ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: 4 ಸಾವಿರ ನಕಲಿ ಮತದಾರರ ಸೃಷ್ಟಿ - ಜೆಡಿಎಸ್ ಅಭ್ಯರ್ಥಿ ಆರೋಪ
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 17,800 ಮತದಾರರಿದ್ದು, ಇದರಲ್ಲಿ 4 ಸಾವಿರ ನಕಲಿ ಎಂದು ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ತಳ್ಳಿಹಾಕಿದ್ದಾರೆ.
ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ರಾಮನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಗಂಭೀರವಾಗಿ ಆರೋಪಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಎ.ಪಿ. ರಂಗನಾಥ್, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,800 ಮತದಾರರಿದ್ದಾರೆ. ಆದರೆ ಇದರಲ್ಲಿ ಸರಿಸುಮಾರು 4 ಸಾವಿರ ನಕಲಿ ಮತದಾರರಿದ್ದಾರೆಂದು ಗಂಭೀರವಾಗಿ ಆಪಾದನೆ ಮಾಡಿದರು. ಈ ಬಗ್ಗೆ ಈಗಾಗಲೇ ನಾನು ಸೇರಿದಂತೆ ವಿವಿಧ ರಾಜಕೀಯ ಪಕ್ಷದವರಿಂದಲೂ ಸಹ ದೂರು ನೀಡಲಾಗಿದೆ. ಚುನಾವಣಾ ಆಯೋಗಕ್ಕೆ ಸ್ವತ: ನಾನೇ ದೂರು ನೀಡಿದ್ದೇನೆ. ಈ ಕೇಸ್ನ ಸಂಬಂಧ ಮುಂದಿನ ತಿಂಗಳ 6 ನೇ ತಾರೀಖು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಮಾಜಿ ಎಂಎಲ್ಸಿ ಹಾಗೂ ಹಾಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರ ಕೈವಾಡವಿದೆ. ಅವರ ಆಪ್ತ ಆರಾಧ್ಯ ಎಂಬುವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಈ ಕುತಂತ್ರ ಮಾಡಿದ್ದಾರೆಂದು ಕಿಡಿಕಾರಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಸಹ ರಾಮನಗರದ ಖಾಸಗಿ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾವು ಯಾವ ಅಕ್ರಮವನ್ನು ಮಾಡಿಲ್ಲ. ಬೇಕಿದ್ದರೆ ಅವರ ಮನೆಯಲ್ಲಿರುವ ಶಿಕ್ಷಕರನ್ನೇ ಮತದಾರರಾಗಿ ಮಾಡಲಿ. ಶಿಕ್ಷಕರಿದ್ದರೆ, ನಮಗೆ ಯಾವುದೇ ತಕರಾರಿಲ್ಲ. ನಾನು ಮೂರು ಬಾರಿ ಚುನಾವಣೆಯನ್ನ ಎದುರಿಸಿದ್ದೇನೆ. ಬೇಕಿದ್ದರೆ ಕಾನೂನಿದೆ, ವಿಚಾರಣೆ ಮಾಡಲಿ ಎಂದು ಸವಾಲು ಹಾಕಿದರು.
ನಾನು 3 ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಇಂತಹ ಕೆಲಸ ಮಾಡಿಲ್ಲ. ನಾನು ಈ ಸಂದರ್ಭದಲ್ಲಿ ಬೇರೊಬ್ಬರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಎಲ್ಲರಿಗೂ ಕಾನೂನು ಇದೆ. ಅವರು ಎಷ್ಟು ಜನರನ್ನು ಬೇಕಾದರೂ ಕಿತ್ತಾಕಿಸಲಿ ಎಂದು ಎ.ಪಿ. ರಂಗನಾಥ್ ಅವರಿಗೆ ಪುಟ್ಟಣ್ಣ ತಿರುಗೇಟು ನೀಡಿದರು.
ಯಾರು ಮತದಾನ ಮಾಡಬಹುದೋ ಅವರೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿ, ನಮ್ಮದೇನು ತಕರಾರಿಲ್ಲ. ನಾನು ಇಲ್ಲಿಯವರೆಗೆ ನನ್ನ 3 ಚುನಾವಣೆಯಲ್ಲಿ ಅಧಿಕಾರಿಯ ವಿರುದ್ಧ, ವಿರೋಧ ಪಕ್ಷದ ಅಭ್ಯರ್ಥಿಯ ವಿರುದ್ಧ ಒಂದೇ ಒಂದು ಪತ್ರವನ್ನು ಕೊಟ್ಟಿಲ್ಲ. ಚುನಾವಣಾ ಆಯೋಗ ಚುನಾವಣೆ ನಡೆಸಲಿದೆ. ಅದರಂತೆಯೇ ನಾವು ಚುನಾವಣೆ ಎದುರಿಸುತ್ತೇವೆ ಎಂದು ಪುಟ್ಟಣ್ಣ ಸ್ಪಷ್ಟಪಡಿಸಿದರು.
ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ