ ಗೋಕುಲ ಗಾರ್ಡನ್ನಲ್ಲಿ ನಿನ್ನೆ ಬಿಜೆಪಿಯಿಂದ ಜನಸೇವಕ ಸಮಾವೇಶ ನಡೆಯಿತು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ನೂತನ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ಗ್ರಾಮ ಪಂಚಾಯತಿ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದರು. ಬಿಜೆಪಿ ಮುಖಂಡರು ಗ್ರಾಮ ಪಂಚಾಯತಿ ನೂತನ ಸದಸ್ಯರಿಗೆ ಶಾಲು ಹೊದಿಸಿ, ಹೂಮಾಲೆ ಹಾಕಿ ಸನ್ಮಾನಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ವಿ. ಸೋಮಣ್ಣ, ರವಿಕುಮಾರ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಜನಸೇವಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು. “60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಮಾಡಿದೆ. ರೈತರು ದೇಶದ ಬೆನ್ನೆಲುಬು ಅಂತಾರೆ. ಅಂತಹ ರೈತರ ಎಲುಬನ್ನ ಕಾಂಗ್ರೆಸ್ ಮುರಿದಿದೆ. ಕಾಂಗ್ರೆಸ್ನವರು ಗ್ರಾಮೀಣ ಕುಲಕಸುಬನ್ನ ಕಸಿದುಕೊಂಡಿದ್ದಾರೆ. ನಮ್ಮ ಸರ್ಕಾರ ಬಡವರ ಪರ, ಗ್ರಾಮೀಣ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮವನ್ನು ಅಭಿವೃದ್ಧಿ ಮಾಡಲು ನೂತನ ಗ್ರಾಪಂ ಸದಸ್ಯರು ಶ್ರಮಿಸಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಬಿ.ಎಲ್. ಸಂತೋಷ್ ಹೆಸರಲ್ಲಿ 30 ಲಕ್ಷ ರೂ. ವಂಚನೆ; ಕಳ್ಳ ಸ್ವಾಮಿ ಯುವರಾಜ್ ವಿರುದ್ಧ ಮತ್ತೊಂದು ಕೇಸ್ ದಾಖಲು
ನಂತರ ಮಾತನಾಡಿದ, ವಸತಿ ಸಚಿವ ವಿ. ಸೋಮಣ್ಣ, 15 ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಪಂಚಾಯತಿಗೆ 1 ಕೋಟಿ ರೂಪಾಯಿಯನ್ನ ನರೇಂದ್ರ ಮೋದಿ ಕೊಡುತ್ತಿದ್ದಾರೆ. ನೂತನ ಗ್ರಾಮ ಪಂಚಾಯತಿ ಸದಸ್ಯರು ಪಿಡಿಓಗಳನ್ನು ಹದ್ದಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಅವಾಗ ಮಾತ್ರ ನಿಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಆಗುತ್ತದೆ. ಪಿಡಿಓಗಳ ಕೊರಳುಪಟ್ಟಿ ಹಿಡಿದು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಹಿಂದೆ ಬಹಳ ಹಣವಿತ್ತು, ಈಗ ನಮ್ಮ ಬಳಿ ಹಣವಿಲ್ಲ. ಕೋವಿಡ್ ಮತ್ತು ಪ್ರವಾಹದಿಂದ ಹಣ ಇಲ್ಲದಂತಾಗಿದೆ. ಒಂದೊಂದು ಪಂಚಾಯತಿಗೆ ನಾವು 20 ಮನೆಗಳನ್ನ ಕೊಡ್ತೀವಿ. ಆ 20 ಮನೆಗಳನ್ನು ನಿಜವಾದ ಫಲನುಭವಿಗಳಿಗೆ ಮುಟ್ಟಿಸಬೇಕು. ಜನರ ಭಾವನೆಗಳಿಗೆ ಗ್ರಾಪಂ ಸದಸ್ಯರು ಸ್ಪಂದಿಸಬೇಕು ವಸತಿ ಸಚಿವರು ಹೇಳಿದರು.
ಇದನ್ನೂ ಓದಿ: ಆರೇಳು ಮಂದಿ ಸಂಪುಟ ಸೇರ್ಪಡೆ ನಿಶ್ಚಿತ: ದೆಹಲಿಯಿಂದ ಮರಳಿದ ಬಳಿಕ ಸಿಎಂ ಹೇಳಿಕೆ
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ನೆಲಕ್ಕೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಡಿಕೆಶಿ ಹಾಗೂ ಸಿದ್ಧರಾಮಯ್ಯ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತರೂ ನಾವು ಸೋಲನ್ನು ಅನುಭವಿಸಿಲ್ಲ ಎನ್ನುತ್ತಿದ್ದಾರೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಗೆ ಹೋಗಿದೆ. ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಅನ್ನುತ್ತಿದ್ದರು. ಆದ್ರೆ ಕಾಂಗ್ರೆಸ್ನವರು ಸೋತು ಸುಣ್ಣವಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಕುಟುಂಬಕ್ಕೆ ಸೀಮಿತವಾದಂತಹ ಪಕ್ಷಗಳು. ಆದರೆ ಬಿಜೆಪಿ ಜನಪರವಾದ ಪಕ್ಷ ಎಂದು ಹೇಳಿಕೊಂಡರು.
ಇದನ್ನೂ ಓದಿ: ಹೆಬ್ಬಾರ್ ನಂತರ ಕಾಂಗ್ರೆಸ್ಗೆ ಸಾರಥಿ ಆಗ್ತಾರಾ ದೇಶಪಾಂಡೆ ಪುತ್ರ? ಯಲ್ಲಾಪುರದಲ್ಲಿ ಪಕ್ಷ ಸಂಘಟನೆಗೆ ಭಾರೀ ಸಿದ್ಧತೆ
ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಉತ್ತಮ ಕೆಲಸ ಮಾಡಿದ್ರೆ ಪಕ್ಷಕ್ಕೆ, ರಾಜ್ಯಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಈಗಿನಿಂದಲೇ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಸಿದ್ಧತೆ ನಡೆಸಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಮಾಜಿ ಸಿಎಂ ಶೆಟ್ಟರ್ ಕರೆ ನೀಡಿದರು.
ವರದಿ: ಪರಶುರಾಮ ತಹಶೀಲ್ದಾರ
Published by:
Vijayasarthy SN
First published:
January 11, 2021, 9:11 AM IST