HOME » NEWS » District » BHARATH BANDH MIXED RESPONSE IN KALBURGI SAKLB HK

Bharath Bandh: ಭಾರತ ಬಂದ್ ಗೆ ಕಲಬುರ್ಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ; ಬಂದ್ ವೇಳೆ ಕಳ್ಳತನಕ್ಕೆ ಯತ್ನಿಸಿದ ಖದೀಮ

ಬಂದ್ ಅಂಗವಾಗಿ ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರುಕಟ್ಟೆಯವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು

news18-kannada
Updated:December 8, 2020, 2:34 PM IST
Bharath Bandh: ಭಾರತ ಬಂದ್ ಗೆ ಕಲಬುರ್ಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ; ಬಂದ್ ವೇಳೆ ಕಳ್ಳತನಕ್ಕೆ ಯತ್ನಿಸಿದ ಖದೀಮ
ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು
  • Share this:
ಕಲಬುರ್ಗಿ(ಡಿಸೆಂಬರ್​. 08): ಭಾರತ ಬಂದ್ ಬೆಂಬಲಿಸಿ ವಿವಿಧ ರೈತ ಸಂಘಟನಗಳು ಕಲಬುರ್ಗಿಯಲ್ಲಿ ಬಂದ್ ಆಚರಿಸಿದವು. ಭಾರತ ಬಂದ್ ಗೆ ಕಲಬುರ್ಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಎಪಿಎಂಸಿಯಲ್ಲಿ ವಹಿವಾಟು ನಡೆಸದೇ ವರ್ತಕರು ಬಂದ್ ಬೆಂಬಲಿಸಿದರು. ಆದರೆ ಇತರೆ ವಾಹನ ಸಂಚಾರ ಎಂದಿನಂತಿತ್ತು. ಕೆಲವೆಡೆ ಹೋಟೆಲ್, ಅಂಗಡಿ ಮುಚ್ಚಿದ್ದರೆ, ಮತ್ತೆ ಕೆಲವೆಡೆ ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್ ಪ್ರಯಾಣಿಕರಿಗೆ ಒಂದಷ್ಟು ತೊಂದರೆಯಾಗಿದ್ದು ಬಿಟ್ಟರೆ, ಜನಜೀವನ ಸಹಜ ಸ್ಥಿತಿಯಲ್ಲಿತ್ತು.  ಭಾರತ ಬಂದ್ ಬೆಂಬಲಿಸಿ ಬೆಳಿಗ್ಗೆ 6 ಗಂಟೆಗೇ ರಸ್ತೆಗಳಿದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ರೈತ ಪರ ಸಂಘಟನೆಗಳ ಕಾರ್ಯಕರ್ತರು, ರಸ್ತೆ ತಡೆ ನಡೆಸಿದರು. ಕಲಬುರ್ಗಿ ಕೇಂದ್ರ ನಿಲ್ದಾಣದ ಗೇಟ್ ಬಂದ್ ಮಾಡಿದ್ದರಿಂದ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿ. ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು, ಇತರೆ ವಾಹನ ಸಂಚಾರ ಎಂದಿನಂತಿತ್ತು. 

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಹೋರಾಟಕ್ಕೆ, ಎಡ ಪಕ್ಷಗಳು, ಜನವಾದಿ ಮಹಿಳಾ ಸಂಘಟನೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಡಲೇ ರೈತ ವಿರೋಧಿ ಧೋರಣೆ ಕೈಡಿಬೇಕೆಂದು ಆಗ್ರಹಿಸಿದರು.

ಬಂದ್ ಅಂಗವಾಗಿ ಕೇಂದ್ರ ಬಸ್ ನಿಲ್ದಾಣದಿಂದ ಸೂಪರ್ ಮಾರುಕಟ್ಟೆಯವರೆಗೂ ಬೃಹತ್ ಮೆರವಣಿಗೆ ನಡೆಸಲಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಸೂಪರ್ ಮಾರುಕಟ್ಟೆಯಲ್ಲಿ ಬಹಿರಂಗ ಸಭೆ ನಡೆಸಿ, ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡರು, ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು. ಅಗತ್ಯ ವಸ್ತುಗಳ ತಿದ್ದುಪಡಿ ವಾಪಸ್ ತೆಗೆದುಕೊಳ್ಳಬೇಕು. ಸ್ವಾಮಿನಾಥ್ ವರದಿ ಜಾರಿಗೆ ತರುವಂತೆ ‍ರೈತ ಮುಖಂಡ ಶರಣಬಸಪ್ಪ, ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ  ಕೆ.ನೀಲಾ ಆಗ್ರಹಿಸಿದ್ದಾರೆ.

ರೈತ ಸಂಘಟನೆಗಳ ರಸ್ತೆ ತಡೆ ಮತ್ತು ಮೆರವಣಿಗೆಗಳಲ್ಲಿ  ಕಾಂಗ್ರೆಸ್ ಮುಖಂಡರು ಭಾಗಿಯಾಗಿ ಬಂದ್ ಗೆ ಬೆಂಬಲ ಸೂಚಿಸಿದರು. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್, ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು. ರೈತರ ವಿಷಯದಲ್ಲಿ ಕೇಂದ್ರ ಸರ್ಕಾರದ ಧೋರಣೆಗೆ ಮುಖಂಡರು ಖಂಡಿಸಿದ್ದಾರೆ.

ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಉದ್ಧಟತನದಿಂದ ವರ್ತಿಸುತ್ತಿದೆ. ಯಾವುದೇ ಕಾರಣಕ್ಕೂ ಜನವಿರೋಧಿ ಕಾಯ್ದೆಗಳ ಜಾರಿಗೆ ಅವಕಾಶ ನೀಡುವುದಿಲ್ಲ. ರೈತರೊಂದಿಗೆ ನಾವಿದ್ದೇವೆ. ನಾಳಿನ ಮಾತುಕತೆಯೂ ವಿಫಲಗೊಂಡಲ್ಲಿ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳು ದೇಶಾದ್ಯಂತ ಉಗ್ರ ಹೋರಾಟ ನಡೆಸಲಿವೆ ಎಂದು ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಅಜಯಸಿಂಗ್, ದೇಶದಲ್ಲಿ ಎರಡನೇ ಹಂತದ ಸ್ವಾತಂತ್ರ್ಯ ಚಳುವಳಿ ನಡೆದಿದೆ. ರೈತರದಿಂದ ಎಂದೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಳುವಳಿ ನಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಹಿಟ್ಲರ್ ಶಾಹಿ ನೀತಿಗಳೇ ಇದಕ್ಕೆ ಕಾರಣ. ಏನು ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಪ್ರಧಾನಿ ಮೋದಿ ಅವರಲ್ಲಿದೆ. ಕೂಡಲೇ ಈ ಧೋರಣೆ ಕೈಬಿಡಬೇಕು, ರೈತ ವಿರೋಧಿ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.ಬಹಿರಂಗಸಭೆಯಲ್ಲಿ ಭಾಗಿಯಾಗಿದ್ದ ರೈತ ಮುಖಂಡರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು. ಇದೇ ವೇಳೆ ಬಂದ್ ಬೆಂಬಲಿಸಿ ಹೈದರಾಬಾದ್ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
 
ಬಂದ್ ವೇಳೆ ಕಳ್ಳನ ಕೈ ಚಳಕ

ಭಾರತ ಬಂದ್ ವೇಳೆ ಕಳ್ಳತನ ಮಾಡಲು ಯತ್ನಿಸಿ ಖದೀಮನೋರ್ವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಭಾರತ ಬಂದ್ ಬೆಂಬಲಿಸಿ ನೂರಾರು ರೈತರು ಪ್ರತಿಭಟನೆ ಮಾಡುವ ವೇಳೆ ಕಳ್ಳತನಕ್ಕೆ ಯತ್ನಿಸಿದ ಘಟನೆ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದಿದೆ. ಒಂದು ಕಡೆ ಪ್ರತಿಭಟನೆ ಜೋರು ಪಡೆದಿರುವಾಗಲೇ, ಮತ್ತೊಂದು ಕಡೆ ಕಳ್ಳತನಕ್ಕೆ ಯತ್ನಸಿದ ಭೂಪ. ಕಳ್ಳತನಕ್ಕೆ ಯತ್ನಿಸಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಕಳ್ಳತನಕ್ಕೆ ಯತ್ನಿಸಿದವನ ಹೆಸರು ಇತ್ಯಾದಿ ತಿಳಿದು ಬಂದಿಲ್ಲ.

ಇದನ್ನೂ ಓದಿ : ರಾಜ್ಯ ರಾಜಕಾರಣದಲ್ಲಿ ಬದಲಾವಣೆ, ನಾಲ್ಕು ದಿನ ಕಾದು ನೋಡಿ ಎಂದ ಜೆಡಿಎಸ್ ನಾಯಕ

ರೈತ ಸಂಘಟನೆಗಳಿಂದ ಭಾರತ ಬಂದ್ ಆಚರಣೆ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಆರೋಪಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕಾಯ್ದೆ ತಿದ್ದುಪಡಿಯಿಂದ ರೈತರ ಆದಾಯ ದ್ವಿಗುಣ ಸಾಧ್ಯತೆಯಿದೆ.
Youtube Video

ಮಾರುಕಟ್ಟೆಯ ವ್ಯವಸ್ಥೆಯೂ ಸುಧಾರಿಸಲಿದೆ. ಆದರೂ ರಾಜಕೀಯ ಕುತಂತ್ರದಿಂದ ರೈತರು ಚಳುವಳಿಗೆ ಧುಮುಕಿದ್ದಾರೆ. ಸೋತು ಸುಣ್ಣವಾದ ರಾಜಕೀಯ ಪಕ್ಷಗಳಿಂದ ರೈತ ಸಂಘಟನೆಗಳ ದುರ್ಬಳಕೆಯಾಗುತ್ತಿದೆ. ರಾಷ್ಟ್ರವಿರೋಧಿ ಶಕ್ತಿಗಳಿಂದ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಸಿದ್ಧಾಜಿ ಆರೋಪಿಸಿದರು.
Published by: G Hareeshkumar
First published: December 8, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories