• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಫೂಡ್ ಡೆಲಿವರಿ ಕೆಲಸದಲ್ಲೂ ಹೆಣ್ಣಮಕ್ಕಳು ಸೈ; ಬೆಂಗಳೂರಿನ ಈ ದಿಟ್ಟ ಯುವತಿಯರಿಗೆ ಗ್ರಾಹಕರಿಂದಲೂ ಮೆಚ್ಚುಗೆ

ಫೂಡ್ ಡೆಲಿವರಿ ಕೆಲಸದಲ್ಲೂ ಹೆಣ್ಣಮಕ್ಕಳು ಸೈ; ಬೆಂಗಳೂರಿನ ಈ ದಿಟ್ಟ ಯುವತಿಯರಿಗೆ ಗ್ರಾಹಕರಿಂದಲೂ ಮೆಚ್ಚುಗೆ

ಸ್ವಿಗ್ಗಿ ಡೆಲಿವರಿ ಮಹಿಳೆಯರು

ಸ್ವಿಗ್ಗಿ ಡೆಲಿವರಿ ಮಹಿಳೆಯರು

ಇದು ಸಂಪೂರ್ಣ ಪುರುಷರ ಕ್ಷೇತ್ರ ಎಂಬ ಕಾಲ ಬಹುತೇಕ ಹೊರಟುಹೋಗಿದೆ. ಈಗ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಜೋಡಿಸಿಕೊಂಡು ಸೈ ಎನಿಸಿದ್ದಾರೆ. ಆನ್​​ಲೈನ್ ಆರ್ಡರ್ ಪಡೆದು ಮನೆ ಮನೆಗೆ ಫೂಡ್ ಡೆಲಿವರಿ ಮಾಡುವ ಕೆಲಸಕ್ಕೂ ಬೆಂಗಳೂರು ನಾರಿಯರು ಕೈಹಾಕಿದ್ದಾರೆ.

  • Share this:

ಬೆಂಗಳೂರು: ಒಂದ್ಕಡೆ ಫುಡ್ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು ದೂರು ಕೊಡ್ತಿದ್ದಾರೆ. ಆದ್ರೆ ಮತ್ತೊಂದೆಡೆ ಮಹಿಳೆಯರೇ ಮನೆ ಬಾಗಿಲಿಗೆ ಹೋಗಿ ಫುಡ್ ಡೆಲಿವರಿ ಮಾಡಿ ತಾವು ಸೇಫ್ ಆಗಿ ಇದ್ದೀವಿ ಅನ್ನೋ ಸಂದೇಶ ಸಾರುತ್ತಿದ್ದಾರೆ. ಇದು ಬೆಂಗಳೂರಿನಲ್ಲಿ ಮನೆಮನೆಗೆ ಫುಡ್ ಡೆಲಿವರಿ ಮಾಡುತ್ತಲೇ ಬದುಕು ಕಟ್ಟಿಕೊಂಡ ಹೆಣ್ಮಕ್ಕಳ ಕತೆ.


ಫೂಡ್ ಡೆಲಿವರಿ ಕ್ಷೇತ್ರಕ್ಕೆ ಧುಮುಕುತ್ತಿರುವ ಮಹಿಳೆಯರ ಪೈಕಿ ಉಮಾ ಮತ್ತು ರೋಹಿಣಿ ಎಂಬಿಬ್ಬರ ನಿದರ್ಶನ ಇಲ್ಲಿದೆ. ಇವರಿಬ್ಬರು ಮೊದಲು ಬೇರೆ ಕಡೆ ಕೆಲಸ ಮಾಡ್ತಿದ್ರು. ಒಬ್ಬರು ಆಫೀಸ್ ಸ್ಟಾಫ್ ಆಗಿ, ಮತ್ತೊಬ್ಬರು ಗಾರ್ಮೆಂಟ್ಸ್ ನಲ್ಲಿ.. ಹೀಗೆ ಮನೆ ನಡೆಸೋಕೆ ನಿರಂತರವಾಗಿ ಇಬ್ಬರೂ ದುಡಿಯುತ್ತಲೇ ಇದ್ದರು. ಆದ್ರೆ ಕೊರೊನಾ, ಲಾಕ್ ಡೌನ್ ಎಲ್ಲಾ ಸೇರಿ ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿಯುವಂತಾಯ್ತು. ಆಗ ಇವರಿಗೆ ಹೊಳೆದದ್ದೇ ಫುಡ್ ಡೆಲಿವರಿ ಕೆಲಸ. ಇಡೀ ಪ್ರಪಂಚ ವೈರಸ್​ಗೆ ಹೆದರಿ ಮನೆಯೊಳಗೆ ಕುಳಿತಾಗಲೂ ಇವರು ಬೀದಿ ಬೀದಿ ಅಲೆದು ಜನರ ಮನೆ ಬಾಗಿಲಿಗೆ ಊಟ ತಲುಪಿಸಿ ಬರುತ್ತಿದ್ದರು.


ಉಮಾ ಮತ್ತು ರೋಹಿಣಿ ಬೆಂಗಳೂರಿನ ಮೊದಲ ಮಹಿಳಾ ಫುಡ್ ಡೆಲಿವರಿ ಸಿಬ್ಬಂದಿ. ಇವರನ್ನು ನೋಡಿ ಇನ್ನೂ ಹತ್ತಾರು ಯುವತಿಯರು ಈ ಕೆಲಸಕ್ಕೆ ಸೇರಿದ್ದಾರೆ. ಮನೆ ನಡೆಸೋಕೆ ಕೆಲಸ, ಸಂಬಳ ಬೇಕು. ಇದೊಂದು ಒಳ್ಳೆ ಅವಕಾಶ ಸಿಕ್ಕಿದೆ ಎನ್ನುತ್ತಾರೆ ಈ ದಿಟ್ಟೆಯರು. ಅನೇಕ ಬಾರಿ ಡೆಲಿವರಿ ಬಾಯ್ಸ್ ಗಿಂತಲೂ ಹೆಚ್ಚು ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಸಂಸ್ಥೆ ಇವರನ್ನು ಗುರುತಿಸಿ ಪ್ರಶಂಸಿಸಿದೆ. ಇವರ ಸೇಫ್ಟಿ ವಿಚಾರದಿಂದಾಗಿ ಸಂಜೆ 7 ರವರಗೆ ಮಾತ್ರ ಇವರಿಗೆ ಕೆಲಸ ಮಾಡಲು ಅವಕಾಶವಿತ್ತು. ಆದರೆ ಈಗ ಇವರೇ ಮನವಿ ಮಾಡಿ 9 ಗಂಟೆಯವರಗೆ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ. ತಮ್ಮ ಸೇಫ್ಟಿ ಬಗ್ಗೆ ಸಂಸ್ಥೆ ಮತ್ತು ಸಹೋದ್ಯೋಗಿಗಳು ಆಸ್ಥೆ ವಹಿಸೋದು ಇವರಿಗೆ ಒಂದು ರೀತಿಯಲ್ಲಿ ಸಮಾಧಾನ ಕೊಟ್ಟಿದೆಯಂತೆ.


ಇದನ್ನೂ ಓದಿ: ಹಳದಿ ಕಲ್ಲಂಗಡಿ ಹಣ್ಣು ಸವಿದಿದ್ದೀರಾ? ಬೆಂಗಳೂರಿನ ತುಂಬಾ ಇದರದ್ದೇ ಹವಾ !


ಇಷ್ಟೆಲ್ಲಾ ಇದ್ದರೂ ಇದುವರೆಗೆ ಯಾವ ಗ್ರಾಹಕರೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಸಂತಸದಿಂದಲೇ ಹೇಳುತ್ತಾರಿವರು. ಸ್ವಿಗ್ಗಿಯ ಮಹಿಳಾ ಡೆಲಿವರಿ ಸಿಬ್ಬಂದಿಯನ್ನು ನೋಡಿ ಅನೇಕರು ಮೆಚ್ಚುಗೆಯಿಂದ ಸಿಹಿ ಕೊಡ್ತಾರೆ, ಸೆಲ್ಫಿ ಕೂಡಾ ತೆಗೆದುಕೊಳ್ತಾರಂತೆ.


ಇವರೂ ಕೂಡಾ ಒಂದರ್ಥದಲ್ಲಿ ಕೋವಿಡ್ ವಾರಿಯರ್ಸ್ ಗಳೇ. ಎಲ್ಲೆಡೆ‌ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳಿರುವಾಗ ಈ ಮಹಿಳೆಯರು ನೆಮ್ಮದಿಯಾಗಿ ತಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದಾರೆ. ತಮ್ಮ ಈ ಕೆಲಸದಿಂದ ಕುಟುಂಬ ನಿರ್ವಹಣೆಗೆ ಬಹಳ ಸಹಾಯವಾಗಿದೆ ಎನ್ನುವುದೇ ಇವರಿಗೆ ಬಹು ದೊಡ್ಡ ಹೆಮ್ಮೆ. ಆರಂಭದಲ್ಲಿ ಬಾಡಿಗೆಗೆ ಟೂ ವೀಲರ್ ಪಡೆದು ಡೆಲಿವರಿ ಕೆಲಸ ಮಾಡ್ತಿದ್ರಂತೆ. ಆದ್ರೆ ಒಳ್ಳೆ ಸಂಬಳ, ಅಲೊವೆನ್ಸ್ ಸಿಕ್ಕು ತಾವೇ ಸ್ವಂತ ವಾಹನ ಖರೀದಿಸಿದ್ದಾರೆ. ಈಗ ಬೆಳಗ್ಗೆ ಎದ್ದು ಮನೆ-ಮಕ್ಕಳ ಕೆಲಸವೆಲ್ಲಾ ಮುಗಿಸಿ ಗಾಡಿ ಏರಿ ಹೊರಟರೆ ಸಂಜೆವರೆಗೆ ನಿರಂತರ ದುಡಿಮೆ. ಅಲ್ಲದೇ ತಮ್ಮ ಮನೆಯ ಸುತ್ತಮುತ್ತಲಿನ ಏರಿಯಾದಲ್ಲೇ ಕೆಲಸ ಮಾಡೋ ಅವಕಾಶ ಸಿಗೋದ್ರಿಂದ ಅದೂ ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ ಎನ್ನುತ್ತಾರೆ ಈ ಮಹಿಳೆಯರು. ಒಟ್ಟಿನಲ್ಲಿ ಅವಕಾಶ ಒಂದು ಸಿಕ್ಕರೆ ಎಲ್ಲಾ ಕೆಲಸದಲ್ಲೂ ಭೇಷ್ ಎನಿಸಿಕೊಳ್ಳೋ ಛಾತಿ ತಮಗಿದೆ ಅನ್ನೋದು ಈ ದಿಟ್ಟೆಯರ ಅನಿಸಿಕೆ.


ವರದಿ: ಸೌಮ್ಯಾ ಕಳಸ

top videos
    First published: