ಬೆಳಗಾವಿ(ಸೆಪ್ಟೆಂಬರ್ 7): ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ಇಡೀ ರಾಜ್ಯದಲ್ಲಿ ಸುದ್ದಿಯಾಗಿತ್ತು. ಇದೀಗ ಪ್ರಕರಣ ಸುಖಾಂತ್ಯವಾಗಿದೆ. ಆದರೆ ಇದೀಗ ಬೆಳಗಾವಿಯಲ್ಲಿ ಪಕ್ಷಾತೀತವಾಗಿ ಮತ್ತೊಂದು ಬೇಡಿಕೆಯನ್ನು ಸರ್ಕಾರದ ಮುಂದೆ ಮಂಡಿಸಲಾಗಿದೆ. ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣ ಸೌಧದ ಮುಂಭಾಗದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಆಗ್ರಹವನ್ನು ಮಾಡಲಾಗಿದೆ. ಭಾನುವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಿಂದ ಖಾನಾಪುರ ತಾಲೂಕಿನ ನಂದಗಢದವರೆಗೆ ಸಂಕಲ್ಪ ಯಾತ್ರೆಯನ್ನು ನಡೆಸಲಾಯಿತು. ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್, ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಲಕ್ಕಣ ಸಂಸುದ್ಧಿ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಜನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಯ ಚನ್ನಮ್ಮ ಪ್ರತಿಮೆ, ಪೀರನವಾಡಿಯ ರಾಯಣ್ಣ ಪ್ರತಿಮೆಗೆ ಗೌರವನ್ನು ಸಲ್ಲಿಸಿದರು. ನಂತರ ರಾಯಣ್ಣನ್ನು ಗಲ್ಲಿಗೆ ಏರಿಸಿದ ನಂದಗಢಕ್ಕೆ ತೆರಳಿ ರಾಯಣ್ಣ ಸಮಾಧಿಗೆ ಗೌರವ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.
ಪೀರನವಾಡಿ ಗ್ರಾಮದ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರ ಸಂಬಂಧ ವಿವಾದ ಏರ್ಪಟ್ಟಿತ್ತು. ಜಿಲ್ಲಾಡಳಿತ ನಡೆಸಿದ ಸಂಧಾನದ ಫಲವಾಗಿ ಇಂದು ಗ್ರಾಮದಲ್ಲಿ ಎರಡು ಸಮುದಾಯದ ಜನ ಸೌಹಾರ್ದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಮಾತುಕತೆಯಂತೆ ಪೀರನವಾಡಿ ವೃತ್ತವನ್ನು ಛತ್ರಪತಿ ಶಿವಾಜಿ ವೃತ್ತಎಂದು ಈಗಾಗಲೇ ನಾಮಮಕರಣ ಸಹ ಮಾಡಲಾಗಿದೆ.
Chikkamagaluru:ಕಾಫಿನಾಡಿನ ಸೊಬಗು ನೋಡಲು ಹರಿದು ಬಂದ ಜನ; ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ
ಕ್ರಾಂತಿವೀರ ರಾಯಣ್ಣ ಪ್ರತಿಮೆ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯನ್ನು ಭಾನುವಾರ ಸನ್ಮಾನಿಸಲಾಯಿತು. ಬೆಳಗಾವಿಯ ಸರ್ಕೀಟ್ ಹೌಸ್ ನಲ್ಲಿ ಕುರುಬ ಸಮೂದಾಯದ ಮುಖಂಡರು ಪೇಠ ತೊಡಿಸಿ ಕಂಬಳಿ ಹಾಕಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಾಜೇಂದ್ರ ಸಣಕ್ಕಿ, ಲಕ್ಷ್ಮಣರಾವ್ ಚಿಂಗಳೆ, ಮಡ್ಯಪ್ಪತೋಳಿನವರ್ ಸೇರಿ ಅನೇಕರು ಹಾಜರಿದ್ದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಂಬಂಧ ರಾಜ್ಯದ ಬಹುತೇಕ ನಾಯಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಆದರೆ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿ, ಗಲ್ಲಿಗೇರಿಸಿದ ಸ್ಥಳ ನಂದಗಢದಲ್ಲಿ ಅಭಿವೃದ್ಧಿ ಕೆಲಸಗಳು ಮಾತ್ರ ಅರ್ಧಕ್ಕೆ ನಿಂತಿವೆ. ಈ ನಿಟ್ಟಿನಲ್ಲಿ ಆಡಳಿತ, ವಿರೋಧ ಪಕ್ಷಗಳ ನಾಯಕರು ಧ್ವನಿ ಎತ್ತಬೇಕು. ಕೂಡಲೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಗೊಳಿಸಿ ಕಾಮಗಾರಿ ಮುಗಿಸಬೇಕು ಎಂದು ರಾಯಣ್ಣನ ಅಭಿಮಾನಿಗಳು ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ