ಶಿವಮೊಗ್ಗ; ಮಧ್ಯ ಕರ್ನಾಟಕದ ರೈತರ ಜೀವನಾಡಿ ಭದ್ರಾ ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಬಯಲು ಸೀಮೆಯಲ್ಲಿ ಹರಿಯುತ್ತಾಳೆ. ಚಿಕ್ಕಮಗಳೂರು,ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಸೇರಿದಂತೆ ಹಲವು ಜಿಲ್ಲೆಗಳ ರೈತರ ಪಾಲಿಗೆ ಈಕೆಯೇ ಆಸರೆ. ಇಂತಹ ಭದ್ರೆಯ ಒಡಲು ಈ ಬಾರಿ ಮತ್ತೇ ತುಂಬಿದೆ. ಇದರಿಂದಾಗಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಕೃಷಿ, ವಿದ್ಯುತ್ ಮತ್ತು ಕುಡಿಯುವ ನೀರಿಗೆ ಭದ್ರಾ ಜಲಾಶಯದ ನೀರು ಬಳಕೆಯಾಗುತ್ತಿದೆ. ಕುಡಿಯುವ ನೀರು, ವ್ಯವಸಾಯ, ಕೈಗಾರಿಕೆ, ಮೀನು ಸಾಕಾಣಿಕೆ ಹೀಗೆ ಎಲ್ಲಾ ಕಾರ್ಯಗಳಿಗೂ ಭದ್ರೆಯನ್ನು ನಂಬಿ ಜೀವನ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅಭಯಾರಣ್ಯದ ಗಂಗಡಿಕಲ್ಲು ಬಳಿಯ ಗಂಗಾ ಮೂಲದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿವ ನದಿ ಈ ಭಾರಿ ಭದ್ರಾ ಅಣೆಕಟ್ಟೆಯನ್ನು ತುಂಬಿಸಿದ್ದು ಎಲ್ಲೆಡೆ ರೈತರಲ್ಲಿ ಸಂತಸ ಮನೆಮಾಡಲು ಕಾರಣವಾಗಿದೆ.
ಭದ್ರಾ ನದಿ ಹುಟ್ಟಿ ಸುಮಾರು 125 ಕೀಮಿ ಹರಿದ ನಂತರ ಭದ್ರೆಗೆ ಅಣೆಕಟ್ಟು ಕಟ್ಟಲಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿ ಆರ್ ಪಿ ಬಳಿ ಭದ್ರಾ ಅಣೆಕಟ್ಟು ನಿರ್ಮಿಸಲಾಗಿದೆ. ಭದ್ರಾ ನದಿಗೆ 1962 ರಲ್ಲಿ ಬಿ ಆರ್ ಪಿ ಬಳಿ ಅಣೆಕಟ್ಟು ನಿರ್ಮಿಸಲಾಗಿದೆ.
186 ಅಡಿ ಎತ್ತರವಿರುವ ಜಲಾಶಯದಲ್ಲಿ 71.535 ಟಿಎಂಸಿ ನೀರನ್ನು ಸಂಗ್ರಹಿಸಬಹುದಾಗಿದೆ. ಭದ್ರಾ ಜಲಾಶಯದಿಂದ ಸುಮಾರು 1,50,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿದೆ.
ಇದನ್ನೂ ಓದಿ : ಮೇಕೆದಾಟು ಅಣೆಕಟ್ಟು ನಮ್ಮ ಸರ್ಕಾರದಲ್ಲಿ ನಿರ್ಮಾಣವಾಗಲಿದೆ; ಸಚಿವ ರಮೇಶ್ ಜಾರಕಿಹೊಳಿ ಭರವಸೆ
186 ಅಡಿ ಸಾಮಥ್ಯ ಹೊಂದಿರುವ ಜಲಾಶಯದಲ್ಲಿ ಸಧ್ಯ 185.7 ಅಡಿ ನೀರಿನ ಸಂಗ್ರಹವಿದೆ. ಮುನ್ನೇಚ್ಚರಿಕೆ ಕ್ರಮವಾಗಿ ಅಣೆಕಟ್ಟಿನ ನಾಲ್ಕು ಗೇಟುಗಳ ಮುಖಾಂತರ 1751 ಕ್ಯೂಸೆಕ್ ನೀರನ್ನು ಭದ್ರಾ ನದಿಗೆ ಹರಿಬಿಡಲಾಗುತ್ತಿದೆ. ಒಳ ಹರಿವು 6800 ಕ್ಯೂಸೆಕ್. ಹಾಲಿ ಅಣೆಕಟ್ಟಿನಲ್ಲಿ 71.012 ಟಿಎಂಸಿ ನೀರು ಸಂಗ್ರಹವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ