• ಹೋಂ
 • »
 • ನ್ಯೂಸ್
 • »
 • ಜಿಲ್ಲೆ
 • »
 • ಬೆಂಗಳೂರಲ್ಲಿ ರೈತರು, ಕನ್ನಡ ಹೋರಾಟಗಾರರ ಪ್ರತಿಭಟನೆ; ಕರ ಏರಿಕೆ ವಿರುದ್ಧ ಆಪ್ ಚಳವಳಿ

ಬೆಂಗಳೂರಲ್ಲಿ ರೈತರು, ಕನ್ನಡ ಹೋರಾಟಗಾರರ ಪ್ರತಿಭಟನೆ; ಕರ ಏರಿಕೆ ವಿರುದ್ಧ ಆಪ್ ಚಳವಳಿ

ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

ಕಸ ನಿರ್ವಹಣೆಗೆ ಇರುವ ಉಪಕರವನ್ನು ಬಿಬಿಎಂಪಿ ಹೆಚ್ಚಳ ಮಾಡುತ್ತಿರುವುದನ್ನು ವಿರೋಧಿಸಿ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಕರ ನಿರಾಕರಣೆ ಚಳವಳಿ ನಡೆಸಿದೆ.

 • Share this:

  ಬೆಂಗಳೂರು: ಉದ್ಯಾನ ನಗರಿಯಲ್ಲಿ ಪ್ರತಿಭಟನೆಯ ಬಿಸಿ ಮುಂದುವರಿದಿದೆ. ನಗರದ ಹೃದಯಭಾಗದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮೂರು ಪ್ರತಿಭಟನೆಗಳು ನಡೆದಿವೆ. ಕಸ ನಿರ್ವಹಣೆ ಶುಲ್ಕ ಹೆಚ್ಚಿಸಿದ ಬಿಬಿಎಂಪಿ ಕ್ರಮದ ವಿರುದ್ಧ ಆಮ್ ಆದ್ಮಿ ಪಕ್ಷ ಕರ ನಿರಾಕರಣೆ ಚಳುವಳಿ ನಡೆಸಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಆಲ್ ಇಂಡಿಯಾ ಎಂಎಸ್​ಎಸ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಗೆಯೇ, ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ತತ್​ಪರಿಣಾಮವಾಗಿ ಮೈಸೂರು ಬ್ಯಾಂಕ್ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.


  ಕಾರ್ಪೊರೇಷನ್ ಕಡೆಯಿಂದ ಮೆಜೆಸ್ಟಿಕ್ ಕಡೆ ಹೋಗುವ ರಸ್ತೆಗಳಲ್ಲಿ ನಿಂತ ವಾಹನಗಳನ್ನ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಮಾಡಿದರು. ಮೈಸೂರು ಬ್ಯಾಂಕ್ ವೃತ್ತದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೂರು ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗಿದೆ.


  ಇದನ್ನೂ ಓದಿ: ಕೆಲಸ ಸಿಗಲ್ಲ, ಭಿಕ್ಷೆಗೆ ಬಿಡಲ್ಲ, ಏನು ಮಾಡಣ? ಸಿಎಂ ಕಾಣಲು ಹಠಕ್ಕೆ ಬಿದ್ದ ದೃಷ್ಟಿಚೇತನ ಯುವತಿ


  ಆಪ್ ಪ್ರತಿಭಟನೆ ಯಾಕೆ?


  ಬೆಂಗಳೂರಿನಲ್ಲಿ ಕಸ ನಿರ್ವಹಣೆ ಜೊತೆಗೆ ಗಾರ್ಬೆಜ್ ಸೆಸ್ ಎಂದು ಉಪಕರವನ್ನು 200 ರೂನಿಂದ 600 ರೂಗೆ ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧರಿಸಿದೆ. ಇದನ್ನು ಬಲವಾಗಿ ವಿರೋಧಿಸಿರುವ ಆಮ್ ಆದ್ಮಿ ಪಕ್ಷ, ಬಿಬಿಎಂಪಿಯಿಂದ ಸಾರ್ವಜನಿಕರ ಸುಲಿಗೆ ಆಗುತ್ತಿದೆ ಎಂದು ಆರೋಪಿಸಿದೆ.

  ಗಾರ್ಬೇಜ್ ಸೆಸ್​ನ ಶುಲ್ಕ  ಹೆಚ್ಚು ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಸೆಸ್ ಅನ್ನು ಮುಂದಿನ ತಿಂಗಳಿನಿಂದ ಬೆಸ್ಕಾಮ್​ನ ಕರೆಂಟ್ ಬಿಲ್​ನಲ್ಲಿ ಸೇರಿಸಿ ಕೊಡಲಾಗುತ್ತದೆ. ಈಗಾಗಲೇ ತೆರಿಗೆಯಲ್ಲಿ ಗಾರ್ಬೇಜ್ ಸೆಸ್ ಕಟ್ಟುತ್ತಿದ್ದೇವೆ. ಈಗ ಮತ್ತೆ ಸೆಸ್ ಹಾಕಿ ಜನರನ್ನ ಲೂಟಿ ಮಾಡುತ್ತಿದ್ದಾರೆ. ಇದು ಸೆಸ್ ಬಿಲ್ಲ ಅಲ್ಲ ಭ್ರಷ್ಟಾಚಾರದ ಬಿಲ್ ಎಂದು ಕರೆಯುತ್ತೇವೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ. ಪ್ರತಿಭಟನೆಯ ಭಾಗವಾಗಿ ಆಪ್ ಪಕ್ಷ ಕರ ನಿರಾಕರಣೆ ಚಳವಳಿ ನಡೆಸಿತು.


  ಇದನ್ನೂ ಓದಿ: YSV Datta: ದೇವೇಗೌಡರು ಇರೋವರೆಗೂ ಜೆಡಿಎಸ್​ನಲ್ಲೇ ಇರುತ್ತೇನೆ; ವದಂತಿಗಳಿಗೆ ತೆರೆ ಎಳೆದ ವೈಎಸ್​ವಿ ದತ್ತ 


  ಬಂದ್ ನಿಲ್ಲಿಸುವ ಸರ್ಕಾರದ ಪ್ರಯತ್ನ ವಿಫಲ ಆಗುತ್ತದೆ: ವಾಟಾಳ್ 


  ಅನುಮತಿ ನಿರಾಕರಿಸಿದ್ದರೂ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಇಂದು ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದವು. ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕ ಬಂದ್​ಗೆ ಕನ್ನಡಿಗರು ತಯಾರಾಗಿದ್ದಾರೆ ಎಂದು ಹೇಳಿದರು.


  ಕರ್ನಾಟಕ ಬಂದ್ ಅನ್ನು ವಿಫಲಗೊಳಿಸಲು ಸರ್ಕಾರ ರಹಸ್ಯ ಪ್ರಯತ್ನ ಮಾಡುತ್ತಿದೆ. ಆದರೆ, ಬಂದ್ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸರ್ಕಾರದ ಆದೇಶವನ್ನು ಬೆಂಕಿಗೆ ಹಾಕುತ್ತೇವೆ. ಜನರು ಬಸ್ ನಿಲ್ದಾಣಕ್ಕೆ ಬರಬೇಡಿ. ಬಸ್ ಸಂಚರಿಸುವುದಿಲ್ಲ. ಸಾರಿಗೆ ನೌಕರರು ಬೆಂಬಲ ಕೊಡದಿದ್ದರೆ ನಾವು ಬಸ್ ತಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


  ವರದಿ: ಆಶಿಕ್ ಮುಲ್ಕಿ

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು