ದಾವಣಗೆರೆ: ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಧಿಕಾರ ನೀಡಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ (BJP Core Committee Meeting) ಚರ್ಚೆ ಆಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai) ಹೇಳಿದರು. ಬಿಜೆಪಿ ಕಾರ್ಯಕಾರಿಣಿ ಸಭೆ ಮುಕ್ತಾಯವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವ ಸಂಕಲ್ಪ ಮಾಡಿದ್ದೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಆಡಳಿತದ ಚುಕ್ಕಾಣಿ ಚುಕುರುಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ದಾವಣಗೆರೆಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಆಡಳಿತ ಪಕ್ಷದ ಕಾರ್ಯಕಾರಿಣಿ ನಡೆಯುವಾಗ ಕೆಲ ನಿರ್ಣಯ ತೆಗೆದುಕೊಳ್ಳಲಾಗುತ್ತೆ. ಹಿಂದುಳಿದ ವರ್ಗಗಳ ಜಾತಿಗಳನ್ನ ಪುರಸ್ಕರಣೆ ಮಾಡುವಂತಹದ್ದನ್ನ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಿದೆ. ಹೀಗಾಗಿ ಕೇಂದ್ರವನ್ನು ಅಭಿನಂದಿಸುವ ಕೆಲಸ ಮಾಡಿದ್ದೇವೆ. ಬರುವ ದಿನಗಳಲ್ಲಿ ಉತ್ತಮವಾದ ಆಡಳಿತ ಮಾಡುವಂತಹ ಸಂಕಲ್ಪ ಮಾಡಿದ್ದೇವೆ. ಅಸೆಂಬ್ಲಿಯಾದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುವ ಕೆಲಸ ಮಾಡಲಿದ್ದೇವೆ. ಆಡಳಿತ ಯಂತ್ರ ಚುರುಕುಗೊಳಿಸುವ ಕೆಲಸ ಮಾಡುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಸಿಎಂ ಒಳ್ಳೆಯ ಕೆಲಸ ಮಾಡಲಿ ಎಂಬುದೇ ನಮ್ಮ ಭಾವನೆ: ಯತ್ನಾಳ್
ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮಾತನಾಡಿ, ಕಾರ್ಯಕಾರಿಣಿಯಲ್ಲಿ ಎರಡು ವಿಚಾರಗಳಿಗೆ ಮಹತ್ವ ನೀಡಿರುವುದು ಸಂತಸ ತಂದಿದೆ. ನಂಜನಗೂಡ ದೇಗುಲ ತೆರವು ಪ್ರಕರಣ ಸಂಬಂಧ ಸಿಎಂ ಬಸವರಾಜು ಬೊಮ್ಮಾಯಿ ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹಿಂದುಳಿದವರ ಹೋರಾಟದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ನಮಗೆ ಅವರ ಮಾತು ಸಮಾಧಾನ ತಂದಿದೆ. ಒಳ್ಳೆ ಕೆಲಸ ಮಾಡಲಿ ಎಂಬುದೇ ನನ್ನ ಭಾವನೆ ಎಂದು ಹೇಳಿದರು.
ಬಸನಗೌಡ ಪಾಟೀಲ್ ಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಅಂತ ಕೇಳುವುದು ನನ್ನ ರಕ್ತದಲ್ಲೆ ಬಂದಿಲ್ಲ. ಮಂತ್ರಿಗಿರಿಗಾಗಿ ಮಠಾಧೀಶರ ಕಾಲು ಹಿಡಿದಿಲ್ಲ. ಟೈರ್ ಸುಟ್ಟು ಹೋರಾಟ ಮಾಡಲ್ಲ. ಇದು ನನ್ನ ರಕ್ತದಲ್ಲೇ ಬಂದಿಲ್ಲ. ವಾಜಪೇಯಿ ಅವರಂತಹ ನಾಯಕರು ಇದ್ದಾಗ ಕೇಂದ್ರ ಸಚಿವನಾಗಿದ್ದವನು ನಾನು. ಬೇರೆಯವರನ್ನು ಸಚಿವ ಸ್ಥಾನ ಕೊಡಿ ಅಂತ ಕೇಳಲ್ಲ ಎಂದ ಯತ್ನಾಳ್, ಯಡಿಯೂರಪ್ಪ ಅವರು ಪಕ್ಷಕ್ಕೆ ಸಲಹೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು.
ಪಂಚಮಸಾಲಿ 2ಎ ಮೀಸಲಾತಿ ನೀಡದಕ್ಕೆ ಯಡಿಯೂರಪ್ಪ ಅಧಿಕಾರಿ ಕಳೆದುಕೊಂಡರು ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಮೀಸಲಾತಿ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ವಿಜಯಾನಂದ ಕಾಶಪ್ಪನವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದನ್ನು ಓದಿ: cheetah: ವಾಣಿಜ್ಯ ನಗರಿ ಹುಬ್ಬಳ್ಳಿಗೆ ಎಂಟ್ರಿ ಕೊಟ್ಟ ಚಿರತೆರಾಯ; ಚಿರತೆ ಕಣ್ಣಾಮುಚ್ಚಾಲೆ ಆಟಕ್ಕೆ ಜನ ಬೆಸ್ತು!
ಸಭೆಯಲ್ಲಿ ಎರಡು ನಿರ್ಣಯ
ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಅವರು, ಎರಡು ನಿರ್ಣಯಗಳನ್ನು ಕಾರ್ಯಕಾರಿಣಿಯಲ್ಲಿ ತೆಗೆದುಕೊಂಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಅಭಿನಂದನೆ ನಿರ್ಣಯ ಮೊದಲನೆಯದು. ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಧಿಕಾರ ನೀಡಿದೆ. ಕರ್ನಾಟಕದ ನೂತನ ಸಿಎಂ ಬೊಮ್ಮಾಯಿಗೆ ಅಭಿನಂದಿಸುವ ಎರಡನೇ ನಿರ್ಣಯ ತೆಗೆದುಕೊಳ್ಳಲಾಗಿದೆ. ರೈತ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಮಹತ್ವದ ಯೋಜನೆ ಸಿಎಂ ಘೋಷಣೆ ಮಾಡಿದ್ದಾರೆ. ಗ್ರಾಮಾಂತರ ಭಾಗದ ಶಾಲಾ ಕಟ್ಟಡ ದುರಸ್ಥಿ ಹೊಸ ಕಟ್ಟಡ ನಿರ್ಮಾಣ ಕ್ಕೆ ಸಿಎಂ ಮುಂದಾಗಿದ್ದಾರೆ. ಅದಕ್ಕಾಗಿ ಬಸವರಾಜ ಬೊಮ್ಮಾಯಿಗೆ ಅಭಿನಂದಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ