ಅಂದು ಶಿಕ್ಷಕ ಇಂದು ಬಸವಕಲ್ಯಾಣ ಕ್ಷೇತ್ರದ ಶಾಸಕ...! ಜೋಳದ ವ್ಯಾಪಾರಿ, ರೈತನ‌ ಪುತ್ರನಿಗೆ ಒಲಿದ ಅದೃಷ್ಟ!

ಫಲಿತಾಂಶ ಹೊರಬೀಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಭಾಗಕ್ಕೆ ಬಂದ ಶರಣು ಸಲಗರ ಬೀದರ್ ಸಂಸದ ಭಗವಂತ ‌ಖೂಬಾ ಅವರನ್ನು ಕಂಡು ಬಾವುಕರಾದರು. ಸಂಸದ ಖೂಬಾ ಅವರ ಕಾಲಿಗೆ ನಮಸ್ಕಾರ ‌ಮಾಡಿ ಕೆಲ ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದರು. ನಂತರ ಸಂಸದ ಖೂಬಾ ಅವರು ಸಲಗರ ಅವರ ಬೆನ್ನು ತಟ್ಟಿ ಸನ್ಮಾನಿಸಿದರು.

ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ

ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ

  • Share this:
ಬೀದರ್: ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಶಾಸಕ ದಿ.ಬಿ.ನಾರಾಯಣರಾವ್ ನಿಧನದಿಂದ  ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ 17 ರಂದು ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ನಡೆದಿತ್ತು. ಬಿಜೆಪಿ ಅಭ್ಯರ್ಥಿ ಶರಣು ಸಲಗರ, ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್, ಜೆಡಿಎಸ್ ಅಭ್ಯರ್ಥಿ ಅಸ್ರಬ್ ಅಲಿ, ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಸೇರಿ 12 ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದರು. ಇಂದು ಬೀದರ್ ನ ಬಿವಿಬಿ ಕಾಲೇಜ್ ನಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಜಿಲ್ಲಾಡಳಿತ ಕೂಡ ಕೋವಿಡ್ ಮುಂಜಾಗ್ರತೆ ವಹಿಸಿ ಮತ ಎಣಿಕೆ ಕಾರ್ಯ ನಡೆಸಿದೆ. ಪ್ರತಿ ಮತ ಎಣಿಕೆ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮುನ್ನಡೆ ಸಾಧಿಸುತ್ತಾ ಬಂದಿದ್ದರು.

ಶರಣು ಸಲಗರ 70556 ಮತಗಳನ್ನು ಪಡೆದು 20448 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅವರು 50108 ಮತಗಳು ಪಡೆದು ಸೋಲಿನ ರುಚಿ ಅನುಭವಿಸಿದ್ದಾರೆ. ಕಲಬುರಗಿ ಜಿಲ್ಲೆಯ ವಿ.ಕೆ. ಸಲಗರ ನಿವಾಸಿಯಾದ ಶರಣು ಸಲಗರ ಅವರ ಕುಟುಂಬವು ಕಡುಬಡತನದಿಂದ ಕೂಡಿದ್ದಾಗಿದೆ. ಶರಣು ಸಲಗರ ಅವರ ತಂದೆ ಬಾಬುರಾವ್, ತಾಯಿ ಸರುಬಾಯಿ ಇದ್ದು, ಬಾಬುರಾವ್ ದಂಪತಿಗೆ ಮೂವರು ಪುತ್ರರಿದ್ದು, ಹಿರಿಯ ಪುತ್ರ ಶರಣು ಸಲಗರ ಶಿಕ್ಷಕ ವೃತ್ತಿ ಬಿಟ್ಟು ರಾಜಕೀಯ ಪ್ರವೇಶ ಮಾಡಿ ಈಗ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ಪುತ್ರ ರೇಣುಕಾಚಾರ್ಯ ಶಿಕ್ಷಕ ವೃತ್ತಿ ತೊರೆದು ಹಿರಿಯ ಸಹೋದರ ಸಲಗರಗೆ ಸದಾ ರಾಜಕೀಯ ಬೆನ್ನೆಲುಬಾಗಿದ್ದಾರೆ. ಕಿರಿಯ ಪುತ್ರ ರಾಜಕುಮಾರ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಶರಣು ಸಲಗರ ಅವರ ಪತ್ನಿ ಸಂಗೀತಾ ಅವರು ತಹಸೀಲ್ದಾರ್ ಆಗಿ ಸೇವೆ ಮಾಡುತ್ತಿದ್ದಾರೆ.

ಶರಣು ಸಲಗರ 8 ವರ್ಷಗಳ ‌ಕಾಲ ಸರಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಅದೇ ರೀತಿಯ ಕೆಲ ರಾಜಕೀಯ ನಾಯಕರ ಹತ್ತಿರ ಪಿಎ ಆಗಿ ಕೆಲಸ ಮಾಡಿದ್ದಾರೆ. ಜನ ಸೇವೆ ಮಾಡಬೇಕೆಂಬ ಬಯಕೆಯಿಂದ ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಬಿಜೆಪಿ ಸೇರ್ಪಡೆಯಾಗಿ ಜನ ಸೇವೆ ಮಾಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಬಡವರ ಹಾಗೂ ಕಾರ್ಮಿಕರ ಹಸಿವು ನೀಗಿಸುವ ಕಾರ್ಯ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದು, ಸಂಕಷ್ಟ ಕಾಲದಲ್ಲಿ ಹಸಿವು ನೀಗಿಸಿದ ಸಲಗರ ಅವರನ್ನು ಮತದಾರರು ಆಶೀರ್ವದಿಸಿ ಗೆಲ್ಲಿಸಿ ತಂದಿದ್ದಾರೆ. ಈ ಬಗ್ಗೆ ಆಯ್ಕೆಯಾದ ನಂತರ ಶರಣು ಸಲಗರ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಸಿಎಂ ಬಿಎಸ್ ವೈ ಅವರ ಆಡಳಿತ ಮೆಚ್ಚಿ ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ. ಇದು ನನ್ನ ಗೆಲುವಲ್ಲ. ಮತದಾರರ ಗೆಲುವಾಗಿದೆ. ಜನರ ಸೇವೆ ಮಾಡಲು ದಿನದ 18 ಗಂಟೆ ಕೆಲಸ ಮಾಡುತ್ತೇನೆ. ಮೊದಲು ಕ್ಷೇತ್ರದಲ್ಲಿ ಕೋವಿಡ್ ತೊಲಗಿಸಲು ಶ್ರಮ ವಹಿಸುತ್ತೆನೆ ಎಂದರು.

ಇದನ್ನು ಓದಿ: ಮಸ್ಕಿ ಸೋಲಿನ ಹೊಣೆಯನ್ನು ನಾನೂ ಕೂಡ ಹೊರುತ್ತೇನೆ, ಪ್ರತಾಪಗೌಡ ಪಾಟೀಲರ ಹೇಳಿಕೆ ನಾನು ಒಪ್ಪಲ್ಲ; ಬಿವೈ ವಿಜಯೇಂದ್ರ

ನೂತನವಾಗಿ ಶಾಸಕನಾಗಿ ಆಯ್ಕೆಯಾದ ಶರಣು ಸಲಗರ ಅವರ ಕುಟುಂಬ ಕಡುಬಡತನದಲ್ಲಿ ಬೆಳೆದ ಕುಟುಂಬವಾಗಿದೆ. ಅವರ ತಂದೆ ಬಾಬುರಾವ್ ಅವರು ಕಲಬುರಗಿ, ಬಸವಕಲ್ಯಾಣ ಮೊದಲಾದ ಕಡೆ ಸಂತೆಗೆ ತೆರಳಿ ಜೋಳ ವ್ಯಾಪಾರ ಮಾಡುತ್ತಿದ್ದರು. ಅದೇ ರೀತಿ ಕೃಷಿ ಕಾಯಕ ಮಾಡಿಕೊಂಡಿದ್ದರು. ಹಾಲು ಮಾರಾಟ ಮಾಡಿ ಕೂಡ ಸಂಕಷ್ಟದಲ್ಲಿ ಮಕ್ಕಳಿಗೆ ಓದಿಸಿ ಮೂವರು ‌ಮಕ್ಕಳಿಗೆ ಸರಕಾರಿ‌ ನೌಕರಿ ಕೊಡೊಸಿದ್ದರು. ನಂತರ ದಿನಗಳಲ್ಲಿ ಇಬ್ಬರು ಪುತ್ರರು ಸರಕಾರಿ ನೌಕರಿ ಬಿಟ್ಟರು. ಈ ಬಗ್ಗೆ ಶರಣು ಸಲಗರ ತಂದೆ ಬಾಬುರಾವ್ ಮಾತನಾಡಿ, ನಾವು ಬಡತನದಲ್ಲಿ ಜೀವನ ನಡೆಸಿದೆವು. ನನ್ನ ಮಗ ಈಗ ಶಾಸಕನಾಗಿ ಆಯ್ಕೆಯಾಗಿದ್ದು ಬಹಳ ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡರು.

ಕಾಲಿಗೆ ನಮಸ್ಕರಿಸಿದ ಸಲಗರ..‌.!

ಫಲಿತಾಂಶ ಹೊರಬೀಳುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಹೊರಭಾಗಕ್ಕೆ ಬಂದ ಶರಣು ಸಲಗರ ಬೀದರ್ ಸಂಸದ ಭಗವಂತ ‌ಖೂಬಾ ಅವರನ್ನು ಕಂಡು ಬಾವುಕರಾದರು. ಸಂಸದ ಖೂಬಾ ಅವರ ಕಾಲಿಗೆ ನಮಸ್ಕಾರ ‌ಮಾಡಿ ಕೆಲ ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದರು. ನಂತರ ಸಂಸದ ಖೂಬಾ ಅವರು ಸಲಗರ ಅವರ ಬೆನ್ನು ತಟ್ಟಿ ಸನ್ಮಾನಿಸಿದರು.
Published by:HR Ramesh
First published: