ಚಾಮರಾಜನಗರ (ಮಾ.29); ಬಳ್ಳಾರಿ ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಗಣಿಗಾರಿಕೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಚಾಮರಾಜನಗರ ಜಿಲ್ಲೆಯು ಒಂದಾಗಿದೆ ಗಣಿಗಾರಿಕೆಯಿಂದ ರಾಜಧನದ ರೂಪದಲ್ಲಿ ಸರ್ಕಾರಕ್ಕೂ ಸಹ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಅಲ್ಲದೇ ಗಣಿ ಮಾಲೀಕರು ಸಹ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ಗಣಿ ಮಾಲೀಕರೊಬ್ಬರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಬೆಟ್ಟದಮಾದಹಳ್ಳಿಯಲ್ಲಿರುವ ಬೆಟ್ಟದಲ್ಲಿ ಮತ್ತೆ ಬಿಳಿಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸಲು ಅನುಮತಿ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಒಂದು ವೇಳೆ ಗ್ರಾಮಸ್ಥರ ಇಚ್ಚೆ ಮೀರಿ ಅವಕಾಶ ಕೊಟ್ರೆ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ಮಾಡುವ ಸಂದೇಶವನ್ನೂ ನೀಡಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಬೆಟ್ಟ ಇರುವುದರಿಂದ ಈ ಗ್ರಾಮಕ್ಕೆ ಬೆಟ್ಟದಮಾದಹಳ್ಳಿ ಎಂಬ ಹೆಸರು ಬಂದಿದೆ. ಇಲ್ಲಿ ಗಣಿಗಾರಿಕೆ ನಡೆದರೆ ಈ ಬೆಟ್ಟಕ್ಕೆ ಸಂಚಕಾರ ಬಂದೊದಗಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ. ಬೆಟ್ಟದಮಾದಹಳ್ಳಿ ಗ್ರಾಮ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಓಂಕಾರ ವಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಜೊತೆಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬೃಹತ್ ಟ್ಯಾಂಕ್ ಕೂಡ ಬೆಟ್ಟದಮಾದಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದಲ್ಲಿ ನಿರ್ಮಾಣವಾಗಿದೆ. ಒಂದು ವೇಳೆ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟರೆ ಕುಡಿಯುವ ನೀರಿನ ಟ್ಯಾಂಕ್ ಗೆ ತೊಂದರೆಯಾಗುತ್ತೆ. ಅಲ್ಲದೇ ವನ್ಯ ಪ್ರಾಣಿಗಳ ಜೀವಕ್ಕೂ ಸಂಚಕಾರ ಎದುರಾಗುತ್ತೆ, ಸುತ್ತಮುತ್ತಲಿನ ಬೆಳೆಗಳು ಹಾಳಾಗುತ್ತವೆ ಎನ್ನುತ್ತಾರೆ ಗ್ರಾಮದ ಮುಖಂಡ ಮಹೇಶ್.
ಬೆಟ್ಟದಮಾದಹಳ್ಳಿ ಗ್ರಾಮದ ಸರ್ವೇ ನಂಬರ್ 37 ರ ಜಾಗದಲ್ಲಿ 437 ಎಕರೆ ಜಮೀನಿದೆ. ಗ್ರಾಮಸ್ಥರು ಕೃಷಿ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ಹಣದಾಸೆಗೆ ಇಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟರೆ ನಮ್ಮ ಜೀವನಕ್ಕೆ ತೊಂದರೆಯಾಗುತ್ತದೆ. ಜನರಿಗೆ ಅನಾನುಕೂಲವಾಗುವ ಗಣಿಗಾರಿಕೆಗೆ ಯಾಕೆ ಅವಕಾಶ ಕೊಡಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಯಾರೋ ಒಬ್ಬರ ಶ್ರೆಯೋಭಿವೃದ್ದಿಗೆ ಗ್ರಾಮದ ಹಿತ ಬಲಿ ಕೊಡುವುದು ಬೇಡ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ಡೌನ್, ನೈಟ್ ಕರ್ಫ್ಯೂ ಜಾರಿ ಇಲ್ಲ; ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ
10 ವರ್ಷದ ಹಿಂದೆ ಇಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಇಡೀ ಗ್ರಾಮಸ್ಥರು ಒಗ್ಗಟ್ಟಾಗಿ ಹೋರಾಡಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದೆವು. ಈಗ ಮತ್ತೆ ಗಣಿಗಾರಿಕೆ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯ ಆಲಿಸದೆ ಅನುಮತಿ ನೀಡಿದರೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ. ಅಲ್ಲದೆ ಗಣಿಗಾರಿಕೆ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ