ಮಸ್ಕಿ ಉಪಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್ ಘಟಾನುಘಟಿ ನಾಯಕರ ಅಬ್ಬರದ ಪ್ರಚಾರ

ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ನಿನ್ನೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆ ಕೊಟ್ಟಿದ್ದು, ಹಾಗೂ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಚಾರಗಳು ಕಾಂಗ್ರೆಸ್​ಗೆ ಅಸ್ತ್ರಗಳಾಗಿವೆ.

ಮಸ್ಕಿಯಲ್ಲಿ ಕಾಂಗ್ರೆಸ್ ನಾಯಕರಿಂದ ನಡೆದ ಪ್ರಚಾರ ಸಭೆ

ಮಸ್ಕಿಯಲ್ಲಿ ಕಾಂಗ್ರೆಸ್ ನಾಯಕರಿಂದ ನಡೆದ ಪ್ರಚಾರ ಸಭೆ

  • Share this:
ರಾಯಚೂರು: ಪ್ರತಾಪಗೌಡ ಪಾಟೀಲ ರಾಜಿನಾಮೆಯಿಂದ ತೆರವಾದ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಭರಾಟೆಯು ಬಿಸಿಲು ನಾಡು ರಾಯಚೂರಿನ ಬಿಸಿಲಿಗಿಂತ ಅಧಿಕವಾಗಿದೆ. ಘಟಾನುಘಟಿ ನಾಯಕರು ನಿನ್ನೆ ಪ್ರಚಾರಕ್ಕೆ ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ ಸೇರಿದಂತೆ ಹಲವರು ಇವತ್ತು ಮಂಗಳವಾರವೂ ಪ್ರಚಾರ ಮಾಡುತ್ತಿದ್ದಾರೆ.

ನಿನ್ನೆ ಮುಂಜಾನೆ ಕೊಪ್ಪಳ ಜಿಲ್ಲೆಯಿಂದ ಆಗಮಿಸಿದ ಕಾಂಗ್ರೆಸ್ ಮುಖಂಡರು ಉಮಲೂಟಿ, ಕಲ್ಮಂಗಿ ಹಾಗು ತುರ್ವಿಹಾಳ ದಲ್ಲಿ ಪ್ರಚಾರ ಮಾಡಿದರು. ತುರ್ವಿಹಾಳ ದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 2018 ಮೇ 12 ರಂದು ಚುನಾವಣೆ ನಡೆದಿದೆ. ಈಗ ಮತ್ತೆ ಉಪಚುನಾವಣೆ ಬಂದಿದೆ. ಈ ಉಪಚುನಾವಣೆ ಅಗತ್ಯವಿರಲಿಲ್ಲ. ಆದರೆ ಪ್ರತಾಪಗೌಡ ಎಂಎಲ್ಎ ಆಗಿ ಕೆಲಸ ಮಾಡುವ ಬದಲು ತನ್ನನ್ನು ತಾನೇ ಮಾರಾಟ ಮಾಡಿಕೊಂಡು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಬಿಜೆಪಿಗೆ ಹೋಗುವಾಗ ಮತದಾರರನ್ನು ಕೇಳಿದರಾ? ನಿಮ್ಮ ವೋಟು ತಗೆದುಕೊಂಡು 30 ಕೋಟಿ ತೆಗೆದುಕೊಂಡರು. ಅವರಿಗೆ ಮಾನ ಮಾರ್ಯಾದೆ ಇದೇನ್ರಿ?  ಅವರು ರಾಜಕೀಯದಲ್ಲಿರಲು ಲಾಯಕ್ಕಾ? ನಾಲಾಯಕ್ಕರಾ? ಎಂದು ನೀವು ತೀರ್ಮಾನಿಸಬೇಕು. ಸಂತೆಯಲ್ಲಿ ಎಮ್ಮೆ, ಕುರಿ, ಮೇಕೆಗಳು ಮಾರಾಟವಾಗುತ್ತವೆ. ಈಗ ಮನುಷ್ಯರೇ ಮಾರಾಟವಾಗಿದ್ದಾರೆ. ಇದು ನಾಚಿಕೆಗೆಟ್ಟ ಕೆಲಸ ಎಂದು ಟೀಕಿಸಿದರು.

ಹಿಂದೆ ಅವನ ಮುಖ ನೋಡಿದರೆ ಕಳ್ಳನಂತೆ ಕಾಣುತ್ತೇನೆ ಎಂದಿದ್ದೆ. ನಾನು ಅಧಿಕಾರದಲ್ಲಿದ್ದಾಗ 5000 ಕೋಟಿ ಅನುದಾನ ನೀಡಿದ್ದೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರಕಾರ ಇದೆ. ಏನಾದರೂ ಮಾಡಿದ್ದಾರಾ?ಅಕ್ಕಿ ಯಾಕೆ ಕಡಿಮೆ ಮಾಡಿದರು? ಈಗ ಇಲ್ಲಿ ವಿಜಯೇಂದ್ರ ಬಂದಿದ್ದಾನೆ. ದುಡ್ಡು ತೊಗೊಂಡು ಬಂದಿದ್ದಾರೆ. ಹಾಗಾದರೆ ಯಾರ ದುಡ್ಡು ಇದು? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ತಾನು ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದರು.

ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಿ; ಸಿನಿಮಾ, ಸಭೆ ಸಮಾರಂಭ ನಿಲ್ಲಿಸಿ: ಪ್ರಧಾನಿಗೆ ಐಎಂಎ ಸಲಹೆ

ಇದೇ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಬಸವಕಲ್ಯಾಣ, ಬೆಳಗಾವಿಯಲ್ಲಿ ಜನಪ್ರತಿನಿಧಿಗಳು ತೀರಿಕೊಂಡ ಹಿನ್ನೆಲೆ ಚುನಾವಣೆ ಬಂದಿದೆ. ಆದರೆ ಮಸ್ಕಿಯಲ್ಲಿ ನಿಮ್ಮನ್ನು ತೀರಿಸಿ ಚುನಾವಣೆ ಮಾಡುತ್ತಿದ್ದಾರೆ. ಪ್ರತಾಪಗೌಡ ಹಣಕ್ಕಾಗಿ ಚುನಾವಣೆ ಬರುವಂತೆ ಮಾಡಿದ್ದಾರೆ. ಪ್ರತಾಪಗೌಡ ಎಂಎಲ್ ಎ ಇದ್ದಾಗ, ಸಿದ್ದರಾಮಯ್ಯ ಸಿಎಂ ಇದ್ದಾಗ ಸಾಕಷ್ಟು ಯೋಜನೆ ನೀಡಿದ್ದೇವೆ. ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ‌ ಇದ್ದಾಗ ಏನು ಮಾಡದೆ ಈಗ ಹರಿಯುತ್ತೀನಿ ಹರಿಯುತ್ತೀನಿ ಅಂತೀರಿ. ಏನು ಹರಿಯುತ್ತಿರಿ? ಎಂದು ಖಾರವಾಗಿ ಪ್ರಶ್ನಿಸಿದರು.

ಈಗ ಎಲ್ಲವೂ ದುಬಾರಿಯಾಗುವುದಕ್ಕೆ ಬಿಜೆಪಿ ಕಾರಣ. ರಾಹುಲ್ ಗಾಂಧಿ ಹೇಳಿದ್ದಾರೆ ನಿರುದ್ಯೋಗಿಗಳಿಗೆ ವರ್ಷಕ್ಕೆ ಆರು ಸಾವಿರ ನೀಡಬೇಕು. ಉಚಿತ ಆರೋಗ್ಯ ಸೇವೆ ನೀಡಬೇಕು ಎಂದಿದ್ದಾರೆ. ಅನ್ನ ನೀಡಿದ್ದು, ಉದ್ಯೋಗ ನೀಡಿದ್ದು ಸಿದ್ದರಾಮಯ್ಯ ಎಂದು ಡಿಕೆಶಿ ಕುಟುಕಿದರು.

ಬಿಜೆಪಿ ನಾಯಕರ ಪ್ರಚಾರ:

ಇನ್ನು, ಬಜೆಪಿ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಡಿಸಿಎಂ ಗೋವಿಂದ ಕಾರಜೋಳ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪ್ರಚಾರ ಮಾಡಿದರು. ಮೂವರು ಮಸ್ಕಿ ಕ್ಷೇತ್ರದ ವಿವಿಧೆಡೆ ಭರ್ಜರಿ ಮತ ಬೇಟೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ಜಾತಿ ಆಧಾರದಲ್ಲಿ ಕಾಂಗ್ರೆಸ್ ಮತ ಕೇಳಲು ಹೊರಟಿದೆ. ಅವರಿಗೆ ನಾಚಿಕೆಯಾಗಬೇಕು. ಮಸ್ಕಿ ತಾಲೂಕಿನಲ್ಲಿ 5A ಕಾಲುವೆಗಾಗಿ ಹೋರಾಟದ ಬಗ್ಗೆ ಆ ಭಾಗದ ರೈತರೊಂದಿಗೆ ಮಾತನಾಡಿದ್ದೇನೆ. ಈ ಭಾಗಕ್ಕೆ ಯಾವುದೋ ಮೂಲದಿಂದ ನೀರಾವರಿ ಸೌಲಭ್ಯ ಒದಗಿಸುವ ಭರವಸೆ ನೀಡಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಜನತೆ ಕಾಂಗ್ರೆಸ್​ನಿಂದ ದೂರವಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಆಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕಾಂಗ್ರೆಸ್​ನ ಯಾರೇ ಮುಖಂಡರು ಬಂದು ಪ್ರಚಾರ ಮಾಡಿದರೂ ಬದಲಾವಣೆ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಯತ್ನಾಳ್​​ಗೆ ಹುಚ್ಚು ಹಿಡಿದಿದೆ, ಸಿದ್ದರಾಮಯ್ಯ ಜೆಡಿಎಸ್​​ನಿಂದ ಬರುವಾಗ ಸೇಲ್ ಆಗಿದ್ರಾ?; ರೇಣುಕಾಚಾರ್ಯ ವಾಗ್ದಾಳಿ

ರಾಯರಡ್ಡಿ ಅನಾಚಾರದಿಂದ ಬಿಜೆಪಿ ಗೆಲ್ಲುತ್ತದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಇದು ಸಿರಾ ಹಾಗು ಕೆ ಆರ್ ಪೇಟೆ ಜನರಿಗೆ ಮಾಡಿದ ಅವಮಾನ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡರು 25 ಸಾವಿರ ಅಂತರದಿಂದ ಗೆಲುವು ಸಾಧಿಸುತ್ತಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 3 ಲಕ್ಷ ಮತಗಳ ಅಂತರದಿಂದ ಗೆಲುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಸಿದ್ದರಾಮಯ್ಯ ಮಾತನಾಡಿದಕ್ಕೆ ಸಿಡಿಮಿಡಿಗೊಂಡ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹೀಗೆ ಹಗುರವಾಗಿ ಮಾತನಾಡಬಾರದು. ಪ್ರಧಾನಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜ್ಯದಲ್ಲಿ ಬಿಎಸ್​ವೈ ಉತ್ತಮ ಆಡಳಿತ ನೀಡಲು ಎಲ್ಲಾ ಪ್ರಯತ್ನಗಳು ಮಾಡುತ್ತಿದ್ದಾರೆ ಎಂದು ತಿಳಿಹೇಳಿದರು.

ಇಂದು ಬಿಜೆಪಿ ಹಾಗು ಕಾಂಗ್ರೆಸ್ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಎಲ್ಲಿಯೂ ಕೊವಿಡ್ ನಿಯಮಾವಳಿ ಪಾಲನೆಯಾಗುತ್ತಿಲ್ಲ. ಕೊವಿಡ್ ನಿಯಮಾವಳಿಗಳು ರಾಜಕಾರಣಿಗಳಿಗಲ್ಲ, ಕೇವಲ ಜನಸಾಮನ್ಯರಿಗೆ ಎಂಬಂತೆ ಇತ್ತು.

ವರದಿ: ಶರಣಪ್ಪ ಬಾಚಲಾಪುರ
Published by:Vijayasarthy SN
First published: