ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 664 ಕೆರೆಗಳಿದ್ದು, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ತಾಲ್ಲೂಕಿನ ಒಟ್ಟು 32 ಕೆರೆಗಳಿದ್ದು, ಹೂಳನ್ನು ಎತ್ತಲಾಗಿದೆ. ಅದೇ ರೀತಿ ಜಿಲ್ಲೆಯ ಎಲ್ಲಾ ಕೆರೆಗಳಲ್ಲೂ ಹೂಳು ಎತ್ತುವ ಕೆಲಸದ ಗುರಿ ನಿಗದಿ ಮಾಡಿ ಕೆರೆಗಳ ಮರುಪೂರಣಕ್ಕೆ ಮುಂದಾಗಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿ. ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆರೆಗಳ ಹೂಳೆತ್ತುವುದರಿಂದ ಮಳೆ ನೀರು ಶೇಖರಣೆ ಆಗಿ ಅಂತರ್ಜಾಲ ವೃದ್ದಿಗೆ ಅನುಕೂಲ ಮಾಡಿಕೊಡುತ್ತದೆ. ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆಗಿದ್ದು, ಮುಂದಿನ ದಿನಗಳಲ್ಲಿ ಕೆರೆಗಳಲ್ಲಿ ನೀರು ಶೇಖರಣೆ ಆದಷ್ಟು ಸ್ಥಳೀಯ ಗ್ರಾಮ ಪಂಚಾಯತಿಗಳಿಗೂ ಅನುಕೂಲ ಹೆಚ್ಚಲಿದೆ. ಆದಾಯ ಹೆಚ್ಚಳದ ಜೊತೆಗೆ ನೀರಿನ ಸಮಸ್ಯೆ ಕೂಡ ಬಗೆಹರಿಯಲಿದೆ ಎಂದರು.
ಕೆರೆಗಳ ಸಮಿತಿ ರಚನೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕೆರೆ ಸಂರಕ್ಷಣಾ ಸಮಿತಿ ರಚನೆ ಮಾಡುವಂತೆ ಜಿ.ಪಂ. ಸಿಇಓ ಅವರಿಗೆ ಅಧ್ಯಕ್ಷರು ತಿಳಿಸಿದರು. ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಒಂದು ಮೀನು ಮಾರಾಟ ಕೇಂದ್ರ ತೆರೆಯುವಂತೆ ಜಿ.ಪಂ. ಸದಸ್ಯರು ಒತ್ತಾಯಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಧನದಡಿಯಲ್ಲಿ ಮೀನುಗಳನ್ನು ಪಡೆದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಒಂದು ಕೆರೆಯನ್ನು ಆಯ್ಕೆ ಮಾಡಿಕೊಂಡು ಮೀನು ಸಾಕಾಣಿಕೆ ಮಾಡುವ ಮೂಲಕ ಗ್ರಾಮ ಪಂಚಾಯಿತಿಯು ಆದಾಯ ಪಡೆಯುವಂತಾಗಬೇಕು ಎಂದು ಅಧ್ಯಕ್ಷರು ತಿಳಿಸಿದರಲ್ಲದೆ, ಕ್ಯಾಟ್‌ಫಿಶ್ ಸಾಕಾಣಿಕೆ ಪ್ರಸ್ತುತ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲೂ ನಿಯಂತ್ರಣ ತಪ್ಪದಂತೆ ಕ್ರಮ ವಹಿಸಲು ತಿಳಿಸಿದರು.
ಇದನ್ನೂ ಓದಿ: COVID-19 Vaccination: ನಾಳೆ ಕೇಂದ್ರದಿಂದ ರಾಜ್ಯಕ್ಕೆ 13 ಲಕ್ಷದ 90 ಸಾವಿರ ಲಸಿಕೆ ಬರಲಿದೆ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಜಿಲ್ಲೆಯಲ್ಲಿ ಕ್ರೀಡಾಶಾಲೆಯನ್ನು ನಿರ್ಮಿಸುವಂತೆ ಜಿ.ಪಂ.ಸದಸ್ಯರು ಕೇಳಿದಾಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಾತನಾಡಿ, ದೇವನಹಳ್ಳಿ ಕ್ರೀಡಾಂಗಣದಲ್ಲಿ ಕ್ರೀಡಾ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ನಿರ್ದೇಶನದನ್ವಯ ಡಿಡಿಪಿಐ ಅವರು ಕ್ರೀಡಾ ಸಾಮಗ್ರಿಗಳ ಅವಶ್ಯವಿರುವ ಸರ್ಕಾರಿ ಶಾಲೆಗಳ ಪಟ್ಟಿ ನೀಡಿದರೆ ಕ್ರೀಡಾ ಸಾಮಗ್ರಿಗಳನ್ನು ಪೂರೈಸಲಾಗುವುದು ಎಂದು ಹೇಳಿದರು.
ಹೊಸಕೋಟೆ ತಾಲ್ಲೂಕಿನ ಕೆರೆಗಳಲ್ಲಿ ಇರುವ ಮರಗಳನ್ನು ತೆರವುಗೊಳಿಸುವ ಕಾರ್ಯ ಅರ್ಧಕ್ಕೆ ನಿಂತಿದ್ದು, ಶೀಘ್ರವೇ ಮರಗಳನ್ನು ತೆರವುಗೊಳಿಸಬೇಕು ಹಾಗೂ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಅಧ್ಯಕ್ಷರು ಸೂಚಿಸಿದರು.
ಜಿಲ್ಲೆಯಲ್ಲಿ ಹನಿ ನೀರಾವರಿ ಘಟಕಗಳ ಅಳವಡಿಕೆಗೆ 3000 ಹೆಕ್ಟೇರ್ ಗುರಿ ನಿಗದಿಪಡಿಸಲಾಗಿದ್ದು, ರೈತರಿಗೆ ಮಾಹಿತಿ ತಲುಪಲು ಜಿಲ್ಲಾದ್ಯಂತ ಪ್ರಚಾರ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ಜಿಲ್ಲೆಯ ತಾಲೂಕುಗಳಲ್ಲಿ ತಲಾ 5 ಫಲಾನುಭವಿಗಳಿಗೆ ತಳ್ಳುವ ಗಾಡಿ ಕೊಂಡುಕೊಳ್ಳಲು 15 ಸಾವಿರ ರೂಪಾಯಿ ಧನಸಹಾಯ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಗಲಾಟೆ ಪ್ರಕರಣ; ಸದನ ಸಮಿತಿಗೆ ಹೆಚ್. ವಿಶ್ವನಾಥ್ ರಾಜೀನಾಮೆ
ಜಿಲ್ಲೆಯಲ್ಲಿ ರೂ.1.51 ಕೋಟಿ ವೆಚ್ಚದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ವಸತಿ ಗೃಹವನ್ನು ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ ಮಾಡಲು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ಅನುಮೋದನೆ ನೀಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯಿಂದ ಜಿಲ್ಲೆಯಲ್ಲಿ 500 ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಲು ಅನುದಾನ ಬಳಸಲು ಸಭೆ ಅನುಮೋದನೆ ನೀಡಿತು. ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉಳಿದಿರುವ ರೂ.98 ಲಕ್ಷ ಹಣವನ್ನು ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಳಸಲು ಸಿಇಓ ಅವರು ಸೂಚನೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಉಳಿತಾಯವಾದ ರೂ. 1.23 ಕೋಟಿ ಹಣದಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಗಣಿ ಮತ್ತು ಕ್ರಷರ್ ಗಳ ವಾಹನಗಳು ತೆರಳುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಇರುವುದರಿಂದ ದ್ವಿಚಕ್ರವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಪಂ ಸಿಇಒ ಅವರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವರದಿ: ನವೀನ್ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ