ರಾಯಚೂರು: ಕೃಷ್ಣಾ ನದಿಗೆ 10 ಲಕ್ಷ ಕ್ಯೂಸೆಕ್ ನೀರು ಬರುತ್ತದೆಂತೆ. ಇಷ್ಟು ಪ್ರಮಾಣದ ನೀರು ಬಂದರೆ ನಮ್ಮ ಗ್ರಾಮಗಳೇನಾಗಬೇಕು, ನಮ್ಮ ಜಮೀನುಗಳೇನಾಗಬೇಕೆಂದು ಕಳೆದ ಒಂದು ವಾರದಿಂದ ರಾಯಚೂರು ತಾಲೂಕಿನ ಜನ ಆತಂಕಕ್ಕೊಳಗಾಗಿದ್ದಾರೆ. ಕಳೆದ ಒಂದು ವಾರವಾದರೂ ಕೃಷ್ಣೆಗೆ ಭೀಮೆಯಿಂದ 8 ಲಕ್ಷ ಕ್ಯೂಸೆಕ್ ನೀರು ಬರಲೇ ಇಲ್ಲ. ಹಾಗಾದರೆ ಎಲ್ಲಿಗೆ ಹೋಯಿತು ಈ ನೀರು ಎಂಬ ಚರ್ಚೆ ಆರಂಭವಾಗಿದೆ. ಮಹಾರಾಷ್ಟ್ರದ ಅಧಿಕಾರಿಗಳು ತಪ್ಪು ಲೆಕ್ಕ ಕೊಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕಳೆದ ಒಂದು ಒಂದು ವಾರದಿಂದ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಬಿಡಲಾಗಿದೆ. ಈ ನೀರು ವಿಜಯಪುರ, ಕಲಬುರಗಿ ಹಾಗು ಯಾದಗಿರಿ ಮುಖಾಂತರ ರಾಯಚೂರು ಜಿಲ್ಲೆಗೆ ಬಂದು ರಾಯಚೂರಿನ ಕಾಡ್ಲೂರು ಬಳಿಯಲ್ಲಿ ಕೃಷ್ಣಾ ನದಿಯಲ್ಲಿ ಸೇರಿಕೊಳ್ಳುತ್ತದೆ. ಮಹಾರಾಷ್ಟ್ರ, ವಿಜಯಪುರ, ಕಲಬುರಗಿಯಲ್ಲಿ ಅತ್ಯಧಿಕ ಮಳೆಯಾಗಿದ್ದರಿಂದ ಸಹಜವಾಗಿ ಭೀಮಾ ನದಿಯಲ್ಲಿಯೂ ಪ್ರವಾಹ ಉಂಟಾಗಿದೆ. ಇದೇ ಪ್ರಥಮ ಬಾರಿಗೆ ಭೀಮಾದಲ್ಲಿ ಭಾರಿ ಪ್ರವಾಹದಿಂದಾಗಿ ನದಿಯಲ್ಲಿ ಹರಿಯಬೇಕಾದ ನೀರು ಗ್ರಾಮಗಳಿಗೆ ನುಗ್ಗಿ ವಿಸ್ತಾರವಾಗಿ ಹರಡಿಕೊಂಡಿದೆ.
ಈ ಮಧ್ಯೆ ಕಲಬುರಗಿ ಜಿಲ್ಲೆಯ ಸೊನ್ನಾ ಬ್ಯಾರೇಜಿನಿಂದ ಒಟ್ಟು 8.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರೂ ಕಳೆದ ಐದು ದಿನಗಳ ಹಿಂದೆ ಸೊನ್ನಾದಿಂದ 5.11 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ತಿಳಿಸಲಾಯಿತು. ಈ ನೀರು ಇಲ್ಲಿಯವರೆಗೂ ರಾಯಚೂರು ಮುಟ್ಟಲಿಲ್ಲ. ರಾಯಚೂರಿಗೆ ಬರುವ ಮುನ್ನ ಸನ್ನತಿ ಬ್ಯಾರೇಜನ್ನು ಮುಟ್ಟಿ ಬರಬೇಕು. ಐದು ದಿನಗಳಾದರೂ ಸನ್ನತಿ ಬ್ಯಾರೇಜಿನಿಂದ ಈಗ 3.67 ಲಕ್ಷ ಕ್ಯೂಸೆಕ್ ನೀರು ಬರುತ್ತಾ ಇದೆ. ಹಾಗಾದರೆ ಮೊದಲು ಹೇಳಿದ 8 ಲಕ್ಷ ಕ್ಯೂಸೆಕ್ ಎಲ್ಲಿ ಹೋಯಿತು ಎಂದು ಪ್ರಶ್ನಿವಂತಾಗಿದೆ.
ಇನ್ನೊಂದು ಕಡೆ 8 ಲಕ್ಷ ಕ್ಯೂಸೆಕ್ಸ್ ನೀರು ಕಲಬುರಗಿ ಜಿಲ್ಲೆಯಲ್ಲಿ ಹರಡಿಕೊಂಡಿದ್ದರೂ ಪ್ರವಾಹ ಇಳಿಕೆಯಾದ ನಂತರ ಭೀಮಾ ನದಿಯು ತನ್ನ ಸಾಮಾರ್ಥ್ಯದ ಅನುಗುಣವಾಗಿಯೇ ನೀರು ಹರಿಸುತ್ತದೆ. ಇದರಿಂದ 8 ಲಕ್ಷ ಕ್ಯೂಸೆಕ್ ನೀರು ಭೀಮಾದಲ್ಲಿ ಒಂದೇ ಸಮಯಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಅಧಿಕ ಪ್ರಮಾಣದ ನೀರಿದ್ದರೂ ಅದು ಬಹಳ ದಿನಗಳವರೆಗೆ ಹರಿಯುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಮಧ್ಯೆ ಕೃಷ್ಣಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈ ಮೊದಲು 2.23 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ ಈಗ ಅದು ಕೇವಲ 17 ಸಾವಿರ ಕ್ಯೂಸೆಕ್ಗೆ ಇಳಿದಿದೆ. ಇದರಿಂದಾಗಿ ಕೃಷ್ಣಾ ನದಿ ಪಾತ್ರದ ಜನರಲ್ಲಿದ್ದ ಆತಂಕ ಕೊಂಚ ಕಡಿಮೆಯಾಗಿದೆ. ಮುಳುಗಡೆ ಆಗಿದ್ದ ಗುರ್ಜಾಪುರ ಸೇತುವೆ ಈಗ ತೆರೆದುಕೊಂಡಿದೆ. ಗುರ್ಜಾಪುರ ಮುಳುಗಡೆಯಾಗುವುದು ಈಗ ಅನುಮಾನ ಎನ್ನಲಾಗಿದೆ. ಒಂದು ವೇಳೆ ಭೀಮಾದಿಂದ ಅಧಿಕ ನೀರು ಬಂದರೂ ರಾಯಚೂರಿನ ಯಾವ ಗ್ರಾಮದೊಳಗೆ ನುಗ್ಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೂ ಮೂರು ಗ್ರಾಮಗಳ ಸ್ಥಳಾಂತರ ಅವಶ್ಯವಿದ್ದರೆ ರಕ್ಷಣೆಗಾಗಿ ಸೇನಾ ಪಡೆ, ಎನ್ಡಿಆರ್ಎಫ್ ತಂಡ ಸಿದ್ದವಾಗಿದೆ.
ವರದಿ: ಶರಣಪ್ಪ ಬಾಚಲಾಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ