ಈ ಮುಂಗಾರಿನಲ್ಲಾದರೂ ಸಂಪರ್ಕ ಕೊಂಡಿಯಾಗುವುದೇ ಭಾಗಮಂಡಲ ಮೇಲ್ಸೇತುವೆ! 

ಮಂದಗತಿಯಲ್ಲಿ ಸಾಗುತ್ತಿರುವ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ.

ಮಂದಗತಿಯಲ್ಲಿ ಸಾಗುತ್ತಿರುವ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ.

ಮುಂದಿನ ಮಳೆಗಾಲದ ಒಳಗಾಗಿ ಮುಗಿಸುವಂತೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎನ್ನುತ್ತಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನೂ ಪಿಲ್ಲರ್ ಗಳನ್ನು ಮಾಡುವ ಹಂತದಲ್ಲೇ ಇದ್ದು, ಮೂರು ತಿಂಗಳಲ್ಲೇ ಆರಂಭವಾಗುವ ಮಳೆಗಾಲದ ಒಳಗೆ ಸೇತುವೆ ನಿರ್ಮಾಣ ಪೂರ್ಣಗೊಂಡು ಪ್ರವಾಹವನ್ನು ಸೇತುವೆ ದಾಟಿಸುವುದೇ ಎನ್ನೋ ಅನುಮಾನ ಕಾಡುತ್ತಿದೆ.

ಮುಂದೆ ಓದಿ ...
  • Share this:

ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಯಿತ್ತೆಂದರೆ ಕನಿಷ್ಠ ಐದು ತಿಂಗಳ ಕಾಲ ನಿರಂತರವಾಗಿ ಮಳೆ ಸುರಿಯೋದು ಹೊಸದೇನು ಅಲ್ಲ. ಅದರಲ್ಲೂ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ದಿನಕ್ಕೆ ನೂರು ಸೆಂಟಿ ಮೀಟರ್ ಗಿಂತಲೂ ಅಧಿಕ ಮಳೆ ಸುರಿಯುತ್ತದೆ. ಹೀಗೆ ಮಳೆ ಸುರಿಯಿತ್ತೆಂದರೆ ಮೊದಲು ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿ ಪ್ರವಾಹ ಸೃಷ್ಟಿಯಾಗಿಬಿಡುತ್ತದೆ.


ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದರೆ, ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಕಳೆದ ಮೂರು ವರ್ಷಗಳಿಂದ ಜುಲೈ, ಆಗಸ್ಟ್ ತಿಂಗಳು ಬಂತೆಂದರೆ ಪ್ರವಾಹ ಮತ್ತು ಭೂಕುಸಿತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಇದೆಲ್ಲವನ್ನೂ ಮನಗಂಡೇ ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸಿ ಈ ಪ್ರವಾಹದ ನಡುವೆ ಜನರು ಪರದಾಡುವುದನ್ನು ತಪ್ಪಿಸಲು ನಿರ್ಧರಿಸಲಾಗಿತ್ತು. 34 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 2018 ರಲ್ಲಿ ಚಾಲನೆ ನೀಡಲಾಗಿತ್ತು. ಒಂದು ವರ್ಷದೊಳಗೆ ಮುಗಿಯಬೇಕಾಗಿದ್ದ ಮೇಲ್ಸೇತುವೆ ಕಾಮಗಾರಿ ಮೂರು ವರ್ಷಗಳು ಕಳೆದರೂ ಇಂದಿಗೂ ಕುಂಟುತ್ತಲೇ ಸಾಗಿದೆ. 2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.


ಇದನ್ನು ಓದಿ: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ 1 ಲಕ್ಷ ಭಕ್ತರು; ದೇವಸ್ಥಾನಕ್ಕೆ ಮೂರ್ನಾಲ್ಕು ಕೋಟಿ ಆದಾಯದ ನಿರೀಕ್ಷೆ


ಭಾಗಮಂಡಲದ ತ್ರಿವೇಣಿ ಸಂಗಮ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಯಾವುದೇ ವಾಹನಗಳ ಓಡಾಟವೂ ಸಾಧ್ಯವಾಗಿರಲಿಲ್ಲ. ಇನ್ನು 2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದುಬಿದ್ದಿತ್ತು. ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂ ಸಮಾಧಿಯಾಗಿದ್ದರೂ. ಆಗಲೂ ಕೂಡ ಬಾರಿ ಮಳೆ ಸುರಿಯುತ್ತಿದ್ದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು. ಭಾಗಮಂಡಲದಿಂದ ತಲಕಾವೇರಿವರೆಗೆ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದರಿಂದ ಜೆಸಿಬಿ ಮತ್ತು ಇತರೆ ವಾಹನಗಳನ್ನು ತೆಗೆದುಕೊಂಡ  ಹೋಗಿ ರಸ್ತೆ ತೆರವು ಮಾಡಲು ಪರದಾಡಬೇಕಾಗಿತ್ತು. ಹೀಗಾಗಿ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನಗಳೇ ಕಾಯಬೇಕಾಗಿತ್ತು. ಇಷ್ಟೆಲ್ಲಾ ಆಗಿದ್ದರಿಂದ ಮಳೆ ಬಂದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಇಲ್ಲಿ ಈ ಬಾರಿಯಾದರೂ ಇಂತಹ ಸ್ಥಿತಿಯಿಂದ ಹೊರಬರಹುದು ಎನ್ನೋ ಆಶಯದಲ್ಲಿ ಈ ಭಾಗದ ಜನರಿದ್ದರು. ಆದರೆ ಮೇಲ್ಸೇತುವೆಯ ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.


ಕ್ಷೇತ್ರದ ಶಾಸಕರಾದ ಕೆ.ಜಿ. ಬೋಪಯ್ಯ ಅವರನ್ನು ಕೇಳಿದರೆ, ಇಷ್ಟೊತ್ತಿಗೆ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ಲಾಕ್ ಡೌನ್ ಆಗಿದ್ದರಿಂದ ಕಾಮಗಾರಿ ಸ್ಥಗಿತವಾಗಿತ್ತು. ಈಗ ಮತ್ತೆ ಆರಂಭವಾಗಿದ್ದು ಮುಂದಿನ ಮಳೆಗಾಲದ ಒಳಗಾಗಿ ಮುಗಿಸುವಂತೆ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎನ್ನುತ್ತಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನೂ ಪಿಲ್ಲರ್ ಗಳನ್ನು ಮಾಡುವ ಹಂತದಲ್ಲೇ ಇದ್ದು, ಮೂರು ತಿಂಗಳಲ್ಲೇ ಆರಂಭವಾಗುವ ಮಳೆಗಾಲದ ಒಳಗೆ ಸೇತುವೆ ನಿರ್ಮಾಣ ಪೂರ್ಣಗೊಂಡು ಪ್ರವಾಹವನ್ನು ಸೇತುವೆ ದಾಟಿಸುವುದೇ ಎನ್ನೋ ಅನುಮಾನ ಕಾಡುತ್ತಿದೆ.

Published by:HR Ramesh
First published: