news18-kannada Updated:November 19, 2020, 10:19 AM IST
ಹೈದರಾಬಾದ್ ಚುನಾವಣೆ ಹಿನ್ನೆಲೆಯಲ್ಲಿ ಡಾ ಸುಧಾಕರ್ ಸಭೆ
ಹೈದರಾಬಾದ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಸುಧಾಕರ್ ಅವರು ಇಂದು ಹೈದರಾಬಾದ್ನ ರಾಜ್ಯ ಬಿಜೆಪಿ ಕಛೇರಿಗೆ ಆಗಮಿಸಿ ತೆಲಂಗಾಣ ರಾಜ್ಯ ಬಿಜೆಪಿ ಮುಖಂಡರೊಂದಿಗೆ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಪಾಲಿಕೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ರಾಷ್ಟ್ರೀಯ ನಾಯಕರಾದ ಭೂಪೇಂದ್ರ ಯಾದವ್, ಮಹಾರಾಷ್ಟ್ರ ವಿಧಾನಸಭಾ ಮುಖ್ಯ ಸಚೇತಕರಾದ ಆಶಿಷ್ ಶೆಲ್ಲಾರ್, ಗುಜರಾತ್ ಹಿರಿಯ ಬಿಜೆಪಿ ನಾಯಕರಾದ ಪ್ರದೀಪ್ ಸಿಂಹ ವಘೇಲಾ, ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಸತೀಶ್ ರೆಡ್ಡಿ ಸೇರಿ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಬಿಜೆಪಿ ಪಕ್ಷದಿಂದ ಅಮಾನತು
ಇಂದಿನ ಸಭೆಯಲ್ಲಿ ಪ್ರಮುಖವಾಗಿ ತೆಲಂಗಾಣ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆಗಳ ಕುರಿತು ಚರ್ಚೆ ನಡೆಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಡಾ. ಕೆ ಸುಧಾಕರ್ ಅವರಿಗೆ ಗ್ರೇಟರ್ ಹೈದರಾಬಾದ್ನ ನಾಲ್ಕು ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆಯನ್ನು ನೀಡಲಾಗಿದೆ. ಈ ಕುರಿತು ಸಚಿವ ಸುಧಾಕರ್ ಸಾಮಾಜಿಕ ಜಾಲತಾಣದ ಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕ್ಷೇತ್ರವಾರು ಸಭೆಗಳನ್ನು ನಡೆಸಿದರು. ಮಲ್ಕಾಗಿರಿ, ಖುತ್ಬುಲ್ಲಾಪುರ್, ಕುಕ್ಕಟ್ಪಲ್ಲಿ, ಮತ್ತು ಉಪ್ಪಳ್ ಕ್ಷೇತ್ರಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಚುನಾವಣಾ ತಂತ್ರಗಾರಿಕೆ, ಮತದಾರರ ನಾಡಿ ಮಿಡಿತ, ಮತದಾರರ ಅಪೇಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು ನಾಳೆಯಿಂದ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ.
ವರದಿ: ನವೀನ್ ಕುಮಾರ್
Published by:
Vijayasarthy SN
First published:
November 19, 2020, 10:19 AM IST