ಯಾದಗಿರಿ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ. ಬಡಜನರು ಸಂಕಷ್ಟದಲ್ಲಿದ್ದರೆ. ಆದರೆ ರಾಜ್ಯ ಸರಕಾರ ಮಾತ್ರ ಕೊರೋನಾ ಹೆಸರಿನಲ್ಲಿ ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದು, ಸರಕಾರಕ್ಕೆ ಕೊರೋನಾ ಸೋಂಕು ತಗುಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾದಗಿರಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಿಯಾಂಕ್ ಖರ್ಗೆ, ಸರಕಾರ ಹಣ ಕೊಳ್ಳೆ ಹೊಡೆಯುತ್ತಿದೆ. ಸಾರ್ವಜನಿಕರು ಹಾಗೂ ಕೊರೋನಾ ಸೈನಿಕರ ರಕ್ಷಣೆ ಮಾಡುವುದು ಬಿಟ್ಟು ಹಗರಣದಲ್ಲಿ ಭಾಗಿಯಾಗಿದೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರು ಮಹಾನಗರಕ್ಕೆ ಮಾತ್ರ ಸರಕಾರ ಕೋವಿಡ್ ವಿಷಯದಲ್ಲಿ 8 ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಆದರೆ, ಬೆಂಗಳೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿವೆ. ಸರಕಾರ ಎಲ್ಲಾ ಜಿಲ್ಲೆಗೆ ಪ್ರಾಮುಖ್ಯತೆ ನೀಡಬೇಕು. ಅದು ಬಿಟ್ಟು ಬೆಂಗಳೂರಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಯಾವುದೇ ಸಚಿವರು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ, ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಕೊರೋನಾ ತಡೆಗೆ ದೇಶದ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಹೇಳಿದ ಹಿನ್ನೆಲೆಯಲ್ಲಿ ಪ್ರತಿಪಕ್ಷವು ಕೂಡ ಎಲ್ಲಾ ರೀತಿಯಿಂದ ಸಹಕಾರ ನೀಡಿದೆ. ಆದರೆ, ಕೊರೋನಾ ಹೆಸರಿನಲ್ಲಿ ಇವರೇ ಲೂಟಿ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಾವು ಸಹಕಾರ ಕೊಟ್ಟು ಸುಮ್ಮನೆ ಇರಲು ಸಾಧ್ಯವಾ ಎಂದು ಪ್ರಶ್ನೆ ಮಾಡಿದರು. ನಾವು ಭ್ರಷ್ಟಾಚಾರಕ್ಕೆ ಸಹಕಾರ ಕೊಡುವುದಿಲ್ಲ ಎಂದು ಟಾಂಗ್ ನೀಡಿದರು.
ಇದನ್ನು ಓದಿ: ಅಡಿಕೆ ಬೆಳೆಗಾರರಿಗೆ ವರದಾನವಾದ ಲಾಕ್ಡೌನ್; ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಬೆಲೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ