ರಾಯಚೂರು(ಏಪ್ರಿಲ್ 11): ಪ್ರತಾಪಗೌಡ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಇದೇ ಏಪ್ರಿಲ್ ೧೭ ರಂದು ನಡೆಯಲಿದೆ. ಚುನಾವಣೆಯ ಪ್ರಚಾರದ ಅಬ್ಬರವಿದೆ, ಕಾಂಗ್ರೆಸ್ ಹಾಗು ಬಿಜೆಪಿಯಿಂದ ರಾಜ್ಯದ ವಿವಿಧ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ಪ್ರತಾಪಗೌಡರ ಪರವಾಗಿ ಅವರೊಂದಿಗೆ ಮುಂಬೈ ಗೆ ಹೋಗಿದ್ದ ಶಾಸಕರು ಪ್ರಚಾರದಲ್ಲಿ ತೊಡಗಿದ್ದರು.
ಶನಿವಾರ ಸಚಿವರಾದ ಬಿ ಸಿ ಪಾಟೀಲ, ಶಿವರಾಮ ಹೆಬ್ಬಾರ, ಬೈರತಿ ಬಸವರಾಜ, ಎಸ್ ಟಿ ಸೋಮಶೇಖರ್, ಶಾಸಕ ಮುನಿರತ್ನ ಸೇರದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಎರಡು ದಿನಗಳಿಂದ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಸಹ ಪ್ರಚಾರ ಮಾಡುತ್ತಿದ್ದಾರೆ. ತುರ್ವಿಹಾಳ, ಬಳಗಾನೂರು ಹಾಗು ಸಂತೆಕೆಲ್ಲೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ ಸಿ ಪಾಟೀಲ ಚುನಾವಣಾ ಪ್ರಚಾರದಲ್ಲಿ ಸಚಿವ ಬಿ ಸಿ ಪಾಟೀಲ ಇತ್ತೀಚಿಗೆ ಸಿದ್ದರಾಮಯ್ಯನವರು ಪ್ರತಾಪಗೌಡ ಕಳ್ಳ, 40 ಕೋಟಿಗೆ ಡೀಲ್ ಆಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾದರೆ ನೀವು 2006ರಲ್ಲಿ ಜನತಾದಳದಿಂದ ಕಾಂಗ್ರೆಸ್ಸಿನಿಂದ ಬಂದಿರಲ್ಲ ಆಗ ಎಷ್ಟು ಹಣಕ್ಕೆ ಡೀಲ್ ಆಗಿದ್ದಿರಿ?
ನಿಮಗೆ ಡೀಲ್ ಮಾಡುವ ಸಂಸ್ಕೃತಿ ಇದೆ, ನಾವೆಲ್ಲ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಬೇಕೆನ್ನುವ ಕಾರಣಕ್ಕೆ ನಾವು ರಾಜಿನಾಮೆ ನೀಡಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಮುಳುಗುವ ಹಡಗು , ಮುಳುಗುವ ಹಡಗಿಗೆ ಡಿಕೆ ಶಿವಕುಮಾರ್ ಡ್ರೈವರ್. ನಾವು ಯಾರೂ ಸ್ವಾರ್ಥಕ್ಕೆ ರಾಜೀನಾಮೆ ಕೊಟ್ಟಿಲ್ಲ, ಸಿದ್ದರಾಮಯ್ಯ ಮುಳುಗುವ ಹಡಗನ್ನು ಪೂರ್ತಿ ಮುಳುಗಿಸುತ್ತಾರೆ.
ಬಿಜೆಪಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಗೆ ನೈತಿಕತೆ ಇಲ್ಲ, ನಮಗೆ ರಾಜಕೀಯ ಸಮಾಧಿ ಮಾಡಲು ತಯಾರಿ ಆಗಿದ್ರು. ಸಿಎಂ ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುವ ನೈತಿಕತೆ ಇಲ್ಲ, ಪ್ರತಾಪ್ ಗೌಡ ಪಾಟೀಲ್ ರ ಬಗ್ಗೆ ಯೂ ಏಕವಚನದಲ್ಲಿ ಮಾತನಾಡುವ ನೈತಿಕತೆ ಇಲ್ಲ. 25 ಸಾವಿರ ಅಂತರದ ಮತಗಳಿಂದ ಪ್ರತಾಪ್ ಗೌಡ ಗೆಲ್ಲುತ್ತಾರೆ ಎಂದರು.
ವೇದಿಕೆಗಳಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗ್ಯಲಕ್ಷ್ಮಿ ಯೋಜನೆ, ಮಹಿಳೆರಿಗಾಗಿ ವಿಶೇಷ ಯೋಜನೆಗಳನ್ನು ನೀಡಿದ್ದೇವೆ. ಈಗಾಗಲೇ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗಿದೆ, ಬರುವ ದಿನಗಳಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ. ಈ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ