ಪುತ್ತೂರು; ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ಪ್ರಯಾಣ ಇದೀಗ ಮತ್ತೆ ದುಸ್ತರವಾಗಿದೆ. ಬಿ.ಸಿ.ರೋಡ್ ನಿಂದ ಅಡ್ಡಹೊಳೆಯವರೆಗಿನ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗಿದೆ. ಹೆದ್ದಾರಿಯ ಪಾಣೆ ಮಂಗಳೂರು, ಸೂರಿಕುಮೇರು, ನೆಲ್ಯಾಡಿ, ಉದನೆ ಮೊದಲಾದ ಭಾಗದಲ್ಲಿ ಹೊಂಡಗಳೇ ರಸ್ತೆಗಳಾಗಿವೆ. ಹೆದ್ದಾರಿಯ ಗುಂಡಿ ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಹೆದ್ದಾರಿ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.
ಬಂದರು ನಗರಿ ಮಂಗಳೂರು ಹಾಗೂ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಈಗಿನ ಅವ್ಯವಸ್ಥೆ ಕೇಳುವವರಿಲ್ಲದ ಸ್ಥಿತಿಯಲ್ಲಿದೆ. ರಸ್ತೆಯಲ್ಲಿ ಹೊಂಡವಿದೆಯೋ, ಹೊಂಡದಲ್ಲಿ ರಸ್ತೆ ಇದೆಯೋ ಎನ್ನುವ ಗೊಂದಲ ಈ ಹೆದ್ದಾರಿ ನೋಡಿದ ಎಲ್ಲರಲ್ಲೂ ಮೂಡುತ್ತದೆ. ಬಿ.ಸಿ.ರೋಡ್ನಿಂದ ಅಡ್ಡಹೊಳೆ ತನಕ ಈ ರಸ್ತೆಯನ್ನು ಚತುಷ್ಪಥ ಮಾಡುವ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿತ್ತು. ಕಾಮಗಾರಿ ವಹಿಸಿಕೊಂಡ ಕಂಪನಿ ಕೆಲವು ಸಮಸ್ಯೆಗಳಿಂದಾಗಿ ಕಾಮಗಾರಿಯನ್ನು ಅರ್ಧಕ್ಕೂ ನಿಲ್ಲಿಸಿತ್ತು. ಇದರಿಂದಾಗಿ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತ ಪರಿಣಾಮ ದುರಸ್ತಿ ನಡೆಯದೆ ಹೆದ್ದಾರಿ ಇದೀಗ ಸಂಪೂರ್ಣ ಹದಗೆಟ್ಟಿದೆ.
ಬಿ.ಸಿ.ರೋಡ್ನಿಂದ ಅಡ್ಡಹೊಳೆಯವರೆಗಿನ ರಸ್ತೆಯ ತುಂಬಾ ಬೃಹತ್ ಹೊಂಡ-ಗುಂಡಿಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ಪಾಣೆಮಂಗಳೂರು, ಮೆಲ್ಕಾರ್, ಸೂರಿಕುಮೇರು, ನೆಲ್ಯಾಡಿ ಹಾಗೂ ಉದನೆ ಭಾಗದಲ್ಲಿ ಗುಂಡಿಗಳು ಹೆಚ್ಚಾಗಿದ್ದು, ವಾಹನಗಳು ರಸ್ತೆಯಲ್ಲಿ ಎದ್ದು ಬಿದ್ದು ಸಂಚರಿಸಬೇಕಾದ ಸ್ಥಿತಿಯಿದೆ. ಉದನೆ ಹಾಗೂ ಶಿರಾಡಿ ಭಾಗದಲ್ಲಿ ಸೇತುವೆಯಲ್ಲೂ ಬಿರುಕು ಬಿಟ್ಟಿದ್ದು, ಇದೇ ರೀತಿ ಮುಂದುವರಿದಲ್ಲಿ ಸೇತುವೆಗೂ ಹಾನಿಯಾಗುವ ಸಾಧ್ಯತೆಯಿದೆ.
ಉದನೆ, ಶಿರಾಡಿ ಹಾಗೂ ನೆಲ್ಯಾಡಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಹೆಚ್ಚು ಮಳೆಯಿಂದಾಗಿ ರಸ್ತೆಯು ಪ್ರತೀ ಬಾರಿಯೂ ಹದಗೆಡುತ್ತಿದೆ. ರಸ್ತೆಯನ್ನು ಗುಂಡಿ ಮುಚ್ಚುವ ಬದಲಾಗಿ ರಸ್ತೆಗೆ ಸಂಪೂರ್ಣ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿ ಈ ಹಿಂದೆಯೂ ಸಾರ್ವಜನಿಕರು ಹೆದ್ದಾರಿ ಇಲಾಖೆಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿರುವ ಬೃಹತ್ ಹೊಂಡಗಳಿಗೆ ಬೋಲ್ಡರ್ ಹಾಕಿ ಮುಚ್ಚುವ ಬದಲು ಮಣ್ಣು ಮುಚ್ಚಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.
ಇದನ್ನು ಓದಿ: ಚಿಂತಾಮಣಿಯಲ್ಲಿ 1 ಸಾವಿರ ಎಕರೆಯಲ್ಲಿ ಕೈಗಾರಿಕಾ ವಲಯ ನಿರ್ಮಾಣ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ