ರಾಮನಗರ (ಚನ್ನಪಟ್ಟಣ): ಕಳೆದ ವರ್ಷ ಕೊರೋನಾ ಏಟಿಗೆ ವಿಳ್ಳೆದೆಲೆ ಬೆಳೆಗಾರರು ಸಂಪೂರ್ಣ ಸೊರಗಿದ್ದರು. ಆದರೆ ಒಂದು ವರ್ಷದ ನಂತರ ವೀಳ್ಯದೆಲೆ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ರೈತರು ವೀಳ್ಯದೆಲೆ ಬೆಳೆಯುವುದರಲ್ಲಿ ನಿಸ್ಸೀಮರು. ಆದರೆ ಕಳೆದ ವರ್ಷ ಕೊರೋನಾ ಏಟಿಗೆ ವಿಳೆದೆಲೆ ಬೆಳೆಗಾರರು ಸಂಪೂರ್ಣ ನಷ್ಟವನ್ನ ಅನುಭವಿಸಿದ್ದರು. ಸಾಮಾನ್ಯವಾಗಿ 1 ಪಿಂಡಿ ವೀಳ್ಯದೆಲೆಗೆ 5 ರಿಂದ 6 ಸಾವಿರ ರೂಪಾಯಿ ಬೆಲೆಯಿರುತ್ತಿತ್ತು. ಆದರೆ ಕಳೆದ ವರ್ಷದ ಆರಂಭದಲ್ಲಿ ಕೊರೋನಾದಿಂದಾಗಿ ಬೆಲೆ ಸಂಪೂರ್ಣ ಇಳಿಮುಖವಾಗಿ 600 ರಿಂದ 1500 ರೂಗೆ ಇಳಿದಿತ್ತು. ಆದರೂ ಸಹ ಬೆಳೆದ ಬೆಳೆಯನ್ನ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ನಷ್ಟಪಟ್ಟಿದ್ದರು. ಚನ್ನಪಟ್ಟಣದಲ್ಲಿ ಬೆಳೆಯುವ ವೀಳ್ಯದೆಲೆಗೆ ರಾಜ್ಯ, ಹೊರರಾಜ್ಯ, ಹೊರದೇಶದಲ್ಲಿಯೂ ಸಹ ಅತ್ಯಂತ ಬೇಡಿಕೆಯಿದೆ. 100ಕ್ಕೂ ಹೆಚ್ಚು ಗ್ರಾಮಗಳಲ್ಲಿ ವೀಳೆದೆಲೆಯನ್ನ ಬೆಳೆಯುತ್ತಾರೆ ಇಲ್ಲಿನ ರೈತರು.
ಕಳೆದ ಮಾರ್ಚ್ ವೇಳೆಯಲ್ಲಿಯೇ ಕುಸಿದಿದ್ದ ವಿಳ್ಳೆದೆಲೆ ಬೆಲೆ ಈ ಬಾರಿ ಮತ್ತೆ ಏರಿಕೆಯಾಗುವ ಮೂಲಕ ರೈತರ ಮೊಗದಲ್ಲಿ ಸಂತಸ ತಂದಿದೆ. 600 ರಿಂದ 1500 ರೂಪಾಯಿ ಇದ್ದದ್ದು, ಈಗ 5 ರಿಂದ 6 ಸಾವಿರಕ್ಕೆ ಏರಿಕೆಯಾಗುವ ಮೂಲಕ ರೈತರ ಬಾಳಲ್ಲಿ ನೆಮ್ಮದಿ ತಂದಿದೆ. ಒಂದು ಪಿಂಡಿಯಲ್ಲಿ ನೂರು ಕಟ್ಟು ಎಲೆಯಿರುತ್ತದೆ, ಒಂದು ಕಟ್ಟಲ್ಲಿ 100 ಎಲೆಯಿರುತ್ತದೆ. ಈಗ ರೈತರು ಬೆಳೆಯುವ ಒಂದು ಪಿಂಡಿ ಎಲೆಯ ಬೆಲೆ 6 ಸಾವಿರ ರೂವರೆಗೂ ಏರಿಕೆ ಆಗಿರೋದು ನಿಜಕ್ಕೂ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಚನ್ನಪಟ್ಟಣದ ಎಲೆಯನ್ನ ಕೊಳ್ಳಲು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ವ್ಯಾಪಾರಿಗಳು ಚನ್ನಪಟ್ಟಣಕ್ಕೆ ಬರುತ್ತಾರೆ.
ಇದನ್ನೂ ಓದಿ: Drugs Case - ಮಾಜಿ ಬಿಗ್ ಬಾಸ್ ಕನ್ನಡ ಸ್ಪರ್ಧಿ ಮಸ್ತಾನ್ ಪೊಲೀಸರ ವಶಕ್ಕೆ
ಒಟ್ಟಾರೆ ಕೊರೋನಾ ಏಟಿಗೆ ನಲುಗಿದ್ದ ಬೊಂಬೆನಗರಿಯ ವಿಳ್ಳೆದೆಲೆ ಬೆಳೆಗಾರರು ಈಗ ನಿಟ್ಟುಸಿರುಬಿಟ್ಟಿದ್ದಾರೆ. ತಾವು ಕಳೆದುಕೊಂಡಿದ್ದ ಬೆಳೆಯನ್ನ ಮತ್ತೆ ವಾಪಾಸ್ ಪಡೆದಿರುವ ರೈತರು ನ್ಯೂಸ್ 18 ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಳೆದ ವರ್ಷ ರೈತರು ಕಷ್ಟಪಟ್ಟು ಸಾಲಸೋಲ ಮಾಡಿಕೊಂಡು ಬೆಳೆಯನ್ನ ಬೆಳೆದಿದ್ದರು. ಒಳ್ಳೆಯ ಬೆಲೆ ಸಿಕ್ಕುತ್ತದೆ ಎಂದು ಉತ್ಸಾಹದಲ್ಲಿದ್ದರು. ಆದರೆ ಕೊರೋನಾ ಮಹಾಮಾರಿ ಎದುರು ರೈತರ ಲೆಕ್ಕಾಚಾರವೆಲ್ಲ ಉಲ್ಟವಾಯಿತು. ಹಾಗಾಗಿ ಸಿಕ್ಕಿದ ಬೆಲೆಗೆಲ್ಲ ವಿಳ್ಳೆದೆಲೆಯನ್ನ ಮಾರಾಟ ಮಾಡಿದ್ದರು. ಆದರೆ ಈ ಬಾರಿ ಬಂಪರ್ ಬೆಳೆ ಬೆಳೆದಿರುವ ರೈತರು ಹೆಚ್ಚು ಬೆಲೆಗೆ ಮಾರಾಟ ಮಾಡ್ತಿದ್ದಾರೆ. ಇದರ ಜೊತೆಗೆ ಕರ್ನಾಟಕ ಸೇರಿದಂತೆ ಹಲವೆಡೆಯಿಂದ ವ್ಯಾಪಾರಿಗಳು ಹೆಚ್ಚಾಗಿ ಬರುತ್ತಿದ್ದು ಚನ್ನಪಟ್ಟಣದ ವೀಳ್ಯದೆಲೆ ಭರ್ಜರಿಯಾಗಿ ಸೇಲ್ ಆಗುತ್ತಿದೆ.
ವರದಿ: ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ