ಕೊಡಗು (ಜೂನ್ 24): ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಇನ್ನೂ ಕೂಡ ಹಾವು - ಏಣಿ ಆಟ ಆಡುತ್ತಲೇ ಇದೆ. ಈ ನಡುವೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಕೆಲಸ ಮಾಡಿದೆ. ಹೌದು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪಟ್ಟಿ ಮಾಡಿರುವ ರಾಷ್ಟ್ರ ಮಟ್ಟದಲ್ಲಿ ಉತ್ತಮ ಕೋವಿಡ್ ನಿರ್ವಹಣೆ ಮಾಡಿರುವ ಪಂಚಾಯಿತಿಗಳ ಪಟ್ಟಿಯಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಮೊದಲ ಸ್ಥಾನ ಪಡೆದಿದೆ.
ನಾಲ್ಕು ಗ್ರಾಮಗಳನ್ನು ಒಳಗೊಂಡಿರುವ ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೆ 130 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ವಿಡ್ ನಿಂದ ಮೃತಪಟ್ಟಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಿಗೇ ಕೋವಿಡ್ ಸೋಂಕು ದೃಢಪಟ್ಟರೂ ತಕ್ಷಣವೇ ಅವರನ್ನು ಆಸ್ಪತ್ರೆಗೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಸಾಗಿಸುವುದನ್ನು ಚಾಚುತಪ್ಪದೆ ಮಾಡಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವ ಎಲ್ಲರನ್ನೂ ಪತ್ತೆ ಹಚ್ಚಿ ಅವರೆಲ್ಲರಿಗೂ ಕೋವಿಡ್ ಟೆಸ್ಟ್ ಮಾಡಿಸಿ ಸೋಂಕು ಹೆಚ್ಚು ಹರಡದಂತೆ ಅತ್ಯುತ್ತಮವಾಗಿ ನಿಯಂತ್ರಿಸುತ್ತಿದ್ದಾರೆ.
ಇನ್ನು ಹೋಂ ಕ್ವಾರಂಟೈನ್ ನಲ್ಲಿ ಇರುವ ಸೋಂಕಿತರು ಮತ್ತು ಅವರ ಮನೆಯವರು ಹೊರಗೆ ಬರದಂತೆ ತಡೆಯುವಲ್ಲಿಯೂ ಹೊದ್ದೂರು ಗ್ರಾಮ ಪಂಚಾಯಿತಿ ಯಶಸ್ವಿಯಾಗಿದೆ. ಯಾರೇ ಹೋಂ ಕ್ವಾರಂಟೈನ್ ಆದರೂ ಅವರಿಗೆ ವಾರಕ್ಕೆ ಒಂದು ಬಾರಿಯಂತೆ ಹದಿನೈದು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಮನೆ ಸೀಲ್ ಡೌನ್ ಮಾಡುವಾಗಲೇ ವಿತರಣೆ ಮಾಡಲಾಗುತ್ತಿದೆ. ಅದಕ್ಕಾಗಿ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ತಮ್ಮ ಒಂದು ತಿಂಗಳ ವೇತನವನ್ನು ನೀಡಿದ್ದಾರೆ. ಪಂಚಾಯಿತಿಯ ಎಲ್ಲಾ ಸಿಬ್ಬಂದಿಯ ಒಂದು ತಿಂಗಳ ವೇತನ 48 ಸಾವಿರ ಆಗಿದ್ದುು, ಅದರ ಜೊತೆಗೆ ಪಂಚಾಯಿತಿಯ ಬೇರೆ ಅನುದಾನವನ್ನು ಬಳಸಿ ಆಹಾರ ಕಿಟ್ ಗಳನ್ನು ನೀಡಲಾಗುತ್ತಿದೆ. ಹೀಗಾಗಿ ಹೋಂ ಕ್ವಾರಂಟೈನ್ ನಲ್ಲಿ ಇರುವವರು ಅನಗತ್ಯವಾಗಿ ಹೊರಗೆ ಬರದಂತೆ ತಡೆಯಲು ಸಹಕಾರಿಯಾಗಿದೆ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ.
ಇದನ್ನು ಓದಿ: 10 ತಿಂಗಳಲ್ಲಿ 43 ಬಾರಿ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖನಾದ 72 ವರ್ಷದ ವೃದ್ಧ!
ಅಷ್ಟೇ ಅಲ್ಲ ಪಂಚಾಯಿತಿಯಲ್ಲೇ ಸಹಾಯವಾಣಿ ತೆರೆಯಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿ ಇರುವವರ ಆರೋಗ್ಯ ಮತ್ತು ಅವರ ಚಲನವಲನದ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅಲ್ಲದೇ ಪಂಚಾಯಿತಿ ಮಟ್ಟದ ಟಾಸ್ಕ್ ಫೋರ್ಸ್ ಸಭೆಯನ್ನು ಆಗಿಂದಾಗ್ಗೆ ನಡೆಸುತ್ತಾ ತೆಗೆದುಕೊಳ್ಳುವ ನಿರ್ಣಯಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಅದಕ್ಕಾಗಿ ಪ್ರತಿ 50 ಮನೆಗಳಿಗೆ ಒಂದು ಉಸ್ತುವಾರಿ ಸಮಿತಿ ಕೆಲಸ ನಿರ್ವಹಿಸುತ್ತಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಕರಣಗಳು ಜಾಸ್ತಿಯಾಗಿದ್ದವು. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಬೇಕಾಗಿದ್ದ ಮದುವೆ, ನಾಮಕರಣ ಸೇರಿದಂತೆ ವಿವಿಧ 8 ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಹೀಗೆ ಎಲ್ಲರ ಸಹಕಾರದೊಂದಿಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊವಿಡ್ ಸೋಂಕನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ