ಯಾದಗಿರಿ: ಭೀಮಾನದಿ ಪ್ರವಾಹ ಈಗ ಪ್ರವಾಹ ಪೀಡಿತ ಗ್ರಾಮಸ್ಥರ ನೆಮ್ಮದಿ ಕೆಡಿಸಿದೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ ಈಗ ಗರ್ಭಿಣಿಯರು ಹಾಗೂ ಬಾಣಂತಿಯರು ನರಕಯಾತನೆ ಜೀವನ ನಡೆಸುವಂತಾಗಿದೆ. ತವರು ಮನೆಗೆ ಹೆರಿಗೆಗೆಂದು ಬಂದ ತನ್ನ ಪುತ್ರಿಯನ್ನು ಹೆತ್ತಮ್ಮ ವಾಪಾಸ್ ಅಳಿಯನ ಊರಿಗೆ ಕಳುಹಿಸಿದ್ದಾಳೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ತಗ್ಗು ಪ್ರದೇಶದ ಮನೆಗಳಲ್ಲಿ ಭೀಮಾನದಿ ಪ್ರವಾಹ ನುಗ್ಗಿದೆ. ಈಗ ಪ್ರವಾಹ ತಗ್ಗಿದ್ದರೂ ತಗ್ಗು ಪ್ರದೇಶದಲ್ಲಿ ನೀರು ಇನ್ನೂ ಹಾಗೆ ಸಂಗ್ರಹವಾಗಿದೆ. ಇದರಿಂದ ಹಾವು, ಚೇಳುಗಳ ಉಪಟಳ ಹೆಚ್ಚಾಗಿದೆ. ನಾಯ್ಕಲ್ ಗ್ರಾಮದ ಖಾಸೀಂ ಸಾಬ್ ವರಕೂರ ಅವರ ಮನೆಯೊಳಗೆ ಎರಡು ಹಾವುಗಳು ಬಂದಿವೆ. ಖುದ್ದು ನ್ಯೂಸ್ 18 ಕ್ಯಾಮರಾದಲ್ಲಿ ಹಾವುಗಳ ಉಪಟಳ ದೃಶ್ಯ ಸೇರೆಯಾಗಿದೆ. ಹಾವು ಕಂಡು ಮಕ್ಕಳು ಕೂಡ ಭಯಗೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿ.ಪಂ. ಅಧಕ್ಷರು ಮತ್ತು ಬಿಜೆಪಿ ಮಧ್ಯೆ ಮುಸುಕಿನ ಗುದ್ದಾಟ
ಮಗಳನ್ನೇ ಅಳಿಯನ ಮನೆಗೆ ಕಳುಹಿಸಿದ ತಾಯಿ...!
ನಾಯ್ಕಲ್ ಗ್ರಾಮದ ಅಬೇದಾಬಿ ವರಕೂರ ಅವರ ಮನೆಗೆ ಮಗಳು ರೇಷ್ಮಾ ಹೆರಿಗೆಗೆಂದು ಬಂದಿದ್ದಳು. ಆದರೆ, ಹಾವು, ಚೇಳುಗಳ ಉಪಟಳ ಹಾಗೂ ಪ್ರವಾಹದಿಂದ ಸುತ್ತಲೂ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ತನ್ನ ಮಗಳನ್ನು ವಾಪಾಸ್ ಅಳಿಯನ ಊರಾದ ಹಳಿಗೇರಾಕ್ಕೆ ವಾಪಾಸ್ ಕಳುಹಿಸಿದ್ದಾಳೆ. ಗರ್ಭಿಣಿಯರಿಗೆ ಕೂಡ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸುರಕ್ಷತೆ ಇಲ್ಲದಂತಾಗಿದೆ.
ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅಬೇದಾಬಿ ವರಕೂರ, “ಸಾರ್ ಮನೆಯೊಳಗಡೆ ಹಾವು, ಚೇಳುಗಳು ಬರುತ್ತಿವೆ. ಮನೆ ಸುತ್ತಲೂ ನೀರು ಇನ್ನೂ ಇದೆ. ನನ್ನ ಮಗಳು ತುಂಬು ಗರ್ಭಿಣಿ, ಹೆರಿಗೆಗೆಂದು ಬಂದಿದ್ದಳು. ವಾಪಾಸ್ ಅಳಿಯನ ಮನೆಗೆ ಕಳುಹಿಸಿದ್ದೆನೆ. ನಾವು ಏನ್ ಮಾಡಬೇಕ್ರಿ… ಮನೆಯಲ್ಲಿ ಇಟ್ಟ 20 ಸಾವಿರ ರೂ ಹಣ ನದಿ ಪಾಲಾಗಿದೆ” ಎಂದು ನೋವು ತೊಡಿಕೊಂಡರು.
ಇದನ್ನೂ ಓದಿ: ಮಾರುತಿ ಮಾನ್ಪಡೆ ಸಾವಿಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಕಾರಣ; ಸಚಿವ ಡಿವಿ ಸದಾನಂದ ಗೌಡ ಗಂಭೀರ ಆರೋಪ
ಕೈಯಲ್ಲಿ ಹಣವಿಲ್ಲ ಬಾಡಿಗೆ ಮನೆಯಲ್ಲಿ...!
ಈಗಾಗಲೇ ಭೀಮಾನದಿ ಪ್ರವಾಹದಿಂದ ಜೀವನವೇ ಕೊಚ್ಚಿಕೊಂಡು ಹೋಗಿದೆ. ಮನೆಯಲ್ಲಿರುವ ಧವಸ ಧಾನ್ಯ, ಬಟ್ಟೆ, ಹಣ ಎಲ್ಲವೂ ಹೋಗಿವೆ. ಈಗ ಹಾವುಗಳ ಕಾಟ ಹೆಚ್ಚಾಗಿದೆ. ಮನೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಖಾಸೀಂಸಾಬ್ ವರಕೂರ್ ಮಾತನಾಡಿ, ಬಾಡಿಗೆ ಮನೆಯಲ್ಲಿ ಇರಬೇಕೆಂದ್ರೆ ಕೈಯಲ್ಲಿ ಹಣವಿಲ್ಲ ನಾವ್ ಬದುಕು ಹ್ಯಾಂಗ್ ಮಾಡಬೇಕೆಂದು ಚಿಂತಿ ಮಾಡಲಾಕತಿವಿ ಎಂದರು.
ಭೀಮಾನದಿ ಪ್ರವಾಹ ತಗ್ಗಿದ್ದರೂ ನಿರಾಶ್ರಿತರ ಬವಣೆ ಮಾತ್ರ ತಪ್ಪಿಲ್ಲ. ಅಧಿಕಾರಿಗಳು ಸಂಗ್ರಹಗೊಂಡ ನೀರು ಖಾಲಿ ಮಾಡಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ ಹಾವುಗಳ ಉಪಟಳಕ್ಕೆ ಅಂತ್ಯ ಹಾಡುವ ಜೊತೆಗೆ ಬಿರುಕು ಬಿಟ್ಟ ಮನೆಗಳಿಗೆ ಅನುಕೂಲ ಮಾಡಬೇಕಿದೆ.
ವರದಿ: ನಾಗಪ್ಪ ಮಾಲಿಪಾಟೀಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ