ಪದೇ ಪದೇ ಹೇಳಿಕೆ ನೀಡಿದ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲ್ಲ; ಠಾಕ್ರೆ ಹೇಳಿಕೆಗೆ ಡಿಕೆಶಿ, ಜಾರಕಿಹೊಳಿ ಕಿಡಿ
ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಕೂಡಲೇ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ. ಠಾಕ್ರೆ ಹೇಳಿಕೆಗೆ ಅಷ್ಟು ಮಹತ್ವ ಕೊಡೋ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಲಬುರ್ಗಿ (ಜನವರಿ 18); ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಗಡಿ ವಿಚಾರದಲ್ಲಿ ನೀಡಿರೋ ಹೇಳಿಕೆ ಕನ್ನಡಿಗರನ್ನು ಕೆರಳಿಸಿದೆ. ಕಾಂಗ್ರೆಸ್ ನಾಯಕರೂ ಠಾಕ್ರೆ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಠಾಕ್ರೆ ನೂರು ಬಾರಿ ಹೇಳಿಕೆ ನೀಡಿದ್ರೂ ಬೆಳಗಾವಿ ಮಾತ್ರ ನಮ್ಮದೇ ಆಗಿರುತ್ತದೆಯೇ ಹೊರತು, ಮಹಾರಷ್ಟ್ರಕ್ಕೆ ಸೇರಲ್ಲ. ಠಾಕ್ರೆ ಹೇಳಿಕೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳೋ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, "ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯೋದು ಸರಿಯಲ್ಲ. ನೆಲ, ಜಲ ವಿಷಯದಲ್ಲಿ ಈಗಾಗಲೆ ಇತ್ಯರ್ಥವಾಗಿದೆ. ಮಹಾಜನ್ ವರದಿಯೇ ಅಂತಿಮ. ಮುಖ್ಯಮಂತ್ರಿ ಸ್ಥಾನದಲ್ಲಿರೋ ವ್ಯಕ್ತಿ ಈ ರೀತಿ ಹೇಳಿಕೆ ನೀಡಬಾರದು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವಸೇನೆ ಬೆಂಬಲಿಸಿದೆ. ಆದರೆ ಸಿಎಂ ಹೇಳಿಕೆ ಅವರ ವೈಯಕ್ತಿಕವಾಗಿದ್ದು, ಅದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡೋ ಅವಶ್ಯಕತೆಯಿಲ್ಲ. ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ಭಾಗ ನಮ್ಮದು ಎನ್ನಲು ಈಗಾಗಲೇ ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿದ್ದೇವೆ. ಠಾಕ್ರೆ ಹೇಳಿಕೆಗೆ ಅಷ್ಟೋಂದು ಮಹತ್ವ ಕೊಡೋ ಅವಶ್ಯಕತೆಯಿಲ್ಲ" ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
"ಉದ್ಧವ್ ಠಾಕ್ರೆ ಹೇಳಿಕೆ ನೀಡಿದ ಕೂಡಲೇ ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ. ಠಾಕ್ರೆ ಹೇಳಿಕೆಗೆ ಅಷ್ಟು ಮಹತ್ವ ಕೊಡೋ ಅವಶ್ಯಕತೆ ಇಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಅವರು, "ಉದ್ದವ್ ಠಾಕ್ರೆ ಹೇಳಿಕೆಯನ್ನು ಗಂಭಿರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ಹಿಂದೆ ಕೂಡಾ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಹಿಂದೆ ಬಿಜೆಪಿ ಜೊತೆ ಇದ್ದಾಗ ಕೂಡಾ ಅನೇಕ ರೀತಿ ಹೇಳಿದ್ದಾರೆ. ನಮ್ಮ ಪಕ್ಷದ ವತಿಯಿಂದ ಯಾವುದೇ ಮೃದು ಧೋರಣೆ ತೋರಿಸೋದಿಲ್ಲ.
ಗಡಿ ವಿಚಾರ ಮುಗಿದ ಅಧ್ಯಾಯ. ಬೆಳಗಾವಿ ನಮ್ಮದೆಂದು ಅವರು ಹತ್ತು ಬಾರಿ ಹೇಳಿದ್ದರೆ, ನಾವು ನೂರು ಬಾರಿ ಹೇಳಿದ್ದೇವೆ. ಪದೇ ಪದೇ ಠಾಕ್ರೆ ಕ್ಯಾತೆ ತೆಗೆಯೋದು ಸರಿಯಲ್ಲ. ಹಾಗೆ ಹೇಳಿಕೆ ನೀಡಿದ ಕೂಡಲೇ ಬೆಳಗಾವಿ ಮತ್ತಿತರ ಪ್ರದೇಶ ಮಹಾರಾಷ್ಟ್ರಕ್ಕೆ ಸೇರುತ್ತೇ ಅನ್ನೋದು ಭ್ರಮೆ" ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ವಿಚಾರದ ಬಗ್ಗೆಯೂ ಮಾತನಾಡಿರುವ ಡಿ.ಕೆ. ಶಿವಕುಮಾರ್, "ನನ್ನ ಬಳಿ ಯಾವ ಸಿಡಿ ಇದೆ? ಇದರ ಬಗ್ಗೆ ನನಗೆ ಸಾಕಷ್ಟು ವಿಚಾರಗಳು ಗೊತ್ತು. ಆದರೂ ಸದ್ಯಕ್ಕೆ ಪ್ರತಿಕ್ರಿಯೆ ನೀಡೋಲ್ಲ. ಎಲ್ಲದನ್ನೂ ಅಧಿವೇಷನದಲ್ಲಿ ಮಾತನಾಡುತ್ತೇನೆ" ಎಂದಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ