ಕಾರವಾರ: ಪರಿಸರ ಉಳಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡು ಇಡೀ ಭಾರತವನ್ನ ಸೈಕಲ್ ಮೂಲಕ ಸವಾರಿ ಮಾಡುವ ಪಣ ತೊಟ್ಟಿರುವ ಪಶ್ಚಿಮ ಬಂಗಾಳದ ಪೋನಿವಾಲ್ ಕಾಂಜಿ ಇವತ್ತು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೂಲಕ ಗೋವಾ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮಾದ್ಯಮದವರಿಗೆ ಸಿಕ್ಕಿ ಮಾತನಾಡಿದರು. ಹೀಗೆ ಸೈಕಲ್ ಏರಿ ಸವಾರಿ ನಡೆಸಿರುವ ಈತ ಪಶ್ಚಿಮ ಬಂಗಾಳದ ಚಿಕ್ಕ ಹಳ್ಳಿಯವನು ಈತನ ವಯಸ್ಸು ಬರೋಬ್ಬರಿ 55, ಜನವರಿ 1 ರಿಂದ ಭಾರತ ಸುತ್ತುವ ನಿಟ್ಟಿನಲ್ಲಿ ಈತ ಪಶ್ಚಿಮ ಬಂಗಾಳದಿಂದ ಹೊರಟು ಇವತ್ತು ಕಾರವಾರ ತಲುಪಿದ್ದಾನೆ. ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ತನ್ನ ಪ್ರಯಾಣ ಬೆಳೆಸಿದ್ದಾನೆ. ಈಗಾಗಲೆ ಒಟ್ಟು 5000 ಕಿ.ಮೀ. ಪ್ರಯಾಣ ಪೂರ್ಣಗೊಳಿಸಿದ್ದಾನೆ.
ನೀರು ಉಳಿಸಿ ಗಿಡಮರಗಳನ್ನ ಬೆಳಸಬೇಕೆಂಬ ಮುಖ್ಯ ಉದ್ದೇಶವನ್ನಿಟ್ಟುಕೊಂಡು ಸೈಕಲ್ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಂಡ ಪೋನಿವಾಲ್ ಕಾಂಜಿಗೆ ಹೋದಲೆಲ್ಲ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗೆ ಸೈಕಲ್ ತುಳಿದುಕೊಂಡು ನಗರಕ್ಕೆ ಆಗಮಿಸಿರುವ ವ್ಯಕ್ತಿಯ ಹೆಸರು ಪೋನಿವಾಲ್ ಕಾಂಜಿ. ಪಶ್ಚಿಮ ಬಂಗಾಳ ಮೂಲದ 55 ವರ್ಷ ಪ್ರಾಯದ ಪೋನಿವಾಲ್ ಕಾಂಜಿ.. ಮರಗಳನ್ನ ಉಳಿಸಿ ನೀರನ್ನ ಸಂರಕ್ಷಿಸಿ ಎನ್ನುವ ಘೋಷವಾಕ್ಯದೊಂದಿಗೆ ಸೈಕಲ್ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಪೊನಿವಾಲ್ ಕಾಂಜಿ 2021ರ ಜನವರಿ 1ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ಸೈಕಲ್ ಯಾತ್ರೆಯನ್ನ ಆರಂಭಿಸಿದ್ದು ಅಲ್ಲಿಂದ ಹೆದ್ದಾರಿ ಮಾರ್ಗವಾಗಿ ಕರಾವಳಿಯಾದ್ಯಂತ ಪ್ರಯಾಣಿಸುತ್ತಾ ಬಂದಿದ್ದಾರೆ. ದಿನಕ್ಕೆ 120 ಕಿಲೋ ಮೀಟರ್ನಂತೆ ಇದುವರೆಗೆ ಸುಮಾರು 5000 ಕಿಲೋ ಮೀಟರ್ಗಳನ್ನ ಸೈಕಲ್ ಮೇಲೆಯೇ ಕ್ರಮಿಸಿದ್ದು ಮಾರ್ಗಮದ್ಯೆ ಸಿಗುವ ಜನರಿಗೆ ಪರಿಸರ ರಕ್ಷಣೆ ಹಾಗೂ ನೀರನ್ನ ಉಳಿಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನೀರನ್ನ ಬೇಕಾಬಿಟ್ಟಿಯಾಗಿ ಪೋಲು ಮಾಡುವುದನ್ನ ಕಂಡು ಈ ಕುರಿತು ಜಾಗೃತಿ ಮೂಡಿಸಬೇಕು ಎನ್ನುವ ಭಾವನೆ ಕಾಂಜಿ ಅವರಲ್ಲಿ ಮೂಡಿದ್ದು ಮರಗಳನ್ನ ಬೆಳೆಸಿದಲ್ಲಿ ನೀರಿನ ಅಭಾವವನ್ನ ತಪ್ಪಿಸಬಹುದು ಎನ್ನುವ ನಿಟ್ಟಿನಲ್ಲಿ ಸೈಕಲ್ ಜಾಗೃತಿ ಮಾಡುತ್ತಿರೋದಾಗಿ ತಿಳಿಸಿದ್ದಾರೆ.
ಇನ್ನು ಪಶ್ಟಿಮ ಬಂಗಾಳದಿಂದ ತನ್ನ ಪ್ರಯಾಣ ಆರಂಭಿಸಿರುವ ಕಾಂಜಿ ಇದುವರೆಗೆ ಓಡಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಮಂಗಳೂರನ್ನ ದಾಟಿಕೊಂಡು ಬಂದಿದ್ದಾರೆ. ಇಂದು ಕಾರವಾರಕ್ಕೆ ಆಗಮಿಸಿದ ಅವರನ್ನ ಸಾರ್ವಜನಿಕರು ಕುತೂಹಲದಿಂದ ವಿಚಾರಿಸಿದಾಗ ಜನರೊಂದಿಗೆ ತಮ್ಮ ವಿಚಾರಗಳನ್ನ ಹಂಚಿಕೊಂಡರು. ಯಾವುದೇ ಶಿಕ್ಷಣವನ್ನ ಹೊಂದಿರದ ಕಾಂಜಿ ಅಲ್ಪ ಹಣದೊಂದಿಗೆ ಸೈಕಲ್ ಯಾತ್ರೆ ಆರಂಭಿಸಿದ್ದು ಮಾರ್ಗಮದ್ಯೆ ಜನರು ನೀಡುವ ಆಹಾರವನ್ನ ಸೇವಿಸಿ ಜಾಗ ಸಿಕ್ಕಲ್ಲಿ ರಾತ್ರಿಯನ್ನ ಕಳೆದು ಮತ್ತೆ ತಮ್ಮ ಪ್ರಯಾಣವನ್ನ ಮುಂದುವರೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ಯಾದಗಿರಿಯಲ್ಲಿ ರೈತರ ಹೋರಾಟ; ರೈತರನ್ನು ವಶಕ್ಕೆ ಪಡೆದ ಪೊಲೀಸರು
ಇಂಗ್ಲೀಷ್, ಹಿಂದಿ ಭಾಷೆಗಳನ್ನ ಮಾತನಾಡುವುದರಿಂದ ಮಾರ್ಗಗಳನ್ನ ತಿಳಿದುಕೊಳ್ಳಲು ಸಹಕಾರಿಯಾಗಿದ್ದು ಮುಂದಿನ ಆರು ತಿಂಗಳಲ್ಲಿ ಗಡಿಭಾಗದ ರಾಜ್ಯಗಳ ಪ್ರವಾಸ ಪೂರ್ಣಗೊಳಿಸಿ ತಮ್ಮ ಊರು ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಜಿ ಅವರ ಮಾತುಗಳನ್ನ ಕೇಳಿದ ಸಾರ್ವಜನಿಕರು ಇಳಿ ವಯಸ್ಸಿನಲ್ಲೂ ಮುಂದಿನ ಪೀಳಿಗೆಗಾಗಿ ಜಾಗೃತಿ ಮೂಡಿಸುತ್ತಿರುವ ಅವರ ಹಂಬಲ ಎಂತಹವರಿಗೂ ಮಾದರಿಯಾಗಿದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಳಿವಯಸ್ಸಿನಲ್ಲೂ ಏಕಾಂಗಿಯಾಗಿ ಸೈಕಲ್ ತುಳಿಯುವ ಮೂಲಕ ಜಾಗೃತಿ ಮೂಡಿಸುತ್ತಿರುವ ಪೊರಿಮಲಿ ಕಾಂಜಿ ಅವರ ಕಾರ್ಯವನ್ನ ನಿಜಕ್ಕೂ ಮೆಚ್ಚಲೇಬೇಕು. ಅವರಂತೆ ದೇಶದ ಪ್ರತಿಯೊಬ್ಬ ಪ್ರಜೆಯೂ ಪರಿಸರ ಸಂರಕ್ಷಣೆಗಾಗಿ ಶ್ರಮಿಸುವಂತಾಗಲೀ ಅನ್ನೋದೇ ನಮ್ಮ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ