ಫೈನ್ ಹಾಕೋದಷ್ಟೇ ಅಲ್ಲ, ರಸ್ತೆ ಗುಂಡಿ ಮುಚ್ಚುವ ಕಾಯಕದಲ್ಲೂ ಬೆಂಗಳೂರಿನ ಪೊಲೀಸ್
ಬೆಂಗಳೂರಿನ ಟ್ರಾಫಿಕ್ ಪೊಲೀಸರು ಬರೀ ಟ್ರಾಫಿಕ್ ಕಂಟ್ರೋಲ್ ಮಾಡೋದಲ್ಲ, ನಿಯಮ ಉಲ್ಲಂಘಿಸಿದ್ರೆ ಬರೀ ಫೈನ್ ಹಾಕೋದು ಮಾತ್ರ ಅಲ್ಲ ಈಗ ಬೆಂಗಳೂರಿನ ರಸ್ತೆ ಗುಂಡಿಗಳನ್ನೂ ಮುಚ್ಚೋ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಂಗಳೂರು(ಜ. 07): ಅಲ್ಲಲ್ಲಿ ನಿಂತು ಹೆಲ್ಮೆಟ್ ಹಾಕಿಲ್ಲ, ಸೀಟ್ ಬೆಲ್ಟ್ ಹಾಕಿಲ್ಲ ಅಂತ ಜನರಿಗೆ ಕ್ಲಾಸ್ ತಗಳ್ಳೋ ಟ್ರಾಫಿಕ್ ಪೊಲೀಸರು ಈಗ ಬಿಬಿಎಂಪಿ ಜೊತೆ ಸೇರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಹಾಯವಾಗುತ್ತಿದ್ದಾರೆ. ಪಾಟ್ಹೋಲ್ಸ್ನಿಂದಾಗಿ ಇದನ್ನು ಹೆಂಗಪ್ಪಾ ಸರಿ ಮಾಡೋದು ಅಂತ ತಲೆಬಿಸಿಮಾಡಿಕೊಂಡಿದ್ದ ಬಿಬಿಎಂಪಿ ಕೈ ಹಿಡಿದಿದ್ದು ಬೆಂಗಳೂರಿನ ಟ್ರಾಫಿಕ್ ಪೊಲೀಸರು. ಕಳೆದ ಕೆಲ ತಿಂಗಳಿನಿಂದ ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಪೊಲೀಸರೂ ದುಡಿಯುತ್ತಿದ್ದಾರೆ.
ಈವರೆಗೆ 6,654 ರಸ್ತೆಗುಂಡಿಗಳನ್ನ ಪತ್ತೆ ಹಚ್ಚಿದ್ದಾರೆ ಬೆಂಗಳೂರು ಟ್ರಾಫಿಕ್ ಪೊಲೀಸರು. ಈ ಪೈಕಿ 3,310 ಪಾಟ್ ಹೋಲ್ಸ್ ಮುಚ್ಚಿದೆ ಬಿಬಿಎಂಪಿ. ಈ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದ ಬಿಬಿಎಂಪಿ ಫೈಂಡಿಂಗ್ & ಸರ್ವೀಸಿಂಗ್ ಎಂಬ ಎರಡು ವಿಂಗ್ ಮಾಡಿಕೊಂಡಿತ್ತು. ಫೈಂಡಿಂಗ್ ಅಂದರೆ ಗುಂಡಿಗಳನ್ನು ಪತ್ತೆ ಹಚ್ಚುವ ಟೀಂ. ಆ ಜವಾಬ್ದಾರಿನಾ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನೆಲೆ ನಗರದ ಎಲ್ಲೆಲ್ಲಿ ರಸ್ತೆಗುಂಡಿಗಳು ಇವೆ ಎಂದು ಪತ್ತೆ ಹಚ್ಚಿ ಬಿಬಿಎಂಪಿ ಗಮನಕ್ಕೆ ಖಾಕಿ ತಂದಿತ್ತು. ಫೋಟೋ & ಲೊಕೇಶನ್ ಅನ್ನು ಜಿಯೋ ಟ್ಯಾಗಿಂಗ್ ನಲ್ಲಿ ಹಾಕಿ ಬಿಬಿಎಂಪಿಗೆ ಮಾಹಿತಿ ಮುಟ್ಟಿಸುತ್ತಿತ್ತು.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಚೀಫ್ ಇಂಜಿನಿಯರ್ ಪ್ರಹ್ಲಾದ್, ಟ್ರಾಫಿಕ್ ಪೊಲೀಸರು ಕೊಟ್ಟ ಮಾಹಿತಿ ಆಧರಿಸಿ ಕಳೆದ ಕೆಲ ತಿಂಗಳಿನಿಂದ ರಸ್ತೆ ಗುಂಡಿಯನ್ನು ಪಾಲಿಕೆ ಮುಚ್ಚುತ್ತಿದೆ. ಖಾಕಿ ಪತ್ತೆ ಹಚ್ಚಿದ ರಸ್ತೆ ಗುಂಡಿಗಳನ್ನು 48 ತಾಸುಗಳಲ್ಲಿ ಮುಚ್ಚಲಾಗ್ತಿದೆ ಅಂತಿದ್ದಾರೆ ಅಧಿಕಾರಿಗಳು. ಟ್ರಾಫಿಕ್ ಪೊಲೀಸರ ಸಹಾಯದಿಂದ ನಗರದ ಪ್ರಮುಖ 484 ರಸ್ತೆಗಳ ಪೈಕಿ 400 ಕ್ಕೂ ಹೆಚ್ಚಿನ ರಸ್ತೆಗಳನ್ನು ಗುಂಡಿಮುಕ್ತ ಮಾಡಲಾಗಿದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಇದೊಂದು ಮಾದರಿಯಲ್ಲಿ ಸಾಧನೆ. ಸಿಬ್ಬಂದಿವರ್ಗದವರು ಅಭಿನಂದನೆಗೆ ಅರ್ಹರು. ಇದಕ್ಕೆ ಹಲವು ಇಲಾಖೆಗೆಳ ಬೆಂಬಲ ಸಿಕ್ಕಿದೆ. ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರು ಸೇರಿಕೊಂಡು ಇದ್ದನ್ನು ಮಾಡಿದೆ. ಬೆಂಗಳೂರಿನ ರಸ್ತೆಗಳು ಸುಗಮ ಓಡಾಟಕ್ಕೆ ಅನುವು ಮಾಡಿಕೊಡೋದೆ ಇದರ ಹಿಂದಿರುವ ಗುರಿ ಅಂತ ಹೇಳಿದ್ದಾರೆ.
ಬಿಬಿಎಂಪಿ ಜೊತೆ ನಿರಂತರ ಈ ಬಗ್ಗೆ ಕೆಲಸ ಮಾಡಿರುವ ಟ್ರಾಫಿಕ್ ಪೊಲೀಸರದ್ದು ಅವಿರತ ಶ್ರಮ. ದಿನವಿಡೀ ನಡು ರಸ್ತೆಯಲ್ಲೇ ನಿಲ್ಲೋ ಟ್ರಾಫಿಕ್ ಪೊಲೀಸರಿಗೆ ಬೆಂಗಳೂರಿನ ರಸ್ತೆಯ ಬಗೆಗಿನ ಪೂರ್ಣ ಚಿತ್ರಣವಿದೆ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಂಡು ಟ್ರಾಫಿಕ್ ಪೊಲೀಸರಿಗೆ ವಹಿಸಲಾಗಿದೆ. ಒಟ್ಟಾರೆಯಾಗಿ ಟ್ರಾಫಿಕ್ ಪೊಲೀಸರ ಈ ಕಾರ್ಯ ಬೆಂಗಳೂರಿನ ಜನರ ಸುಗಮ ಓಡಾಟಕ್ಕೆ ದಾರಿ ಮಾಡಿಕೊಡಲಿದೆ. ಟ್ರಾಫಿಕ್ ಕಂಟ್ರೋಲ್ ಮಾಡೋದರ ಜೊತೆಗೆ ರಸ್ತೆಗುಂಡಿಗಳನ್ನೂ ಪತ್ತೆ ಹಚ್ಚಿ ಅದನ್ನು ಸರಿಪಡಿಸುವಲ್ಲಿ ಕೆಲಸ ಮಾಡಿದ್ದಾರೆ.
ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ