ಕಾಂಗ್ರೆಸ್, ಜೆಡಿಎಸ್ ಬೆಂಬಲದ ಮಧ್ಯೆಯೂ ವಿಜಯಪುರದಲ್ಲಿ ಕೇವಲ ಪ್ರತಿಭಟನೆಗೆ ಸೀಮಿತವಾದ ಬಂದ್

ಆರ್ ಎಸ್ ಕೆ ಕಾರ್ಯಕರ್ತರು ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ಭಿತ್ತಿ ಪತ್ರ ಹಿಡಿದಿದ್ದ ಕಾರ್ಯಕರ್ತರು ಕೃಷಿ ವಿರೋಧಿ ಕಾಯಿದೆಗಳು ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು

  • Share this:
ವಿಜಯಪುರ(ಡಿಸೆಂಬರ್​. 08) : ಕೃಷಿ ಸುಧಾರಣೆ ಕಾಯಿದೆ ವಿರೋಧಿ ನಾನಾ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ವಿಜಯಪುರದಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿತ್ತು. ಬೆಳಿಗ್ಗೆಯಿಂದಲೇ ಜನಜೀವನ ಎಂದಿನಂತೆ ಸಾಮಾನ್ಯವಾಗಿತ್ತು.  ಬಸ್ಸುಗಳ ಓಡಾಟವೂ ಮಾಮೂಲಿಯಾಗಿತ್ತು. ಅಟೋಗಳೂ ಓಡಾಟ ಯಥಾರೀತಿ ಮುಂದುವರೆಯಿತು. ನಸುಕಿನಿಂದಲೆ ರಸ್ತೆ ಬದಿಯ ಟೀ ಅಂಗಡಿಗಳು  ತೆರೆದಿದ್ದವು.  ಬೇಕರಿಗಳು, ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಜನರೂ ಕೂಡ ಎಂದಿನಂತೆ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಲು ಮುಂದಾಗಿದ್ದ ರೈತ, ಕೃಷಿಕರ ಸಂಘಟನೆ ಅಂದರೆ ಆರ್ ಎಸ್ ಕೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಹಿನ್ನೆಲೆಯಲ್ಲಿ ಭಗವಾನ ರೆಡ್ಡಿ ನೇತೃತ್ವದಲ್ಲಿ ಆರ್ ಎಸ್ ಕೆ ಕಾರ್ಯಕರ್ತರು ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ಭಿತ್ತಿ ಪತ್ರ ಹಿಡಿದಿದ್ದ ಕಾರ್ಯಕರ್ತರು ಕೃಷಿ ವಿರೋಧಿ ಕಾಯಿದೆಗಳು ಮತ್ತು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಭಗವಾನ್ ರೆಡ್ಡಿ, ಕೇಂದ್ರದ ಹೊಸ ಕಾಯಿದೆಗಳಿಂದ ರೈತರಿಗೆ ತೀವ್ರ ತೊಂದರೆಯಾಗಲಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೂಡಲೇ ಈ ಕಾಯಿದೆಗಳನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಈ ಮಧ್ಯೆ ಮಧ್ಯಾಹ್ನ ಅಂಬೇಡ್ಕರ್ ಸರ್ಕಲ್ ನಲ್ಲಿ ಆರ್ ಎಸ್ ಕೆ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸಿದರು. ಈ ಸಂಘಟನೆಗೆ ಎಸ್ ಯು ಸಿ ಐ, ಎನ್ ಎಸ್ ಯು ಐ, ಎಐಡಿವೈಓ, ಎಐಡಿಎಸ್‌ಓ, ಅಖಂಡ ಕರ್ನಾಟಕ ರೈತ ಸಂಘ, ರೈತ ಸಂಘ ಪುಟ್ಟಣ್ಣಯ್ಯ ಬಣ, ಕೋಡಿಹಳ್ಳಿ ಚಂದ್ರಶೇಖರ್ ಬಣ ಸೇರಿದಂತೆ ನಾನಾ ರೈತ ಸಂಘಟನೆಗಳ ಕಾರ್ಯಕರ್ತರೂ ಬಂದ್ ಗೆ ಬೆಂಬಲ ನೀಡಿ ಪ್ರತಿಭಟನೆ ಮತ್ತು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯಪುರ ಎಪಿಎಂಸಿ


ಮತ್ತೊಂದೆಡೆ ಕಾಂಗ್ರೆಸ್ ಕೂಡ ಮುಖಂಡ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಪರ ಸಂಘಟನೆಗಳೂ ಕೂಡ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಹಾಕಿದವು.

ಈ ಮಧ್ಯೆ, ರೈತರ ಜೀವನಾಡಿ ಮತ್ತು ವ್ಪಾಪಾರಿಗಳಿಗೂ ಕಾಯಕ ಹಾಗೂ ಆದಾಯ ತರುವ ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ನಸುಕಿನಿಂದಲೇ ಆರಂಭವಾದ ಎಪಿಎಂಸಿ, ತರಕಾರಿ ಮಾರುಕಟ್ಟೆ ಎಂದಿನಂತೆ ಕಾರ್ಯ ನಿರ್ವಹಿಸಿದ್ದವು. ನಸುಕಿನ ಜಾವದಿಂದಲೇ ರೈತರು ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿ ತರಕಾರಿ, ಹೂವು, ಹಣ್ಣುಗಳ ಮಾರಾಟ ನಡೆಸಿದರು.

ಇದನ್ನೂ ಓದಿ : ಕೇಂದ್ರದ ವಿರುದ್ಧ ದೇಶಾದ್ಯಂತ ರೈತರ ಹೋರಾಟ ; ಹಾವೇರಿಯಲ್ಲಿ ನೀರಿನಲ್ಲಿ ಮುಳುಗಿದ್ದ ಬೆಳೆಯ ರಕ್ಷಣೆಗೆ ರೈತನ ಪರದಾಟ

ಈ ಕುರಿತು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಮೌಲಾಲಿ ಬಾಗವಾನ, ನಿನ್ನೆ ಸಂಜೆಯಷ್ಟೇ ಬಂದ್ ಇದೆ ಎಂದು ಎಡಪಕ್ಷಗಳ ಮುಖಂಡರು ಭೇಟಿ ಮಾಡಿ ಸಹಕರಿಸಲು ಮನವಿ ಪತ್ರ ಸಲ್ಲಿಸಿದ್ದರು. ಆದರೆ, ತರಾತುರಿಯಲ್ಲಿ ಹೀಗೆ ಮಾರುಕಟ್ಟೆ ಬಂದ್ ಮಾಡಲು ಸಾಧ್ಯವಿಲ್ಲ. ಮೂರ್ನಾಲ್ಕು ದಿನಗಳ ಮುಂಚೆ ಬಂದ್ ಬಗ್ಗೆ ಮಾಹಿತಿ ನೀಡದರೆ ಅನುಕೂಲ. ಇಲ್ಲದಿದ್ದರೆ, ರೈತರು ಮಧ್ಯರಾತ್ರಿಯಿಂದಲೇ ಮಾರುಕಟ್ಟೆಗೆ ತಮ್ಮ ವಸ್ತುಗಳನ್ನು ತೆಗೆದುಕೊಂಡು ಬರುತ್ತಾರೆ ಬಂದ್ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿದರೆ ನಾವೂ ಬಂದ್ ನಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯ ಎಂದು ತಿಳಿಸಿದರು.

ಒಟ್ಟಾರೆ ವಿಜಯಪುರದಲ್ಲಿ ನಡೆದ ಭಾರತ ಬಂದ್ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದ ಹೊರತಾಗಿಯೂ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು.
Published by:G Hareeshkumar
First published: