news18-kannada Updated:June 24, 2020, 7:24 AM IST
ಡ್ರ್ಯಾಗ್ ರೇಸ್
ದೇವನಹಳ್ಳಿ: ವಾರಾಂತ್ಯ ಆಯ್ತು ಎಂದ್ರೆ ಸಾಕು ಪಡ್ಡೆ ಹುಡುಗರಿಗೆ ಮೋಜು…. ಬೈಕ್ ಏರಿ ಹೆದ್ದಾರಿಗಳಲ್ಲಿ ಜಾಲಿ ರೈಡ್ ಹೊರಟೇ ಬಿಡ್ತಾರೆ… ಆದ್ರೆ ಇದರಿಂದ ತೊಂದರೆಗೆ ಒಳಗಾಗೋರು ಸಾರ್ವಜನಿಕರು. ವೀಲಿಂಗ್, ಚಾಲೆಂಜಿಂಗ್ ರೇಸ್, ಡ್ರಾಗ್ ಮಾಡ್ತಾ ಸಾರ್ವಜಿನಿಕರಿಗೆ ಕಿರಿ-ಕಿರಿ ಮಾಡ್ತಾ ಕರ್ಕಶ ಶಬ್ದದ ಬೈಕ್ಗಳು ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಹಾವಳಿ ಕೊಡುತ್ತಲೇ ಇವೆ. ಕೆಲ ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಡ್ರಾಗ್ ಮಾಡ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಬೆನ್ನಲ್ಲೇ ಸಾರ್ವಜನಿಕರು ಹೆದರಿದ್ದಾರೆ.
ಮೋಜು, ಮಸ್ತಿ, ಚಲ್ಲಾಟ, ಕೀಟಲೆಗಳು ಬೇರೆಯವರಿಗೆ ಕಿರಿ-ಕಿರಿ ಆಗದಂತೆ ಇರಬೇಕು ಎಂದು ಸರ್ಕಾರ, ಪೊಲೀಸರು ಎಷ್ಟು ಮನವಿ, ಕಾನೂನು ರೂಪಿಸಿದ್ರೂ ಪಡ್ಡೆ ಹೈಕ್ಳು ಮಾತ್ರ ನಾವಿರೋದೇ ಕಾನೂನು ಮುರಿಯೋಕೆ ಎಂದು ಮಾಡಿದ್ದೇ ಮಾಡುತ್ತಿದ್ದಾರೆ. ಹೇಳಿದ ಮಾತು ಕೇಳದೇ ಮಾಡಿಕೊಂಡ ಅವಾಂತರಕ್ಕೆ ಮೂವರು ಹುಡುಗರು ಯಲಹಂಕ ಜಿಕೆವಿಕೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 7 ನಡು ರಸ್ತೆಯಲ್ಲೇ ಜೀವ ಬಿಟ್ಟಿದ್ದರು.
ಬೆಂಗಳೂರು ದೇವನಹಳ್ಳಿ ರಾಷ್ಟ್ರೀಯ ಹೆದ್ದರಿ 7 ರಲ್ಲಿ ಎಗ್ಗಿಲ್ಲದೆ ಜಾಲಿ ರೈಡ್ ಹೆಸರಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಾ, ಬೈಕ್ ಡ್ರಾಗ್, ವೀಲಿಂಗ್, ಚಾಲೆಂಗ್ ರೇಸ್ಗಳನ್ನ ಮಾಡ್ತಾ ಗುಂಪು ಗುಂಪಾಗಿ ಸಾರ್ವಜನಿಕರಿಗೆ ಕಿರುಕುಳ ನೀಡುವ ಪಡ್ಡೆಗಳ ಹಾವಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕ್ತಿದ್ದಾರೆ. ಕಳೆದ ವರ್ಷ ನ್ಯೂಸ್18 ನ್ನಡ ವರದಿ ಮಾಡಿದ ಬಳಿಕ ತುಸು ತಗ್ಗಿತ್ತಾದ್ರೂ, ಕದ್ದು ಮುಚ್ಚಿ ಹಾವಳಿ ಕೊಡ್ತಿದ್ದ ಪಡ್ಡೆಹೈಕಳ ಕಿತಾಪತಿ ಹೆಚ್ಚಾಗಿದೆ.
ಇದನ್ನೂ ಓದಿ: ಜನರು ಜಾಗೃತರಾದರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ: ಸಚಿವ ಜಗದೀಶ್ ಶೆಟ್ಟರ್
ಎನ್.ಹೆಚ್. 7ರ ರಸ್ತೆ ಸುಸಜ್ಜಿತವಾಗಿದ್ದು ಪ್ರವಾಸಿ ತಾಣಗಳು ಬಂದ್ ಆಗಿವೆ. ವಾಹನ ಸಂಚಾರ ವಿರಳವಾಗಿವೆ. ಕೊರೋನಾದಿಂದ ಸಾರ್ವಜನಿಕರು ರಸ್ತೆಗೆ ಬರಲು ಹೆದರುತ್ತಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ನಾಗವಾರ ಸಮೀಪದ ಗೋವಿಂದರಾಜಪುರ ಏರಿಯಾದ ಪಡ್ಡೆಗಳ ಗುಂಪು ಆಲ್ಟರ್ ಮಾಡಿದ್ದ 10ಕ್ಕೂ ಹೆಚ್ಚು ಬೈಕುಗಳ ಮೇಲೆ ಬಂದು ವೀಲಿಂಗ್, ಚಾಲೆಂಜಿಂಗ್ ರೇಸ್ ಮಾಡಲು ಹೋಗಿ ಕಂಟ್ರೋಲ್ ತಪ್ಪಿದ್ದವು. ಎರಡು ಬೈಕ್ಗಳು ಪಲ್ಟಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದರು. 8ಕ್ಕೂ ಹೆಚ್ಚು ಜೊತೆಗಾರರು ಸ್ಥಳದಿಂದ ಕಾಲ್ಕಿತ್ತಿದ್ದರು.
ಭಾನುವಾರ ಜನಸಂದಣಿ ಕಡಿಮೆ ಇದ್ದ ಕಾರಣ ಭಾರಿ ಅನಾಹುತು ತಪ್ಪಿದರೂ ಬೈಕ್ನಲ್ಲಿದ್ದ ಮೂವರು ನಡು ರಸ್ತೆಯಲ್ಲೆ ಕೊನೆಯುಸಿರು ಎಳೆದದ್ದು ಹೌದು. ದೊಡ್ಡವರ ಮಾತು ಕೇಳದೆ ಬೈಕ್ ಹತ್ತಿ ಜಾಲಿ ರೈಡ್ ಹೆಸರಲ್ಲಿ ಮಾಡಿಕೊಳ್ಳುವ ಇಂಥ ಅವಾಂತರಗಳಿಗೆ ಕೊನೆಗೆ ದೂಷಿಸೋದು ಪೊಲೀಸರು ಮತ್ತು ಪೋಷಕರನ್ನೇ.
ಯೌವನದಲ್ಲಿ ಮೋಜು, ಮಸ್ತಿ ಇರಬೇಕು ನಿಜ. ಆದ್ರೆ ಅನಾಹುತ, ಬೇರೊಬ್ಬರಿಗೆ ಕಿರಿಕಿರಿ ಮಾಡುವ ಇಂಥ ಮೋಜು ಬೇಕಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮೋಜು-ಮಸ್ತಿ ಸಾವಿನ ರೂಪದಲ್ಲಿ ಬಂದ್ರೆ ಜತೆಗಾರರು ಬರೋಲ್ಲ, ಹೋದ ಪ್ರಾಣವೂ ಹಿಂದಿರುಗಿ ಬರೋಲ್ಲ. ಮೋಜು-ಮಸ್ತಿ ಆರೋಗ್ಯಕರವಾಗಿರಬೇಕು, ಹೆತ್ತವರ ನೋವಿಗೆ ಕಾರಣವಾಗಬಾರದು. ಯುವಕರು ಎಚ್ಚರ ವಹಿಸಬೇಕೆಂಬುದು ನ್ಯೂಸ್ 18 ಕಳಕಳಿ.
First published:
June 24, 2020, 7:24 AM IST