Flood: ನೆರೆ ಅಧ್ಯಯನಕ್ಕೆ ಬಂದ ಕೇಂದ್ರ ತಂಡಕ್ಕೆ ಪ್ರತಿಭಟನೆ ಬಿಸಿ: ಅಧಿಕಾರಿಗಳ ಎದುರು ಕುಡುಗೋಲು ಹಿಡಿದು ಧರಣಿ ಕುಳಿತ ರೈತ!

ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಪೂರ್ವದಲ್ಲಿ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಅತಿವೃಷ್ಟಿ, ನೆರೆಯಿಂದಾದ ಹಾನಿಯ ಮಾಹಿತಿಯನ್ನು ಪಿಪಿಟಿ ಮೂಲಕ ಮನವರಿಕೆ ಮಾಡಿಕೊಟ್ಟರು. ಪ್ರಸಕ್ತ ಸಾಲಿನ ಜುಲೈ ಕೊನೆಯ ವಾರದಲ್ಲಿ ಉಂಟಾದ ಪ್ರವಾಹದಿಂದ ಅಂದಾಜು ಒಟ್ಟು 420.17 ಕೋಟಿ ರೂ.ಗಳಷ್ಟು ಹಾನಿಯಾಗಿರುತ್ತದೆ.

ನೆರೆ ಅಧ್ಯಯನ ತಂಡದ ಸದಸ್ಯರ ಎದುರು ಪ್ರತಿಭಟನೆ ನಡೆಸಿದ ರೈತ.

ನೆರೆ ಅಧ್ಯಯನ ತಂಡದ ಸದಸ್ಯರ ಎದುರು ಪ್ರತಿಭಟನೆ ನಡೆಸಿದ ರೈತ.

 • Share this:
  ಬಾಗಲಕೋಟೆ: ಜಿಲ್ಲೆಗೆ ಆಗಮಿಸಿದ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ (Central Flood Study Team) ಮುಧೋಳ ತಾಲೂಕಿನ ಚಿಂಚಕಂಡಿ ಗ್ರಾಮದ ಬಳಿ ರೈತರ ಪ್ರತಿಭಟನೆ (Farmers Protest) ಬಿಸಿ ತಟ್ಟಿದೆ. ಕೇಂದ್ರ ತಂಡದ ಸದಸ್ಯರೊಂದಿಗೆ ರೈತರು ವಾಗ್ವಾದ ನಡೆಸಿದ್ದಾರೆ. ನೆರೆ ಹಾನಿ ವೀಕ್ಷಣೆ ವೇಳೆ ಕೇಂದ್ರ ತಂಡಕ್ಕೆ ರೈತರು  ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮೂರು ವಷ೯ಗಳಿಂದ ಪ್ರವಾಹದಿಂದ ಕಂಗೆಟ್ಟಿದ್ದೇವೆ. ಆದರೆ ಸರ್ಕಾರ ಸಮರ್ಪಕ ಪರಿಹಾರ ನೀಡಿಲ್ಲವೆಂದು ಆಕ್ರೋಶಗೊಂಡ ರೈತರು, ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಜೊತೆಯೂ  ವಾಗ್ವಾದ ನಡೆಸಿದ್ದಾರೆ. ಕೇಂದ್ರ ನೆರೆ ಅಧ್ಯಯನ ತಂಡದ ಸದಸ್ಯರ ಕಾರಿನ ಎದುರು  ರೈತ ದಿವಾಕರ್ ಹೊಸಮಠ ಎಂಬುವವರು ಧರಣಿ ಕುಳಿತ ಘಟನೆಯೂ ನಡೆದಿದೆ. ಈ ವೇಳೆ ರೈತನ ಕೈಯಲ್ಲಿದ್ದ ಕುಡಗೋಲು ಪೊಲೀಸರು ಕಸಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ರೈತರನ್ನ ಸಮಾಧಾನ ಪಡಿಸಿದ್ದಾರೆ. ಬಳಿಕ  ಅಧ್ಯಯನ ತಂಡವು ಜಮಖಂಡಿ ಉಪವಿಭಾಗದ ವ್ಯಾಪ್ತಿಯ ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ತಾಲೂಕಿನ ಆಯ್ದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

  ಮುಧೋಳ ತಾಲೂಕಿನ ಚಿಚಖಂಡಿ ಸೇತುವೆಗೆ ಭೇಟಿ ನೀಡಿದ ಕೇಂದ್ರ ತಂಡವು ಭೀಮನಗೌಡ ಪಾಟೀಲ, ರಾಘವೇಂದ್ರ ಪಾಟೀಲ ಹಾಗೂ ಯಂಕನಗೌಡ ಪಾಟೀಲ ಅವರ ಕಬ್ಬು ಬೆಳೆ ಹಾನಿ ವೀಕ್ಷಿಸಿದರು. ಹೆಸ್ಕಾಂಗೆ ಸಂಬಂಧಿಸಿದ 58 ವಿದ್ಯುತ್ ಕಂಬ, 5 ಟಿಸಿ, 11.6 ಕಿ.ಮೀ ಕಂಡಕ್ಟರ್ ಹಾನಿಯಾಗಿರುವದನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಚಿಚಖಂಡಿಯ ಮಿನಿ ವಾಟರ್ ಯೋಜನೆಯ ಹಾನಿಯನ್ನು ಸಹ ವೀಕ್ಷಣೆ ಮಾಡಿದರು.

  ಸೋರಗಾವಿ ಗ್ರಾಮಕ್ಕೆ ತೆರಳಿ ಪ್ರವಾಹದಿಂದಾದ ಮನೆಗಳ ಹಾನಿ, ಯಾದವಾಡ ಸೇತುವೆಗೆ ತೆರಳಿ ಲೋಕೋಪಯೋಗಿಯ ರಸ್ತೆ, ಸೂರ್ಯಕ್ರಾಂತಿ ಬೆಳೆ ಹಾನಿ, ವಿದ್ಯುತ್‍ಗೆ ಸಂಬಂಧಿಸಿದ ಮೂಲಸೌಕರ್ಯಗಳು, ಮಿರ್ಜಿ ಗ್ರಾಮದಲ್ಲಿ ಹಾನಿಗೊಳಗಾದ ಮನೆ, ಬಟ್ಟೆ, ಪಾತ್ರೆ, ಮನೆಯ ಹಿಡುವಳಿ ವಸ್ತುಗಳ ನಷ್ಟ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಹಾನಿ, ಹೆಸ್ಕಾಂನ ಮೂಲಸೌಕರ್ಯಗಳ ಹಾನಿಗಳನ್ನು ಪರಿಶೀಲಿಸಿದರು.

  ಇನ್ನು ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರದಲ್ಲಿ ಕುಡಿಯುವ ನೀರಿನ, ಹೆಸ್ಕಾಂನ ಮೂಲಸೌಕರ್ಯ ಹಾನಿ, ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ, ಲೋಕೋಪಯೋಗಿಗೆ ಸಂಬಂಧಿಸಿದ ಹಾನಿಗೊಳಗಾದ ರಸ್ತೆ, ಬೆಳೆ ಹಾನಿ ಪರಿಶೀಲನೆ ನಡೆಸಿದರು. ಅಲ್ಲದೇ ರೈತರಿಂದ ಹಾನಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.

  ಜಿಲ್ಲೆಯ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಪೂರ್ವದಲ್ಲಿ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಅತಿವೃಷ್ಟಿ, ನೆರೆಯಿಂದಾದ ಹಾನಿಯ ಮಾಹಿತಿಯನ್ನು ಪಿಪಿಟಿ ಮೂಲಕ ಮನವರಿಕೆ ಮಾಡಿಕೊಟ್ಟರು. ಪ್ರಸಕ್ತ ಸಾಲಿನ ಜುಲೈ ಕೊನೆಯ ವಾರದಲ್ಲಿ ಉಂಟಾದ ಪ್ರವಾಹದಿಂದ ಅಂದಾಜು ಒಟ್ಟು 420.17 ಕೋಟಿ ರೂ.ಗಳಷ್ಟು ಹಾನಿಯಾಗಿದೆ. ಕೃಷಿ 24405 ಹೆಕ್ಟೇರ್ ಪ್ರದೇಶ ಹಾನಿಯಿಂದ 220.19 ಕೋಟಿ, ತೋಟಗಾರಿಕೆ 875.6 ಹೆಕ್ಟೇರ್ ಹಾನಿಯಿಂದ 7.39 ಕೋಟಿ, ರೇಷ್ಮೆ 6.7 ಹೆಕ್ಟೇರ್ ಹಾನಿಯಿಂದ 32 ಸಾವಿರ, ಲೋಕೋಪಯೋಗಿ ಇಲಾಖೆ ಸಂಬಂಧಿಸಿದ 268 ಕಿ.ಮೀ ರಸ್ತೆ, 7 ಸೇತುವೆ ಹಾನಿಯಿಂದ 125.79 ಕೋಟಿ, ಗ್ರಾಮೀಣ ಪ್ರದೇಶದ 710 ಕಿಮೀ ರಸ್ತೆ ಹಾಗೂ 18 ಸೇತುವೆ ಹಾನಿಯಿಂದ 13.91 ಕೋಟಿ ರೂ.ಗಳಷ್ಟು ಹಾನಿಯಾಗಿರುತ್ತದೆ ಎಂದು ತಿಳಿಸಿದರು.

  ಇದನ್ನು ಓದಿ: Belagavi Municipal Corporation: ಬೆಳಗಾವಿ ಪಾಲಿಕೆ ಫೈಟ್; ಐತಿಹಾಸಿಕ ಗೆಲವು ಸಾಧಿಸಿದ ಬಿಜೆಪಿ, ಧೂಳೀಪಟವಾದ ಎಂಇಎಸ್!

  ಸಣ್ಣ ನೀರಾವರಿ ಇಲಾಖೆಯಿಂದ 18 ಕೆನಾಲ್, 4 ಲಿಫ್ಟ್ ನೀರಾವರಿ ಯೋಜನೆ ಹಾನಿಯಿಂದ 21.86 ಕೋಟಿ, ಶಿಕ್ಷಣ ಇಲಾಖೆ 30 ಶಾಲೆಗಳು, 77 ಕೊಠಡಿ ಹಾನಿಯಿಂದ 1.44 ಕೋಟಿ, ನಗರ ಅಭಿವೃದ್ದಿ ಇಲಾಖೆಯಿಂದ 30 ಕಿಮೀ ರಸ್ತೆ, 1 ಕುಡಿಯುವ ನೀರಿನ ಯೋಜನೆ ಹಾನಿಯಿಂದ 3.39 ಕೋಟಿ, 13 ದೊಡ್ಡ ಜಾನುವಾರು, 18 ಸಣ್ಣ ಜಾನುವಾರು, 21 ಆಡುಗಳು ಮೃತಪಟ್ಟಿದ್ದು, 52 ಪರಿಹಾರಧನ ಪೈಕಿ 7.80 ಲಕ್ಷ ವಿತರಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ 33 ಯೋಜನೆಗಳು, 29097 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಎ ಕೆಟಗರಿ 7, ಬಿ-17 ಹಾಗೂ ಸಿ-122 ಸೇರಿ ಒಟ್ಟು 146 ಮನೆಗಳು ಹಾನಿಗೊಳಿಗಾರಿರುವುದಾಗಿ ತಿಳಿಸಿದರು.

  ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಲೊಕೋಪಯೋಗಿ ಇಲಾಖೆಯ ಮುಖ್ಯ ಇಂಜಿನೀಯರ್ ಪ್ರಶಾಂತ, ಮುಧೋಳ, ಜಮಖಂಡಿ ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

  ವರದಿ: ಮಂಜುನಾಥ್ ತಳವಾರ 
  Published by:HR Ramesh
  First published: