‘ಹಾಳುಮೂಳು ತಿನ್ನೋರಿಗೆ ಇಡ್ಲಿ ಟೇಸ್ಟ್ ಏನು ಗೊತ್ತು?’ - ಬ್ರಿಟನ್ ಪ್ರೊಪೆಸರ್​ಗೆ ಬಿಡದಿ ಹೋಟೆಲ್ ಮಾಲೀಕ ತಿರುಗೇಟು

ಜಗತ್ತಿನ ಮಹಾಬೋರಿಂಗ್ ವಸ್ತುಗಳಲ್ಲಿ ಇಡ್ಲಿಯೂ ಒಂದು ಎಂದು ಬ್ರಿಟನ್ ಪ್ರೊಫೆಸರ್ ಎಡ್ವರ್ಡ್ ನೀಡಿದ ಹೇಳಿಕೆಗೆ ಬಿಡದಿಯ ಹೋಟೆಲ್ ಮಾಲೀಕರೊಬ್ಬರು ಕಿಡಿಕಾರಿದ್ಧಾರೆ. ಮಾಂಸ, ಹಾಳುಮೂಳು ತಿನ್ನೋ ಆ ವಿದೇಶಿಗನ ನಾಲಗೆಗೆ ಇಡ್ಲಿ ಹೇಗೆ ರುಚಿಸುತ್ತೆ ಎಂದು ಶಶಿ ಕುಮಾರ್ ಹೇಳುತ್ತಾರೆ.

ಬಿಡದಿಯ ಶ್ರೀ ಶಿವದರ್ಶನ ಹೋಟೆಲ್​ನಲ್ಲಿ ಇಡ್ಲಿ

ಬಿಡದಿಯ ಶ್ರೀ ಶಿವದರ್ಶನ ಹೋಟೆಲ್​ನಲ್ಲಿ ಇಡ್ಲಿ

  • Share this:
ರಾಮನಗರ: ಬ್ರಿಟಿಷ್ ಪ್ರೊಫೆಸರ್ ಎಡ್ವರ್ಡ್ ಆಂಡರ್ಸನ್ ಅವರು ಇಡ್ಲಿ ಮಹಾ ಬೋರಿಂಗ್ ಆಹಾರ ಎಂದು ಮಾಡಿದ ಟ್ವೀಟ್ ಇಡೀ ದಕ್ಷಿಣ ಭಾರತೀಯ ಟ್ವೀಟಿಗರನ್ನು ರೊಚ್ಚಿಗೆಬ್ಬಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ತಟ್ಟೆ ಇಡ್ಲಿಗೆ ಪ್ರಖ್ಯಾತಿ ಪಡೆದುಕೊಂಡಿರುವ ಬಿಡದಿಯ ಹೋಟೆಲ್ ಮಾಲೀಕರೊಬ್ಬರು ಬ್ರಿಟಿಷ್ ಪ್ರೊಫೆಸರ್ ವಿರುದ್ಧ ಗರಂ ಆಗಿದ್ಧಾರೆ. ದೇಶವಿದೇಶಗಳಿಂದ ಬರುವ ಪ್ರವಾಸಿಗರಿಂದ ಹಿಡಿದು ಸ್ಥಳೀಯ ಜನರವರೆಗೆ ಬಿಡದಿಯ ತಟ್ಟೆ ಇಡ್ಲಿ ಅಚ್ಚುಮೆಚ್ಚು. ಇಂಥ ಇಡ್ಲಿ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ ಎನ್ನುತ್ತಾರೆ ಹೋಟೆಲ್ ಉದ್ಯಮಿ ಶಶಿಕುಮಾರ್.

ಇಡ್ಲಿ ದಕ್ಷಿಣ ಭಾರತದ ಅಚ್ಚುಮೆಚ್ಚಿನ ಹಾಗೂ ಜನರು ತೀರಾ ಸಾಮಾನ್ಯವಾಗಿ ಬಳಸುವ ಆಹಾರ. ಸಾಂಪ್ರದಾಯಿಕವಾಗಿ ತಮಿಳುನಾಡು ಇಡ್ಲಿಗೆ ಖ್ಯಾತಿ. ಕರ್ನಾಟಕದಲ್ಲಿ ತಟ್ಟೆ ಇಡ್ಲಿಗೆ ಬಹಳ ಖ್ಯಾತಿ. ಅದರಲ್ಲೂ ಬಿಡದಿಯ ತಟ್ಟೆ ಇಡ್ಲಿ ತುಂಬಾ ಜನಪ್ರಿಯ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ವಿದೇಶಿ ಪ್ರವಾಸಿಗರು ಬಿಡದಿಯಲ್ಲಿ ಇಳಿದು ತಟ್ಟೆ ಇಡ್ಲಿ ತಿನ್ನುವುದನ್ನು ಮರೆಯುವುದಿಲ್ಲ. ಆದರೆ, ಬ್ರಿಟಿಷ್ ಪ್ರೊಫೆಸರ್ ಎಡ್ವರ್ಡ್ ಅವರ ನಾಲಗೆಗೆ ಇಡ್ಲಿ ರುಚಿಸದಿರುವುದು ಸೋಜಿಗವೇ ಸರಿ.

ಇನ್ನು, ಬಿಡದಿಯ ಹೋಟೆಲ್ ಉದ್ಯಮಿ ಶಶಿಕುಮಾರ್ ಅವರ ಶ್ರೀ ಶಿವದರ್ಶನ ಹೋಟೆಲ್ ಕೂಡ ತಟ್ಟೆ ಇಡ್ಲಿಗೆ ಬಹಳ ಹೆಸರುವಾಸಿ. 1950ರಲ್ಲಿ ಬಿಡದಿಯಲ್ಲಿ ತಟ್ಟೆ ಇಡ್ಲಿ ಮೊದಲು ಪ್ರಾರಂಭಿಸಿದ್ದು ಇವರ ಹೋಟೆಲ್​ನಲ್ಲೇ. ಈ ಹೋಟೆಲ್​ನಲ್ಲಿ ಏಳು ದಶಕಗಳಿಂದಲೂ ತಟ್ಟೆ ಇಡ್ಲಿಯ ಅದೇ ರುಚಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಶಶಿಕುಮಾರ್. ನಾನು ಈಗ ನಾಲ್ಕನೇ ತಲೆಮಾರಿನವ. ನನ್ನ ಮಕ್ಕಳು ಐದನೇ ತಲೆಮಾರು. ಇಡ್ಲಿ ಇಷ್ಟ ಇಲ್ಲ ಎಂದು ಹೇಳಿರುವ ಆ ವಿದೇಶಿಗನಿಗೆ ನಮ್ಮ ಇಡ್ಲಿಯ ರುಚಿ ಗೊತ್ತಿಲ್ಲ. ಅವರು ಮಾಂಸ, ಹಾಳುಮೂಳು ತಿನ್ನುತ್ತಾರೆ. ಹಾಗಾಗಿ ನಮ್ಮ ಇಡ್ಲಿ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿಲ್ಲ ಎಂದು ಶ್ರೀ ಶಿವದರ್ಶನ ಹೋಟೆಲ್ ಮಾಲೀಕರು ಹೇಳುತ್ತಾರೆ.

ಇದನ್ನೂ ಓದಿ: Baba Ka Dhaba: ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದೇ ಒಂದು ಪೋಸ್ಟ್​ನಿಂದ ಬದಲಾಯ್ತು ಈ ವೃದ್ಧ ದಂಪತಿಯ ಬದುಕು

ನಮ್ಮ ಈ ಹೋಟೆಲ್​ಗೆ ವರನಟ ಡಾ. ರಾಜಣ್ಣ, ಅಂಬರೀಷಣ್ಣ, ಯಶ್, ಸಾಧು ಕೋಕಿಲಾ, ರಂಗಾಯಣ ರಘು, ಶ್ರೀಮುರಳಿ ಸೇರಿದಂತೆ ಹಲವು ಚಿತ್ರನಟರು ಬಂದು ಇಡ್ಲಿ ತಿಂದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಇಲ್ಲಿಯ ಇಡ್ಲಿ ಸವಿದಿದ್ದಾರೆ. ಪ್ರತೀ ಶನಿವಾರ-ಭಾನುವಾರ ಇಲ್ಲಿ 3-4 ಸಾವಿರ ಮಂದಿ ಇಡ್ಲಿ ತಿನ್ನುತ್ತಾರೆ ಎಂದು ಶಶಿಕುಮಾರ್ ತಿಳಿಸುತ್ತಾರೆ.

ಶ್ರೀ ಶಿವದರ್ಶನ ಹೋಟೆಲ್ ಪ್ರಾರಂಭವಾದಾಗ ಒಂದು ಇಡ್ಲಿಗೆ ಒಂದು ಆಣೆ ಇತ್ತಂತೆ. ಈಗ ಒಂದು ಇಡ್ಲಿಗೆ 20 ರೂಪಾಯಿ ಆಗಿದೆ. ಆದರೆ, ಬೆಲೆಯಲ್ಲಿ ಬದಲಾವಣೆಯಾದರೂ ರುಚಿ ಹಾಗೇ ಇದೆ ಎನ್ನುತ್ತಾರೆ ಇಲ್ಲಿಯ ಹಳೆಯ ಗ್ರಾಹಕರು.

ಅಕ್ಟೋಬರ್ 6ರಂದು ಎಡ್ವರ್ಡ್ ಆಂಡರ್ಸನ್ ಅವರು ಈ ಪ್ರಪಂಚದ ಅತ್ಯಂತ ಬೋರಿಂಗ್ ವಸ್ತುಗಳಲ್ಲಿ ಇಡ್ಲಿ ಒಂದು ಎಂದು ಟ್ವೀಟ್ ಮಾಡಿದ್ದರು. ಜೊಮಾಟೋ ಸಂಸ್ಥೆಯ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅವರು ಆ ಟ್ವೀಟ್ ಹಾಕಿದ್ದರು. ಅವರ ಈ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತನ್ನ ಒಂದು ಟ್ವೀಟ್​ಗೆ ಇಂಥ ಪ್ರತಿಕ್ರಿಯೆ ಕಂಡು ಸ್ವತಃ ಎಡ್ವರ್ಡ್ ಅವರೇ ದಂಗಾಗಿ ಹೋಗಿದ್ದಾರಂತೆ.ಭಾರತೀಯರಿಗೆ ಆಹಾರದ ಮೇಲೆ ಇರುವ ಅಭಿಮಾನ ಹಾಗೂ ಅವರ ಹೃದಯ ವೈಶಾಲ್ಯತೆಗೂ ಯಾವುದೂ ಸಾಟಿ ಇಲ್ಲ ಎಂದು ಹೊಗಳಿರುವ ಅವರು, ಏನೇ ಆದರೂ ಇಡ್ಲಿ ಮೇಲಿನ ನನ್ನ ಅಭಿಪ್ರಾಯ ಬದಲಾಗದು ಎಂದೂ ತಮ್ಮ ಇಡ್ಲಿ ಟೀಕೆಯನ್ನು ಸಮರ್ಥಿಸಿಕೊಂಡಿದ್ಧಾರೆ.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: