HOME » NEWS » District » BJP AND CONGRESS SUPPORTED MEMBERS MAKE ALLIANCE IN YADOORU GP AT CHIKKODI LC SNVS

ಇಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಒಂದಾದರು ಬಿಜೆಪಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು

ದೇಶದ ಯಾವುದೇ ರಾಜ್ಯದ ಸದನಗಳಲ್ಲಿ ರಾಷ್ಟ್ರೀಯ ಪಕ್ಷಗಳೂ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಗೆ ಪಕ್ಷೇತರರು ಅನಿವಾರ್ಯ. ಅದರಲ್ಲೂ ಸರ್ಕಾರ ರಚನೆಯ ಸಮಯದಲ್ಲಂತೂ ಪಕ್ಷೇತರರು ಅಗ್ರಗಣ್ಯ ಸ್ಥಾನ ಪಡೆಯುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ರಾಷ್ಟ್ರೀಯ ಪಕ್ಷಗಳೆರಡೂ ಸೇರಿ ಪಕ್ಷೇತರರನ್ನೇ ದೂರವಿಟ್ಟು ಪಂಚಾಯ್ತಿ ಗದ್ದುಗೆ ಏರಿದ್ದಾರೆ.


Updated:February 11, 2021, 8:53 AM IST
ಇಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಒಂದಾದರು ಬಿಜೆಪಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು
ಚಿಕ್ಕೋಡಿಯ ಯಡೂರು ಗ್ರಾ.ಪಂ.ನಲ್ಲಿ ಒಂದಾದ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು
  • Share this:
ಚಿಕ್ಕೋಡಿ: ರಾಜ್ಯದಲ್ಲಾಗಲಿ ಅಥವಾ ಹೊರ ರಾಜ್ಯದಲ್ಲಾಗಲಿ ಸರ್ಕಾರ ರಚನೆಯ ವಿಚಾರ ಬಂದಾಗ ಪ್ರಾದೇಶಿಕ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಪಕ್ಷೇತರ ಅಥವಾ ಸ್ವತಂತ್ರ ಅಭ್ಯರ್ಥಿಗಳು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ಪಂಚಾಯತ್ ಗದ್ದುಗೆ ಹಿಡಿಯೋಕೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಕ್ಷೇತರರನ್ನೇ ದೂರವಿಟ್ಟು ತಾವೇ ಹೊಂದಾಣಿಕೆ ಮಾಡಿಕೊಂಡು ಪಂಚಾಯತ್ ಗದ್ದುಗೆ ಏರಿದ್ದಾರೆ. ಆಶ್ಚರ್ಯ ಅನಿಸಿದರೂ ಇದು ನಿಜ.

ಯಡೂರು ಗ್ರಾಮ ಪಂಚಾಯಿತಿಯಲ್ಲಿ ಮೂರು ಹಳ್ಳಿ 20 ಜನ ಸದಸ್ಯರಿದ್ದಾರೆ. ಇತ್ತೀಚೆಗೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಬಹುತೇಕ ಎಲ್ಲಾ ವಾರ್ಡ್​ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆದರೆ ಅಂತಿಮವಾಗಿ ಯಾರಿಗೂ ಬಹುಮತ ಸಿಗದೆ ಗ್ರಾ.ಪಂ. ಅತಂತ್ರಗೊಂಡಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುತೇಕ ಸಮಾನ ಸ್ಥಾನಗಳನ್ನ ಗೆದ್ದರೆ, ಸ್ವತಂತ್ರವಾಗಿ ಸ್ಪರ್ಧಿಸಿದ್ದವರೂ ಹೆಚ್ಚೂಕಡಿಮೆ ಇಷ್ಟೇ ಸ್ಥಾನಗಳನ್ನ ಗೆದ್ದಿದ್ದರು.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 7 ಸ್ಥಾನ ಗೆದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 6 ಸ್ಥಾನದಲ್ಲಿ ಗೆದ್ದರು. ಇನ್ನುಳಿದಂತೆ ಯಾವುದೇ ಪಕ್ಷದ ಬೆಂಬಲಿಗರಲ್ಲದ 7 ಜನ ಗೆದ್ದಿದ್ದರು. ಅಧಿಕಾರದ ಚುಕ್ಕಾಣಿ ಹಿಡಿಯಲು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಗೆದ್ದು ಅಧಿಕಾರ ಹಿಡಿಯಲು ಬಹುಮತಕ್ಕೆ ಬೇಕಿತ್ತು 13 ಸದಸ್ಯರ ಬೆಂಬಲ. ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಬಿಜೆಪಿ ಅಥವಾ ಕಾಂಗ್ರೆಸ್ ಬೆಂಬಲಿತರು ಕೈಜೋಡಿಸಿ ಅಧಿಕಾರ ಹಿಡಿಯುವ ನಿರೀಕ್ಷೆ ಇತ್ತು. ಆದರೆ, ಆಗಿದ್ದೇ ಬೇರೆ. ಬಿಜೆಪಿಯಿಂದ ಗೆದ್ದ 7 ಜನ ಕಾಂಗ್ರೇಸ್​ನಿಂದ ಗೆದ್ದ 6 ಜನ ಸೇರಿ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ‌ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಚಿಕ್ಕೋಡಿ ಲೋಕಸಭೆಗೆ ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಚಿಕ್ಕೋಡಿ ಸದಲಗಾ ವಿಧಾನ ಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಗಣೇಶ ಹುಕ್ಕೇರಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌‌.

ಇದನ್ನೂ ಓದಿ: AIIMS: ಕಲಬುರ್ಗಿ ಕೈತಪ್ಪಿದ ಏಮ್ಸ್, ದಪ್ಪ ಚರ್ಮದ ಬಿಜೆಪಿಯಿಂದ ಬೇರೇನು ಸಾಧ್ಯವಿಲ್ಲ; ಪ್ರಿಯಾಂಕ್ ಖರ್ಗೆ ಕಿಡಿ

‌ ಗ್ರಾಮಸ್ಥರು ಹೇಳುವ ಪ್ರಕಾರ 2019 ರ ಪ್ರವಾಹಕ್ಕೆ  ಸಿಲುಕಿ ಯಡೂರು ಗ್ರಾಮದಲ್ಲಿ ಭಾಗಶಃ ಮನೆಗಳು ಬಿದ್ದು ಹೋಗಿವೆ. ಎರಡೂ ಪಕ್ಷದ ನಾಯಕರಿಂದ ಕೆಲಸ ಮಾಡಿಸಿಕೊಳ್ಳಬೇಕಿದೆ. ಗ್ರಾಮದ ಅಭಿವೃದ್ಧಿ ಮುಖ್ಯವಾಗಿದೆ. ಹೀಗಾಗಿ ನಾವು ಇಲ್ಲಿ ಇಬ್ಬರೂ ಸೇರಿ ಹೊರಟಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್  ಬೆಂಬಲಿತ ಅಭ್ಯರ್ಥಿಗಳು.

ಒಟ್ಟಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದ ಚಿನ್ಹೆ ಅಥವಾ ಪಕ್ಷದ ಆಧಾರದ ಮೇಲೆ ನಡೆಯದ ಚುನಾವಣೆಯಾಗಿರದಿದ್ದರೂ ಸಹ ಪಕ್ಷದ ಪರವಾದ ಬೆಂಬಲಿಗರು ಕಾಂಗ್ರೇಸ್ ಬಿಜೆಪಿ ಅಂತ ಕಚ್ಚಾಡದೆ ಒಂದಾಗಿ ಅಧಿಕಾರ ಹಿಡಿದಿದ್ದಾರೆ. ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಕಾದು ನೋಡಬೇಕು.

ವರದಿ: ಲೋಹಿತ್ ಶಿರೋಳ
Published by: Vijayasarthy SN
First published: February 11, 2021, 8:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories