HOME » NEWS » District » BHEEMA RIVER FLOOD VICTIMS CAN NOT GET COMPENSATION IN KALBURGI DISTRICT SAKLB HK

ಪ್ರವಾಹ ಇಳಿಮುಖವಾಗಿ ತಿಂಗಳಾಯ್ತು ; ಸಂತ್ರಸ್ತರಿಗೆ ಪರಿಹಾರ ಮಾತ್ರ ಗಗನಕುಸುಮ

ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಅಕ್ಟೋಬರ್ ತಿಂಗಳೊಂದರಲ್ಲಿಯೇ 1,79,654 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 3.70 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

news18-kannada
Updated:November 23, 2020, 3:55 PM IST
ಪ್ರವಾಹ ಇಳಿಮುಖವಾಗಿ ತಿಂಗಳಾಯ್ತು ; ಸಂತ್ರಸ್ತರಿಗೆ ಪರಿಹಾರ ಮಾತ್ರ ಗಗನಕುಸುಮ
ಪ್ರವಾಹದಿಂದ ಮನೆ ಕುಸಿದಿರುವುದು
  • Share this:
ಕಲಬುರ್ಗಿ(ನವೆಂಬರ್​. 23): ಕಲಬುರ್ಗಿ ಜಿಲ್ಲೆ ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದೆ. ಭೀಮಾ ನದಿ ಪಾತ್ರದ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿ ಹೋದಂತಹ ಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಮನೆಗಳು ಬಿದ್ದು ಹೋಗಿದ್ದರೂ ಇದವರೆಗೂ ಪರಿಹಾರ ಸಿಕ್ಕಿಲ್ಲ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದರೂ, ಪರಿಹಾರ ಮಾತ್ರ ಗಗನಕುಸುಮವಾಗಿ ಮಾರ್ಪಟ್ಟಿದೆ. ಬಯಲು ಸೀಮೆ ಎನಿಸಿಕೊಂಡ ಕಲಬುರ್ಗಿ ಜಿಲ್ಲೆ ಈ ಬಾರಿ ಅತಿವೃಷ್ಟಿ ಹಾಗೂ ಪ್ರವಾಹದ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಮುಂಗಾರಿನಿಂದ ಹಿಡಿದು ಆಗಾಗ ಸುರಿಯುತ್ತಲೇ ಇರುವ ಮಳೆ ಒಂದು ಕಡೆಯಾದ್ರೆ, ಮಹಾರಾಷ್ಷ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತೊಂದು ಕಡೆ. ಭೀಮಾ ನದಿ ಉಕ್ಕಿ ಹರಿದು ಲಕ್ಷಾಂತರ ಜನರನ್ನು ಬಿಕ್ಕುವಂತೆ ಮಾಡಿದೆ. ಭೀಮಾ ನದಿ ಅಕ್ಕ ಪಕ್ಕದಲ್ಲಿ ಬರುವ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಹೊಕ್ಕಿವೆ. ಸಾವಿರಾರು ಮನೆಗಳು ಜಲಾವೃತಗೊಂಡಿದ್ದವು.

ಸರ್ಕಾರ ನಡೆಸಿರುವ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 13,055 ಮನೆಗಳಿಗೆ ನೀರು ಹೊಕ್ಕಿವೆ. ನೀರು ಹೊಕ್ಕ ಮನೆಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದು ಹೋಗಿದ್ದು, ಅದಕ್ಕೆ ಇದುವರೆಗೂ ನಾಯಾಪೈಸೆ ಹಣ ಬಿಡುಗಡೆಗೊಂಡಿಲ್ಲ. ಅಫಜಲಪುರ ತಾಲೂಕಿನ ಅಳ್ಳಗಿ ಸೇರಿ ಹಲವು ಗ್ರಾಮಗಳಲ್ಲಿ ಬಿದ್ದ ಮನೆಗಳಲ್ಲಿ ಉಳಿದುಕೊಳ್ಳಲಾಗದೆ ಈಗಲೂ ಶಾಲೆ ಹಾಗೂ ಸಮುದಾಯ ಭವನಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪ್ರವಾಹದ ಜೊತೆ ನಾವೂ ಕೊಚ್ಚಿ ಹೋಗಿದ್ರೆ ಚೆನ್ನಾಗಿರುತ್ತಿತ್ತು. ಹೀಗೆ ನಿತ್ಯ ನರಕ ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಷ್ಟೆಲ್ಲಾ ಸಂಕಷ್ಟ ಪಡುತ್ತಿದ್ದರೂ ಯಾವ ಜನಪ್ರತಿನಿಧಿಯೂ ತಮ್ಮ ಕಡೆ ಕಣ್ಣೆತ್ತಿ ನೋಡಿಲ್ಲ. ನಯಾ ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಅಳ್ಳಗಿ ಗ್ರಾಮದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಬೆಳೆಯ ಕಥೆಯಂತೂ ಶೋಚನೀಯ. ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಅಕ್ಟೋಬರ್ ತಿಂಗಳೊಂದರಲ್ಲಿಯೇ 1,79,654 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರಸಕ್ತ ಸಾಲಿನಲ್ಲಿ 3.70 ಲಕ್ಷ ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.

ಅದರಲ್ಲಿಯೂ ಕಲಬುರ್ಗಿ ರೈತರ ಜೀವನಾಡಿ ತೊಗರಿ ಅತಿ ಹೆಚ್ಚು ಹಾನಿಗೆ ತುತ್ತಾಗಿದೆ. ಜೊತೆಗೆ ಕಬ್ಬು, ಹತ್ತಿ, ಹೆಸರು, ಉದ್ದು, ಸೋಯಾಬಿನ್ ಇತ್ಯಾದಿಗಳ ಬೆಳೆಯೂ ಹಾನಿಗೀಡಾಗಿದೆ. ಪ್ರವಾಹ ಬಂದು ಹೋಗಿ ತಿಂಗಳಾಗುತ್ತಾ ಬಂದರೂ ಯಾವ ರೈತರ ಖಾತೆಗೂ ಪರಿಹಾರದ ಹಣ ಜಮಾ ಆಗಿಲ್ಲ. ಹೀಗಾದ್ರೆ ನಾವು ಬದುಕುವುದಾದರೂ ಹೇಗೆ ಎಂದು ಅಫಜಲಪುರ ತಾಲೂಕಿನ ಬಂಕಲಗಾ ಗ್ರಾಮದ ರೈತರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : ಮಂಡ್ಯದಲ್ಲಿ ಅಭಿಮಾನಿಗಳಿಂದ ರೆಬಲ್ ಸ್ಟಾರ್ ಗುಡಿ ನಿರ್ಮಾಣ ; ನಾಳೆ ಅಂಬಿಯ ಕಂಚಿನ ಪ್ರತಿಮೆ ಲೋಕಾರ್ಪಣೆ

ಪ್ರವಾಹ ಇಳಿಮುಖವಾಗಿದ್ದರೂ ನೆರೆ ಸಂತ್ರಸ್ತರ ಜನಜೀವನ ಸಹಜ ಸ್ಥಿತಿಗೆ ಬಂದಿಲ್ಲ. ಈಗಲೂ ಸರ್ವೆ ಕಾರ್ಯ ಮುಂದುವರಿದೆ ಇದೆ. ಸರ್ವೆಕಾರ್ಯ ಮುಗಿಯುವವರೆಗೂ ಯಾವುದೇ ಪರಿಹಾರ ಬಿಡುಗಡೆ ಅಸಾಧ್ಯ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ ಜಂಟಿ ಸರ್ವೆ ಕಾರ್ಯ, ದಾಖಲೆಗಳ ಎಂಟ್ರಿ ಕಾರ್ಯ ಇತ್ಯಾದಿಯಾಗಿ ಹೇಳುತ್ತಲೇ ರಾಗಿದ್ದು, ರೈತರು ಮತ್ತು ನೆರೆ ಸಂತ್ರಸ್ತರಿಗೆ ಪರಿಹಾರ ಮರೀಚಿಕೆಯಾಗಿ ಮಾರ್ಪಟ್ಟಿದೆ. ಈಗಲಾದರೂ ಪರಿಹಾರ ಬಿಡುಗಡೆ ಮಾಡಿ, ನೆರವಿಗೆ ಬರುವಂತೆ ಸಂತ್ರಸ್ತರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ,
Published by: G Hareeshkumar
First published: November 23, 2020, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories