ಯಾದಗಿರಿ: ಮಹಾರಾಷ್ಟ್ರದ ಮಹಾಮಳೆಗೆ ಒಂದು ಕಡೆ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದರೆ ಮತ್ತೊಂದೆಡೆ ಭೀಮಾ ನದಿ ಒಡಲು ಅಬ್ಬರಿಸುತ್ತಿದೆ. ಕೃಷ್ಣಾ ಹಾಗೂ ಭೀಮಾ ನದಿ ತೀರದಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಳೆದ ಜೂನ್ ತಿಂಗಳಲ್ಲಿ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಹಿನ್ನೆಲೆ ಭೀಮಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ ಬ್ಯಾರೆಜ್ ಭರ್ತಿಯಾಗಿದ್ದು ಈಗ ಬ್ಯಾರೆಜ್ ನಿಂದ ಭೀಮಾ ನದಿಗೆ ಹೆಚ್ಚಿನ ನೀರು ಹರಿಬಿಡಲಾಗುತ್ತಿದೆ.
ಗುರುಸಣಗಿ ಬ್ಯಾರೆಜ್ 0.568 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಈಗ ಬ್ಯಾರೆಜ್ ನಲ್ಲಿ 0.347 ಟಿಎಂಸಿ ನೀರು ಸಂಗ್ರಹವಾಗಿದೆ. ಬ್ಯಾರೆಜ್ ಗೆ 142 ಗೇಟ್ ಗಳಿವೆ. ಗೇಟ್ ಗಳು ಎತ್ತರಿಸಿ ಭೀಮಾ ನದಿಗೆ ನೀರು ಬಿಡಲಾಗುತ್ತಿದೆ. ಮಹಾರಾಷ್ಟ್ರದ ವೀರ್ ಜಲಾಶಯದಿಂದ ಭೀಮಾ ನದಿಗೆ ನೀರು ಒಳಹರಿವು ಬರುತ್ತಿದೆ. ಒಳಹರಿವು ಹೆಚ್ಚಳವಾದ ಹಿನ್ನೆಲೆಗುರುಸಣಗಿ ಬ್ಯಾರೆಜ್ ನಿಂದ ಈಗ 4 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಹರಿಬಿಡಲಾಗುತ್ತಿದೆ.
ಭೀಮಾ ನದಿಯು ಉಕ್ಕಿ ಹರಿಯುತ್ತಿದ್ದು ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ತೀರದ ಕಂಗಳೇಶ್ವರ, ವೀರಾಂಜನೆಯ ದೇಗುಲಗಳು ಜಲಾವೃತವಾಗಿದ್ದು ದೇವರ ದರ್ಶನ ಭಾಗ್ಯಕ್ಕೆ ಜಲದಿಗ್ಬಂಧನ ಬಿದ್ದಿದೆ. ದೇಗುಲದ ಸ್ವಲ್ಪ ಭಾಗ ಜಲಾವೃತವಾಗಿದ್ದು ಭಕ್ತರು ಮಂದಿರಕ್ಕೆ ಹೋಗಿ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲ. ಸದ್ಯಕ್ಕೆ 4 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆ ಯಾವುದೇ ಅಪಾಯವಿಲ್ಲ. ಆದರೆ, ಜನರು ಎಚ್ಚರ ವಹಿಸುವದು ಅಗತ್ಯವಾಗಿದೆ.
ನದಿ ತೀರದಲ್ಲಿ ಮೋಜು ಮಸ್ತಿ...!
ಗುರುಸಣಗಿ ಬ್ಯಾರೆಜ್ ನ ಗೇಟ್ ಗಳ ಅಪಾಯದ ಸ್ಥಳ ಹಾಗೂ ನದಿ ತೀರದಲ್ಲಿ ಕೆಲ ಜನರು ಮೊಬೈಲ್ ನಲ್ಲಿ ಸೆಲ್ಫಿ ಕ್ಲಿಕ್ ಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದಾರೆ. ಅದೆ ರೀತಿ ಕೆಲವರು ನದಿಯ ತೀರದ ಕಲ್ಲುಬಂಡೆಗಳ ಮೇಲೆ ಕುಳಿತುಕೊಂಡು ಮೀನು ಹೀಡಿಯುವ ಸಾಹಸ ಮಾಡುತ್ತಿದ್ದಾರೆ. ಅನಾಹುತ ಘಟನೆ ಜರುಗುವ ಮುನ್ನ ಜನರು ಎಚ್ಚೆತ್ತುಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ