ವಿಜಯಪುರ, (ಮಾ. 20): ಗುಮ್ಮಟ ನಗರಿ ವಿಜಯಪುರದಲ್ಲಿ ನಿನ್ನೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯಪುರ ಬಿಎಸ್ಎನ್ಎಲ್ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳ ತಂಡ ಸುಮಾರು 9 ಗಂಟೆಗೂ ಹೆಚ್ಚು ಕಾಲ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ನಾನಾ ಆರೋಪಗಳ ಹಿನ್ನೆಲೆಯಲ್ಲಿ ದೆಹಲಿಯಿಂದ ಆಗಮಿಸಿದ್ದ ಐದು ಜನ ಅಧಿಕಾರಿಗಳ ಸಿಬಿಐ ತಂಡ ದೂರು ಆಧರಿಸಿ ತನಿಖೆ ನಡೆಸಿದೆ.
ಈಗಾಗಲೇ ಹಲವಾರು ಸಿಬ್ಬಂದಿಗಳು ವಯೋ ನಿವೃತ್ತಿ ಮತ್ತು ಸೇವಾ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಬೃಹದಾಕಾರದ BSNL ಕಚೇರಿ ಬಹುತೇಕ ಖಾಲಿ ಇದೆ. ಶುಕ್ರವಾರ ಮಧ್ಯಾಹ್ನ ಏಕಾಏಕಿ ಬಿಎಸ್ಎನ್ಎಲ್ ಕಚೇರಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳು ಮೊದಲಿಗೆ ಕಚೇರಿಯ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿಸಿದ್ದಾರೆ. ನಂತರ ವಿಚಾರಣೆ ನಡೆಸಿದ್ದಾರೆ. ವಿಜಯಪುರದ ಬಿ ಎಸ್ ಎನ್ ಎಲ್ ಕಚೇರಿಯಲ್ಲಿ ನಾನಾ ಯೋಜನೆಗಳಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳಿವೆ. ಅಲ್ಲದೇ, ಅಲ್ಲಿನ ಸಿಬ್ಬಂದಿಯೂ ಸರಿಯಾಗಿ ಕೆಲಸ ಮಾಡದೇ ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಎಂಬ ದೂರೂಗಳೂ ಇವೆ. ಮತ್ತೆ ಕೆಲವು ಸಿಬ್ಬಂದಿ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದಾರೆ ಎಂದೂ ಕಚೇರಿಯ ಮೂಲಗಳು ಆಗಾಗ ಆರೋಪಿಸುತ್ತಲೇ ಇವೆ.
ಇದನ್ನೂ ಓದಿ: ಕೊಡಗು: ಮೂವರ ಬಲಿ ಪಡೆದಿದ್ದ ನರಭಕ್ಷಕ ಹುಲಿ, ಕೊನೆಗೂ ಗುಂಡೇಟು ತಿಂದು ಸಾವು!
ಈ ಮಧ್ಯೆ, ಈಗ ನಡೆದ ಸಿಬಿಐ ದಾಳಿಯ ಹಿಂದೆ ಕಾಮಗಾರಿಯೊಂದರಲ್ಲಿ ಭಾರಿ ಪ್ರಮಾಣದಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಬಸವೇಶ್ವರ ಸರ್ಕಲ್ ಬಳಿ ಇರುವ ಬಿ ಎಸ್ ಎನ್ ಎಲ್ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಯ ಫೈಬರ್ ಕೇಬಲ್ ಅಳವಡಿಕೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಬಿ ಎಸ್ ಎನ್ ಎಲ್ ವತಿಯಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಫೈಬರ್ ಕೇಬಲ್ ಸಂಪರ್ಕ ನೀಡಬೇಕಿತ್ತು. ಆದರೆ, ಕೆಲವು ಪಂಚಾಯಿತಿಗಳಿಗೆ ಮಾತ್ರ ಸಂಪರ್ಕ ನೀಡಲಾಗಿದೆ. ಅಷ್ಟೇ ಅಲ್ಲ, ಬಹುತೇಕ ಗ್ರಾ. ಪಂ. ಗಳಿಗೆ ಫೈಬರ್ ಕೇಬಲ್ ಅಳವಡಿಸಲಾಗಿದೆ ಎಂದು ಬಿಲ್ ಪಾವತಿ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ, ಫೈಬರ್ ಕೇಬಲ್ ಅಳವಡಿಕೆ ಗುತ್ತಿಗೆದಾರರಿಂದ ಹಣ ಪಡೆದು ಅಕ್ರಮ ನಡೆಸಲು ಇಲ್ಲಿನ ಸಿಬ್ಬಂದಿ ಸಹಕರಿಸಿದ್ದಾರೆ ಎಂದೂ ದೂರಲಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳಿಂದ ದಾಳಿ ನಡೆದಿದೆ. ಸುಮಾರು 9 ಗಂಟೆಗೂ ಹೆಚ್ಚು ಕಾಲ ಬಿ ಎಸ್ ಎನ್ ಎಲ್ ಕಚೇರಿಯಲ್ಲಿ ನಾನಾ ಸಿಬ್ಬಂದಿಯ ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ನಾನಾ ದಾಖಲಾತಿಗಳ ತಪಾಸಣೆ ಕೂಡ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ಮತ್ತು ತಪಾಸಣೆ ಬಳಿಕ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ಐದು ಜನ ಸಿಬಿಐ ಅಧಿಕಾರಿಗಳ ತಂಡ ವಾಪಸ್ಸಾಗಿದೆ.
(ವರದಿ: ಮಹೇಶ ವಿ. ಶಟಗಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ