ಭೀಮಾ ನದಿಯ ಪ್ರವಾಹದಲ್ಲಿ ಏರಿಳಿತ ; ಭೀತಿಯಿಂದ ಊರು ತೊರೆಯುತ್ತಿರುವ ಜನ

ಸರಡಗಿ ಗ್ರಾಮದಲ್ಲಿ ಜನ ಪ್ರವಾಹ ಭೀತಿಯಿಂದ ಮನೆ ತೊರುತ್ತಿದ್ದಾರೆ. ಪ್ರವಾಹ ಏರುತ್ತಲೇ ಇದ್ದು ಸರಡಗಿಯ ನೂರಾರು ಮನೆಗಳ ಮುಳುಗಡೆಯಾಗಿದೆ. ಗ್ರಾಮಕ್ಕೆ ಹೊಂದಿಕೊಂಡ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ

ಕಲಬುರ್ಗಿ ಪ್ರವಾಹ

ಕಲಬುರ್ಗಿ ಪ್ರವಾಹ

  • Share this:
ಕಲಬುರ್ಗಿ(ಅಕ್ಟೋಬರ್​. 19): ಭೀಮಾ ನದಿಯಲ್ಲಿ ಪ್ರವಾಹ ಏರಿಳಿತವಾಗುತ್ತಿದ್ದು ಜನ ಕಂಗಾಲಾಗಿದ್ದಾರೆ. ಭಾರಿ ಪ್ರವಾಹಕ್ಕೆ ಬೆಚ್ಚಿ ಮನೆಗಳನ್ನು ತೊರೆದು ಎತ್ತರದ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗುತ್ತಿದೆ. ಆದರೆ, ಕಲಬುರ್ಗಿ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ್ ತಾಲೂಕುಗಳಲ್ಲಿ ಪ್ರವಾಹ ಏರುಮುಖವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಪ್ರವಾಹ ಆರಂಭಗೊಂಡು ಒಂದು ವಾರ ಗತಿಸುತ್ತ ಬಂದಿದೆ. ಪ್ರವಾಹ ಒಂದಷ್ಟು ಇಳಿಮುಖವಾಗುವ ಲಕ್ಷಣಗಳು ಕಾಣಿಸಿದರೂ ಸಹ ತನ್ನ ಅಬ್ಬರದ ಮೂಲಕ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಮಹಾರಾಷ್ಟ್ರದ ನೀರು ಕಲಬುರ್ಗಿ ಜಿಲ್ಲೆಯಲ್ಲಿ ಅಫಜಲಪುರದ ಮೂಲಕ ಎಂಟ್ರಿ ಕೊಡಲಿದ್ದು ಅಫಜಲಪುರ ತಾಲ್ಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗುತ್ತಿದೆ. ಸೊನ್ನ ಬ್ಯಾರೇಜ್ ನಿಂದ 8.50 ಕ್ಯೂಸೆಕ್ಸ್ ಗೂ ಅಧಿಕ ನೀರು ಬಿಡಲಾಗುತ್ತಿತ್ತು. ಅದರ ಪ್ರಮಾಣ 6.50 ಲಕ್ಷ ಕ್ಯೂಸೆಕ್ಸ್ ಗೆ ಇಳಿದಿದೆ. ಹೀಗಾಗಿ ಅಫಜಲಪುರದಲ್ಲಿ ಪ್ರವಾಹ ಇಳಿಯುತ್ತಾ ಸಾಗಿದೆ. ಆದರೆ, ಭೀಮಾ ನದಿ ಕೆಳ ಭಾಗದಲ್ಲಿ ಬರುವ ಪ್ರದೇಶದಲ್ಲಿ ಪ್ರವಾಹ ಏರಿಕೆಯಾಗುತ್ತಲೇ ಇದೆ.

ಕಲಬುರ್ಗಿ, ಜೇವರ್ಗಿ, ಶಹಾಬಾದ್ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಏರುಮುಖವಾಗಿದೆ. ಕಲಬುರ್ಗಿ ತಾಲೂಕಿನ ಸರಡಗಿ(ಬಿ) ಗ್ರಾಮ, ಜೇವರ್ಗಿ ತಾಲೂಕಿನ ಮಾಹೂರು ಸೇರಿದಂತೆ ನದಿಗೆ ಹೊಂದಿಕೊಂಡಿರುವ ಹತ್ತಾರು ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ.

ಸರಡಗಿ ಗ್ರಾಮದಲ್ಲಿ ಜನ ಪ್ರವಾಹ ಭೀತಿಯಿಂದ ಮನೆ ತೊರುತ್ತಿದ್ದಾರೆ. ಪ್ರವಾಹ ಏರುತ್ತಲೇ ಇದ್ದು ಸರಡಗಿಯ ನೂರಾರು ಮನೆಗಳ ಮುಳುಗಡೆಯಾಗಿದೆ. ಗ್ರಾಮಕ್ಕೆ ಹೊಂದಿಕೊಂಡ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ. ಜಾನುವಾರುಗಳು, ಸಾಮಾನು ಸರಂಜಾಮುಗಳ ಜೊತೆ ಜನ ಗ್ರಾಮ ತೊರುತ್ತಿದ್ದಾರೆ. ಟ್ರ್ಯಾಕ್ಟರ್ ಗಳ ಮೂಲಕ ಜನರ ಸ್ಥಳಾಂತರ ಮುಂದುವರಿದಿದೆ.ಕೆಲ ಸಾಕು ಪ್ರಾಣಿಗಳು ಪ್ರವಾಹ ನೀರಿನಲ್ಲಿ ಈಜಿಕೊಂಡು ಬಂದು ದಡ ಸೇರುತ್ತಿವೆ. ಮಾಹೂರು ಗ್ರಾಮದಲ್ಲಿಯೂ ಭಾಗ್ಯವಂತಿ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಅಲ್ಮೆರಾ ಸೇರಿದಂತೆ ಇತರೆ ಸಾಮಾನುಗಳನ್ನು ಎತ್ತರದ ಪ್ರದೇಶಕ್ಕೆ ಕೊಂಡೊಯ್ಯುತ್ತಿರುವ ದೃಶ್ಯ ಕಂಡುಬಂದಿತು. ಜೊತೆಗೆ ಪ್ರವಾಹದ ಹಿನ್ನೀರಿನಲ್ಲಿ ಕೆಲ ಮಕ್ಕಳು ಈಜುತ್ತಿರುವ ದೃಶ್ಯಗಳು ಮಾಹೂರಿನಲ್ಲಿ ಕಂಡುಬಂದವು.

ಮತ್ತೊಂದೆಡೆ ಪ್ರವಾಹ ಇಳಿಮುಖವಾಗುತ್ತಿರುವ ಅಫಜಲಪುರದಲ್ಲಿ ಗ್ರಾಮ ತೊರೆದು ಹೋದ ಜನ ಮರಳಿ ಗೂಡು ಸೇರಲಾರಂಭಿಸಿದ್ದಾರೆ. ನೀರು ಸಂಪೂರ್ಣ ಇಳಿಮುಖಗೊಂಡ ಗ್ರಾಮಗಳಲ್ಲಿ ಜನ ಮನೆಗಳತ್ತ ಮುಖಮಾಡುತ್ತಿದ್ದಾರೆ. ಮನೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳನ್ನು ಸರಿಪಡಿಸಿ, ಮನೆ ಸ್ವಚ್ಚಗೊಳಿಸುವ ಕೆಲಸ ಆರಂಭಿಸಿದ್ದಾರೆ.ಇದೇ ವೇಳೆ ಕೋನ ಹಿಪ್ಪರಗಾ ಗ್ರಾಮದಲ್ಲಿ ಬಾಣಂತಿಗೆ ಸಂಸದ ಜಾಧವ್ ನೆರವು..ಪ್ರವಾಹದ ಅಬ್ಬರದಿಂದಾಗಿ ಬಾಣಂತಿ ಮತ್ತು ನವಜಾತ ಶಿಶು ಪರದಾಡಿದ ಘಟನರ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ. ಆಸ್ಪತ್ರೆಗೆ ತೆರಳಲು ರಸ್ತೆ ಸಂಚಾರ ಇಲ್ಲದೆ ತಾಯಿ ಮಗು ಪರದಾಟ ನಡೆಸಿದ ನಡೆಸಿರುವ ವಿಷಯವನ್ನು ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಉಮೇಶ್ ಜಾಧವ್ ಗಮನಕ್ಕೆ ತರಲಾಗಿದೆ. ತಕ್ಷಣ ಜಾಧವ್ ನೆರವಿಗೆ ಧಾವಿಸಿದ್ದಾರೆ. 108 ಆ್ಯಂಬುಲೆನ್ಸ್ ತರಿಸಿ ಪ್ರವಾಹದ ನೀರಿನಲ್ಲಿಯೇ ತಾಯಿ-ಮಗುವನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮಗುವಿಗೆ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ತಾಯಿ ಪರಿತಪಿಸುತ್ತಿದ್ದಳು.

ರಸ್ತೆಯಲ್ಲಿ ಸಿಲುಕಿಕೊಂಡ ಲಾರಿ :

ಲಾರಿಗಳು ರಸ್ತೆ ಮಧ್ಯದಲ್ಲಿಯೇ ಸಿಲುಕಿಕೊಂಡ ಘಟನೆಜೇವರ್ಗಿಯ ಬೈ ಪಾಸ್ ರಸ್ತೆಯಲ್ಲಿ ನಡೆದಿದೆ. ಭೀಮಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಕಟ್ಟಿ ಸಂಗಾವಿ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕೋನ ಹಿಪ್ಪರಗಾ ಮೂಲಕ ಕಲಬುರ್ಗಿಗೆ ಲಾರಿಗಳು ಸಾಗಿದ್ದವು. ಪ್ರವಾಹ ಹಿನ್ನೀರು ಮತ್ತು ಮಳೆಯಿಂದಾಗಿ ಹಾಳಾದ ರಸ್ತೆಯಲ್ಲಿ ಲಾರಿ ಸಿಲುಕಿಕೊಂಡಿವೆ. ಇದರಿಂದಾಗಿ ಬೈಪಾಸ್ ರಸ್ತೆಯಲ್ಲಿಯೂ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು. ಸಂಸದ ಉಮೇಶ್ ಜಾಧವ್ ಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿತು. ರಸ್ತೆಯಲ್ಲಿ ನಡೆದುಕೊಂಡೇ ಬಂದು ಟ್ರಾಫಿಕ್ ಜಾಮ್ ಪರಿಶೀಲಿಸಿ ಜಾಧವ್ ಮುಂದೆ ಸಾಗಿದರು.

ಇದನ್ನೂ ಓದಿ : ಕಂದಾಯ ಸಚಿವರ ಕಾಟಾಚಾರದ ಭೇಟಿ ; ರಸ್ತೆ ಮೇಲೆಯೇ ಸಮೀಕ್ಷೆ ಮಾಡಿ ವಾಪಸ್ಸಾದ ಸಚಿವ ಅಶೋಕ್

ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಹಾವು, ಚೇಳುಗಳದ್ದೇ ದೊಡ್ಡ ಕಾಟವಾಗಿದೆ. ಭೀಮಾ ನದಿಯುದ್ದಕ್ಕೂ ಇರುವ ಗ್ರಾಮಗಳಿಗೆ ಪ್ರವಾಹದ ನೀರು ಹೊಕ್ಕಿದೆ. ಅದರ ಜೊತೆ ಹಾವು ಚೇಳುಗಳು ಗ್ರಾಮ ಹೊಕ್ಕು ಜನರನ್ನು ಕಂಗಾಲಾಗುವಂತೆ ಮಾಡಿದೆ. ಜೇವರ್ಗಿ ತಾಲೂಕಿನಹಂದನೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಗ್ರಾಮದ ಮನೆಗಳಲ್ಲಿ ಇದೀಗ ಹಾವು, ಚೇಳುಗಳ ಕಾಟ ಪ್ರಾರಂಭಗೊಂಡಿದೆ.ಹಾವು ಮತ್ತು ಚೇಳುಗಳು ಗ್ರಾಮದ ಅನೇಕ ಮನೆಗಳನ್ನು ಹೊಕ್ಕಿವೆ. ಹಾವು, ಚೇಳುಗಳಿಂದ ಸಂತ್ರಸ್ತರು ಕಂಗಾಲಾಗಿದ್ದಾರೆ.ಭಾರಿ ಪ್ರವಾಹದ ಮಧ್ಯೆ ಕಲಬುರ್ಗಿಯಲ್ಲಿ ಧಾರಾಕಾರ ಮಳೆಯಾಗಿದೆ. ಕಲಬುರ್ಗಿ ನಗರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.ಎರಡು ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ನಗರದ ಸ್ಟೇಷನ್ ರಸ್ತೆ, ಕೆಬಿಎನ್ ಆಸ್ಪತ್ರೆ ಸೇರಿದಂತೆ ವಿವಿಧೆಡೆ ರಸ್ತೆಗಳಲ್ಲಿ ಭಾರಿ ನೀರು ಸಂಗ್ರಹಗೊಂಡಿದೆ. ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ.
Published by:G Hareeshkumar
First published: