news18-kannada Updated:December 29, 2020, 8:02 AM IST
ಟೊಯೋಟಾ ಕಾರ್ಮಿಕರಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ
ರಾಮನಗರ(ಬಿಡದಿ): ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಂಪನಿ ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ಕಳೆದ 50 ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಂಪನಿಯ ಆಡಳಿತ ಮಂಡಳಿ ಈಗಾಗಲೇ 65 ಜನ ಕಾರ್ಮಿಕರನ್ನ ಕೆಲಸದಿಂದ ಅಮಾನತ್ತು ಮಾಡಿದೆ. 7 ಜನ ಕಾರ್ಮಿಕರನ್ನ ಕೆಲಸದಿಂದಲೇ ವಜಾ ಮಾಡಿದೆ. ಒಟ್ಟು 72 ಕಾರ್ಮಿಕರು ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ.
ರಾಜ್ಯ ಸರ್ಕಾರದ ಸಂಧಾನವೂ ವಿಫಲ: ಈಗಾಗಲೇ ಟೊಯೋಟಾ ಕಾರ್ಮಿಕ ಒಕ್ಕೂಟ ಹಾಗೂ ಆಡಳಿತ ಮಂಡಳಿಯವರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ ನಾರಾಯಣ ಸೇರಿದಂತೆ ಹಲವರು ಸಭೆ ನಡೆಸಿ ಸಂಧಾನ ಮಾಡಿಸಲು ಮುಂದಾಗಿದ್ದರೂ ಸಹ ಅದು ಯಶಸ್ವಿಯಾಗಿಲ್ಲ. ಕೆಲ ದಿನಗಳ ಹಿಂದೆ ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿ, ಕಾರ್ಮಿಕರು ಅವರ ಬೇಡಿಕೆಗಳನ್ನ ಕಾರ್ಮಿಕ ನ್ಯಾಯಲಯದಲ್ಲಿ ಪ್ರಶ್ನಿಸಿ ಬಗೆಹರಿಸಿಕೊಳ್ಳಲಿ ಎಂದು ಹೇಳಿದ್ದರು.
ಸಂಸದ ಡಿ.ಕೆ. ಸುರೇಶ್ ಎಂಟ್ರಿಯಿಂದ ಹೋರಾಟ ಚುರುಕು:
ಟೊಯೋಟಾ ಕಾರ್ಮಿಕರ ಸಮಸ್ಯೆಯ ವಿಚಾರವಾಗಿ ಸಂಸದ ಡಿ.ಕೆ. ಸುರೇಶ್ ಕಳೆದ ಕೆಲದಿನಗಳ ಹಿಂದೆ ಬಿಡದಿಯ ಈಗಲ್ಟನ್ ರೆಸಾರ್ಟ್ನಲ್ಲಿ ಕಾರ್ಮಿಕ ಒಕ್ಕೂಟ ಹಾಗೂ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿದ್ದರು. ಆದರೆ ಸಭೆಯಲ್ಲಿ ಡಿ.ಕೆ. ಸುರೇಶ್ ಮಾತಿಗೂ ಬೆಲೆಕೊಡದ ಟೊಯೋಟಾ ಆಡಳಿತ ಮಂಡಳಿಯವರು ಅಲ್ಲಿಯೂ ಸಹ ಸಂಧಾನಕ್ಕೆ ಒಪ್ಪಲಿಲ್ಲ. ಈ ಹಿನ್ನೆಲೆ ಡಿ.ಕೆ. ಸುರೇಶ್ ಮಾತನಾಡಿ ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಬೆಂಬಲವಿರಲಿದೆ. ಟೊಯೋಟಾ ಆಡಳಿತ ಮಂಡಳಿಯವರ ದಬ್ಬಾಳಿಕೆ ನಡೆಯಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: SL Dharme Gowda Death - ರೈಲಿಗೆ ತಲೆಕೊಟ್ಟು ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ
ರಕ್ತದಿಂದ ಬರೆದು ಪ್ರಧಾನಿ ಮೋದಿಗೆ ಮನವಿ:
ಟೊಯೋಟಾ ಕಾರ್ಮಿಕರು ತಮ್ಮ ಹೋರಾಟವನ್ನ ಮತ್ತಷ್ಟು ಬಿಗಿಗೊಳಿಸಿ ರಕ್ತದಾನ ಚಳವಳಿ ಮಾಡಿ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸುವ ಪ್ರಯತ್ನ ಮಾಡಿದರು. ಜೊತೆಗೆ ಕಾರ್ಮಿಕರು ದಾನ ಮಾಡಿದ ರಕ್ತದಿಂದಲೇ ಬಿಳಿ ಬಟ್ಟೆಯ ಮೇಲೆ ವಿವಿಧ ರೀತಿಯ ಸ್ಲೋಗನ್ಗಳನ್ನ ಬರೆದು ಸಿಎಂ ಯಡಿಯೂರಪ್ಪಗೆ ಹಾಗೂ ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ. ನ್ಯಾಯಯುತವಾಗಿ ಬದುಕು ನಡೆಸಲು ಅವಕಾಶ ಮಾಡಿಕೊಡಿ ಎಂದು ಪ್ರಧಾನಿ ಮೋದಿಗೆ ಕಾರ್ಮಿಕರು ಕೋರಿಕೊಂಡಿದ್ದಾರೆ.ಒಟ್ಟಾರೆ ಕಾರ್ಮಿಕ ಒಕ್ಕೂಟ ಹಾಗೂ ಆಡಳಿತ ಮಂಡಳಿಯ ನಡುವೆ ನಡೆಯುತ್ತಿರುವ ಶೀತಲ ಸಮರ ಮುಗಿಯುವ ಸಾಧ್ಯತೆ ಕಡಿಮೆಯಾಗಿದೆ. ಆದರೆ ಇವರಿಬ್ಬರ ಜಗಳವನ್ನ ಬಿಡಿಸಲು ರಾಜ್ಯ ಸರ್ಕಾರ ಕೂಡ ಮುಂದೆ ಬರುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಹೋರಾಟ ಪ್ರಧಾನಿ ಮೋದಿ ಅಂಗಳಕ್ಕೂ ಹೋಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ರಾಜ್ಯ ಸರ್ಕಾರ ಕಾರ್ಮಿಕರ ಹೋರಾಟವನ್ನ ನಿರ್ಲಕ್ಷ್ಯ ಮಾಡ್ತಿರುವ ಹಿನ್ನೆಲೆ ಈಗ ಕಾರ್ಮಿಕರು ತಮ್ಮ ಹೋರಾಟವನ್ನ ಕೇಂದ್ರದ ಮಟ್ಟಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ.
ವರದಿ: ಎ.ಟಿ. ವೆಂಕಟೇಶ್
Published by:
Vijayasarthy SN
First published:
December 29, 2020, 8:02 AM IST