ಪುತ್ತೂರಿನಲ್ಲಿನ್ನೂ ಕಸಕ್ಕೆ ಭಾರೀ ಡಿಮ್ಯಾಂಡು; ಹಸಿಕಸದಿಂದ ಉತ್ಪಾದನೆ ಆಗಲಿದೆ ಬಯೋ ಗ್ಯಾಸ್...!

ಸಂಗ್ರಹಗೊಳ್ಳುವ ಅನಿಲವನ್ನು ಮಂಗಳೂರಿನ ಎಂ.ಆರ್.ಪಿ.ಎಲ್ ಗೂ ಸಾಗಿಸುವ ಯೋಜನೆಯನ್ನೂ ರೂಪಿಸಲಾಗಿದ್ದು, ಕಂಪನಿಗಳು ಈ ರೀತಿ ಉತ್ಪಾದಿಸುವ ಅನಿಲವನ್ನು ಪಡೆದುಕೊಳ್ಳಬೇಕು ಎನ್ನುವ ನಿಯಮವೂ ಕೇಂದ್ರ ಸರಕಾರದ್ದಾಗಿದೆ. ಘನತ್ಯಾಜ್ಯಗಳ ಮೂಲಕ ಜೈವಿಕ ಅನಿಲ ಉತ್ಪಾದಿಸುವ ರಾಜ್ಯದ ಮೊದಲ ಪ್ರೈವೇಟ್, ಪಬ್ಲಿಕ್ ಸಹಭಾಗಿತ್ವದ ಘಟಕವೂ ಇದಾಗಿದೆ.

ಪುತ್ತೂರು ನಗರಸಭೆ.

ಪುತ್ತೂರು ನಗರಸಭೆ.

  • Share this:
ಪುತ್ತೂರು: ಘನತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಎದುರಿಸದ ಯಾವುದೇ ಸ್ಥಳೀಯಾಡಳಿತ ರಾಜ್ಯದಲ್ಲಿಲ್ಲ. ಗ್ರಾಮ ಪಂಚಾಯತ್ ಸೇರಿದಂತೆ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹೀಗೆ ಎಲ್ಲಾ ವ್ಯವಸ್ಥೆಯಲ್ಲೂ ಘನತ್ಯಾಜ್ಯದ್ದೇ ದೊಡ್ಡ ತಲೆನೋವು. ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಗೆ ಇನ್ನು ಎಷ್ಟು ಕಸವಿದ್ದರೂ ಬೇಕು ಎನ್ನುವ ಯೋಜನೆಯೊಂದು ಸಿದ್ಧಗೊಳ್ಳುತ್ತಿದೆ. ನಗರಸಭೆ ವ್ಯಾಪ್ತಿಯಿಂದ ಸಂಗ್ರಹಿಸಿದ ಕಸದಿಂದ ಜೈವಿಕ ಅನಿಲ ತಯಾರಿಸುವ ಯೋಜನೆಗೆ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು, ಪಬ್ಲಿಕ್, ಪ್ರೈವೇಟ್ ಸಹಭಾಗಿತ್ವದ ರಾಜ್ಯದ ಮೊದಲ ಯೋಜನೆ ಇದಾಗಿದೆ.

ಕಸ ವಿಲೇವಾರಿಯೇ ಇದೀಗ ದೇಶದ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎನ್ನುವ ಹಂತಕ್ಕೆ ತಲುಪಿದೆ. ರಸ್ತೆ ಬದಿ, ನದಿ, ಹೊಳೆ, ಚರಂಡಿ ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ವಿಷಯವಾಗಿದ್ದು, ಈ ಕಸವನ್ನು ವ್ಯವಸ್ಥಿತವಾಗಿ ನಿರ್ವಹಿಸುವುದೇ ಸ್ಥಳೀಯಾಡಳಿತಗಳಿಗೆ ತಲೆನೋವಿನ ವಿಚಾರವಾಗಿದೆ. ಒಂದೆಡೆ ಗ್ರಾಮಪಂಚಾಯತ್ ನಿಂದ ಹಿಡಿದು ಮಹಾನಗರ ಪಾಲಿಕೆವರೆಗೆ ಮನೆ ಮನೆಯಿಂದ ಕಸಗಳನ್ನು ಸಂಗ್ರಹಿಸುವ ವ್ಯವಸ್ಥೆ ಜಾರಿಯಲ್ಲಿದ್ದರೂ, ಇನ್ನೊಂದೆಡೆ ಜನ ಕಸವನ್ನು ರಸ್ತೆ ಬದಿ, ನದಿಗೆ ಎಸೆಯುವ ವ್ಯವಸ್ಥೆಯೂ ಜಾರಿಯಲ್ಲಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರನ್ನು ಹೊರತುಪಡಿಸಿದರೆ, ದೊಡ್ಡ ನಗರವಾಗಿರುವ ಪುತ್ತೂರಿನಲ್ಲೂ ಈ ಸಮಸ್ಯೆ ಹೆಚ್ಚಾಗಿದ್ದು, ಈ ಸಮಸ್ಯೆಗೆ ಇದೀಗ ಮುಕ್ತಿ ದೊರೆಯುವ ಕಾಲ ಸಮೀಪಿಸಿದೆ.

ಪುತ್ತೂರು ನಗರಸಭೆ ಹಾಗೂ ಪುತ್ತೂರು ರೋಟರಿ ಪೂರ್ವ ಘಟಕದ ಸಹಯೋಗತ್ವದಲ್ಲಿ ನಗರಸಭೆಯಿಂದ ಸಂಗ್ರಹವಾದ ಘನತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದನೆ ಘಟಕವು ಕಾರ್ಯಾರಂಭಗೊಳ್ಳಲಿದ್ದು, ಮುಂದಿನ ಕೆಲವೇ ತಿಂಗಳಿನಲ್ಲಿ ಈ ಘಟಕ ಸೇವೆಗೆ ಸಿದ್ಧಗೊಳ್ಳಲಿದೆ. ಘಟಕಕ್ಕಾಗಿ 4.15 ಕೋಟಿ ರೂಪಾಯಿ ವೆಚ್ಚವನ್ನು ರೋಟರಿ ಸಂಸ್ಥೆಯೇ ಭರಿಸಲಿದ್ದು, ಘಟಕಕ್ಕೆ ಬೇಕಾದ ಹಸಿ ಕಸವನ್ನು ನಗರಸಭೆ ಪೂರೈಸಲಿದೆ. ಪುತ್ತೂರು ನಗರಸಭೆ ದಿನವೊಂದಕ್ಕೆ ಒಟ್ಟು 18 ಟನ್ ಕಸವನ್ನು ತನ್ನ 17 ವಾಹನಗಳಲ್ಲಿ ಸಂಗ್ರಹಿಸುತ್ತಿದ್ದು, ಇದರಲ್ಲಿ 8 ಟನ್ ಹಸಿಕಸ ಹಾಗೂ ಉಳಿದ ಕಸಗಳು ಸೇರಿಕೊಂಡಿದೆ. ಅನಿಲ ಘಟಕಕ್ಕೆ ಮುಖ್ಯವಾಗಿ ಹಸಿಕಸವೇ ಬೇಕಾಗಿದ್ದು, ಪ್ರತಿದಿನ 10 ಟನ್ ಕಸದ ಅಗತ್ಯತೆಯನ್ನು ಪುತ್ತೂರು ನಗರಸಭೆ ಪೂರೈಸಬೇಕಿದೆ. ಈ ನಿಟ್ಟಿನಲ್ಲಿ ನಗರಸಭೆಯ ಪ್ರತೀ ಮನೆಯಿಂದಲೂ ಕಸ ಸಂಗ್ರಹಿಸುವ ಪ್ರಕ್ರಿಯೆ ನಡೆಸುವ ಜೊತೆಗೆ ಪಕ್ಕದ ಗ್ರಾಮಪಂಚಾಯತ್ ಗಳಲ್ಲಿ ಸಂಗ್ರಹವಾದ ಕಸಗಳನ್ನೂ ಸೇರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಮೂಲಕ 10 ಟನ್ ಕಸವನ್ನು ಜೋಡಿಸಲು ನಿರ್ಧರಿಸಲಾಗಿದೆ ಎಂದು ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: PM-KISAN: ಕಿಸಾನ್ ಸಮ್ಮಾನ್ ಯೋಜನೆಯಡಿ 9.5 ಕೋಟಿ ರೈತರಿಗೆ 20 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ!

4.15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಜೈವಿಕ ಅನಿಲ ಉತ್ಪಾದನಾ ಘಟಕ ಮುಖ್ಯವಾಗಿ ಹಸಿಕಸವನ್ನೇ ಬಳಸಲಾಗುತ್ತದೆ. ಆದರೆ ಸಂಗ್ರಹಗೊಂಡ ಒಣ ಕಸವನ್ನೂ ನೂತನ ತಂತ್ರಜ್ಞಾನ ಬಳಸಿ ಅನಿಲ ಉತ್ಪಾದನೆಯಲ್ಲಿ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಪುತ್ತೂರಿನ ಬನ್ನೂರು ಡಂಪಿಂಗ್ ಯಾರ್ಡ್ ನಲ್ಲಿ ಸುಮಾರು 2 ಎಕರೆ ಭೂ ಪ್ರದೇಶವನ್ನು ಬಳಸಿಕೊಂಡು ಈ ಘಟಕ ನಿರ್ಮಾಣಗೊಳ್ಳಲಿದ್ದು, ಘಟಕ ಕಾರ್ಯಾರಂಭಗೊಳಿಸಿದ ಬಳಿಕ ಈ ಭಾಗದ ಜನ ಡಂಪಿಂಗ್ ಯಾರ್ಡ್ ನ ಸಮಸ್ಯೆಯಿಂದ ಮುಕ್ತಗೊಳ್ಳಲಿದ್ದಾರೆ. ಪ್ರತೀ ಬೇಸಿಗೆಕಾಲದಂದು ಪ್ರಸ್ತುತ ಇರುವ ಡಂಪಿಂಗ್ ಯಾರ್ಡ್ ಗೆ ಬೆಂಕಿ ಬೀಳುವ ಮೂಲಕ ಸುತ್ತಮುತ್ತಲಿನ ಪ್ರದೇಶದ ಜನ ನರಕಯಾತನೆ ಅನುಭವಿಸುತ್ತಿದ್ದ ದಿನಗಳೂ ಜೈವಿಕ ಅನಿಲ ಘಟಕ ಆರಂಭದ ಬಳಿಕ ಶಾಶ್ವತವಾಗಿ ಮರೆಯಾಗಲಿದೆ. ಘಟಕದಲ್ಲಿ ಉತ್ಪಾದನೆಗೊಳ್ಳುವ ಜೈವಿಕ ಅನಿಲವನ್ನು ಪುತ್ತೂರು ನಗರದ ಜನತೆಗೆ ವಿತರಿಸುವ ವ್ಯವಸ್ಥೆಯನ್ನು ಈ ಘಟಕ ನಿರ್ವಹಿಸುತ್ತಿರುವ ಸಂಸ್ಥೆ ಮಾಡಲಿದ್ದು, ಉತ್ಪಾದನೆಗೊಳ್ಳುವ ಪ್ರತೀ ಕೆ.ಜಿ ಅನಿಲಕ್ಕೂ 1 ರೂ. ರಾಜಸ್ವವನ್ನು ನಗರಸಭೆಗೆ ನೀಡಲಾಗುತ್ತದೆ ಎನ್ನುತ್ತಾರೆ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಕೃಷ್ಣ ನಾರಾಯಣ ಮುಳಿಯ.

ಸಂಗ್ರಹಗೊಳ್ಳುವ ಅನಿಲವನ್ನು ಮಂಗಳೂರಿನ ಎಂ.ಆರ್.ಪಿ.ಎಲ್ ಗೂ ಸಾಗಿಸುವ ಯೋಜನೆಯನ್ನೂ ರೂಪಿಸಲಾಗಿದ್ದು, ಕಂಪನಿಗಳು ಈ ರೀತಿ ಉತ್ಪಾದಿಸುವ ಅನಿಲವನ್ನು ಪಡೆದುಕೊಳ್ಳಬೇಕು ಎನ್ನುವ ನಿಯಮವೂ ಕೇಂದ್ರ ಸರಕಾರದ್ದಾಗಿದೆ. ಘನತ್ಯಾಜ್ಯಗಳ ಮೂಲಕ ಜೈವಿಕ ಅನಿಲ ಉತ್ಪಾದಿಸುವ ರಾಜ್ಯದ ಮೊದಲ ಪ್ರೈವೇಟ್, ಪಬ್ಲಿಕ್ ಸಹಭಾಗಿತ್ವದ ಘಟಕವೂ ಇದಾಗಿದೆ.
Published by:HR Ramesh
First published: