ಸುಮಾ, ಶಂಕರಪ್ಪಗೆ ಸಿಗದ ಬಿಜೆಪಿ ಟಿಕೆಟ್; ರಾಯಚೂರಿಗೆ ಮತ್ತೆ ನಿರಾಸೆ

ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಿಂದ ಶಿಫಾರಸು ಮಾಡಲಾಗಿದ್ದ ಸುಮಾ ಗಸ್ತಿ ಮತ್ತು ಎನ್ ಶಂಕರಪ್ಪ ವಕೀಲ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ತಿರಸ್ಕರಿಸಿರುವುದು ಜಿಲ್ಲೆಯ ಪಕ್ಷ ಕಾರ್ಯಕರ್ತರಿಗೆ ನಿರಾಸೆ ತಂದಿದೆ.

ಶಂಕರಪ್ಪ ಮತ್ತು ಸುಮಾ ಗಸ್ತಿ

ಶಂಕರಪ್ಪ ಮತ್ತು ಸುಮಾ ಗಸ್ತಿ

  • Share this:
ರಾಯಚೂರು: ರಾಜ್ಯ ಹಾಗು ಕೇಂದ್ರ ಬಿಜೆಪಿಯಿಂದ ರಾಯಚೂರು ಜಿಲ್ಲೆಗೆ ಆಗಾಗ ಆಸೆ ತೋರಿಸಿ ನಿರಾಸೆ ಮಾಡುತ್ತಿದ್ದಾರೆ. ರಾಜ್ಯಸಭೆಗೆ ಮತ್ತೆ ಆಸೆ ತೋರಿಸಿ ನಿರಾಸೆ ಮಾಡಿದ್ದಾರೆ. ಅಷ್ಟೇ ಅಲ್ಲ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿಫಾರಸು ಮಾಡಲಾಗಿದ್ದ ರಾಯಚೂರಿನ ಇಬ್ಬರ ಹೆಸರನ್ನು ಬಿಜೆಪಿ ವರಿಷ್ಠರು ತಿರಸ್ಕರಿಸಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಿಗೆ ನಿರಾಸೆ ತಂದಿದೆ.

ರಾಯಚೂರಿನ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಹಾಗು ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ ಗಸ್ತಿಯನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿ ಅವಿರೋಧ ಆಯ್ಕೆಯಾಗುವಂತೆ ಮಾಡಿದ್ದರು. ಯಾವುದೇ ಅರ್ಜಿ ಹಾಕದ, ನಿರೀಕ್ಷೆಯನ್ನಿಟ್ಟುಕೊಳ್ಳದ ಅಶೋಕ ಗಸ್ತಿಯನ್ನು ಆಯ್ಕೆ ಮಾಡುವ ಮುಖಾಂತರ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಗುರುತಿಸಲಾಗುವುದು ಎಂಬ ಅಭಿಪ್ರಾಯದಿಂದ ರಾಜ್ಯದ ಬಹುತೇಕ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ವಿಧಿಯಾಟ ಅಶೋಕ ಗಸ್ತಿಯನ್ನು ಕೊರೊನಾ ಬಲಿ ಪಡೆಯಿತು.

ಗಸ್ತಿಯವರು ರಾಜ್ಯಸಭೆ ಸದಸ್ಯರಾದರೂ ಬಾಡಿಗೆ ಕುಟುಂಬದಲ್ಲಿ ವಾಸವಾಗಿದ್ದರು. ಗಸ್ತಿ ರಾಜ್ಯಸಭೆ ಆಯ್ಕೆಯಾದ ನಂತರ ದೆಹಲಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೊರೋನಾಗೆ ತುತ್ತಾಗಿ ಸಂಸತ್ ಅಧಿವೇಶನ ಆರಂಭವಾಗುವ ಹೊತ್ತಲ್ಲಿ ಅಸುನೀಗಿದರು.

ಇದನ್ನೂ ಓದಿ: ಆರು ಕಿಮೀ ಕಾರ್ ಚೇಸ್ ಮಾಡಿ ದರೋಡೆ; ಬಾಣಸವಾಡಿ ಬಳಿ ಸಿನಿಮೀಯ ಘಟನೆ; ಸಿಸಿಟಿವಿಯಲ್ಲಿ ಕಳ್ಳರ ಕುರುಹು

ಗಸ್ತಿ ಹಿಂದುಳಿದ ವರ್ಗಗಳ ಕ್ಷೌರಿಕ ಸಮಾಜದವರಾಗಿದ್ದು, ಕ್ಷೌರಿಕ‌ ಸಮಾಜಕ್ಕೆ ಮತ್ತೆ ಅವಕಾಶ ನೀಡಬೇಕು. ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ದುರಂತ ಅಂತ್ಯ ಕಂಡ‌ ನತದೃಷ್ಟ ನಾಯಕ ಅಶೋಕ ಗಸ್ತಿ. ಗಸ್ತಿ ಅವರ ಪತ್ನಿ ಸುಮಾ‌ ಗಸ್ತಿಯವರು ಸ್ನಾತಕೋತ್ತರ ಪದವಿಧರೆಯಾಗಿದ್ದು, ಅವರಿಗೆ ರಾಜ್ಯಸಭೆ ಟಿಕೆಟ್ ನೀಡುತ್ತದೆ ಎಂದು ಬಹುತೇಕರು ಆಶಿಸಿದ್ದರು. ಅದೇ ರೀತಿ ಅವರ ಹೆಸರನ್ನು ರಾಜ್ಯಸಭೆಗೆ ಹೆಸರು ಶಿಫಾರಸ್ಸು ಕೂಡ ಮಾಡಲಾಗಿತ್ತು. ಅಂತಿಮ ಕ್ಷಣದಲ್ಲಿ ಅವರನ್ನು ಕೈ ಬಿಡಲಾಯಿತು.

ಈ ಮಧ್ಯೆ 2011 ರಲ್ಲಿ ಸದಾನಂದಗೌಡರು ಮುಖ್ಯಮಂತ್ರಿಯಾದ ತಕ್ಷಣ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್ ನ ಸದಸ್ಯರಾಗಬೇಕಿತ್ತು. ಆಗ ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರವೂ ಖಾಲಿ ಇರಲಿಲ್ಲ. ಈ ಸಂದರ್ಭದಲ್ಲಿ ವಿಧಾನಪರಿಷತ್​ಗೆ ನೇಮಕವಾಗಬೇಕಾಗಿತ್ತು. ಆಗ ವಿಧಾನಪರಿಷತ್ ಸದಸ್ಯರಾಗಿದ್ದ ರಾಯಚೂರಿನ ಎನ್ ಶಂಕರಪ್ಪ ವಕೀಲರ ರಾಜಿನಾಮೆ ಕೊಡಿಸಿ, ಅವರ ಸ್ಥಾನಕ್ಕೆ ಸದಾನಂದಗೌಡ ನೇಮಕವಾಗಿದ್ದರು.

ಇದನ್ನೂ ಓದಿ: ಮನುಷ್ಯನ ಅತಿಯಾದ ಹಸ್ತಕ್ಷೇಪ; ಅವಸಾನದ ಹಾದಿಯಲ್ಲಿ ಐತಿಹಾಸಿಕ ಬಿಸಿ ನೀರಿನ ಚಿಲುಮೆ!

ಎನ್ ಶಂಕರಪ್ಪ ಸಹ ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದವರಾಗಿದ್ದು ಅವರು ಪಕ್ಷಕ್ಕಾಗಿ ದುಡಿದವರು ಹಾಗು ಪಕ್ಷಕ್ಕಾಗಿ ಅಧಿಕಾರ ತ್ಯಾಗ ಮಾಡಿದ್ದರು. ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ರಾಜ್ಯದಿಂದ ಹೆಸರು ಶಿಫಾರಸ್ಸು ಮಾಡಲಾಗಿತ್ತು. ಆದರೆ ಅವರನ್ನು ಸಹ ಕೊನೆಯ ಘಳಿಗೆಯಲ್ಲಿ ಕೈ ಬಿಡಲಾಗಿತ್ತು.

ಈ ಹಿಂದೆ ರಾಯಚೂರಿಗೆ ಐಐಟಿ ಮಂಜೂರು ಮಾಡಲು ಶಿಫಾರಸ್ಸಾಗಿ, ರಾಯಚೂರಿಗೆ ಐಐಟಿ ಬರುತ್ತದೆ ಎನ್ನುವಾಗ ಕೊನೆಯ ಘಳಿಗೆಯಲ್ಲಿ ಐಐಟಿ ಕೈ ತಪ್ಪಿದೆ. ಇಂಥ ಹಲವು ಬಾರಿ ಆಸೆ ತೋರಿಸಿ ನಿರಾಸೆ ಮಾಡುತ್ತಿದ್ದಾರೆ. ಹಿಂದುಳಿದ ರಾಯಚೂರು ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: