ಬೆಳಗಾವಿ (ನವೆಂಬರ್ 15); ಬೆಳಗಾವಿ ಪ್ರವಾಹ ಸಂತ್ರಸ್ತರ ಬದುಕು ಇನ್ನೂ ಬೀದಿಯಲ್ಲಿ ಇದ್ದು, ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. 2019, 2020ರಲ್ಲಿ ಉಂಟಾದ ಪ್ರಹಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಸಂಭವಿಸಿದೆ. 4 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತರು ಮುಂಬರುವ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
2019ರಲ್ಲಿ ಬೆಳಗಾವಿ ಜಿಲ್ಲೆಯ ಘಟಪ್ರಭಾ, ಮಲಪ್ರಭಾ, ಕೃಷ್ಣ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ ಹಾಯ ಮಾರ್ಕಂಡೇಯ ನದಿಗಳಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಸಾವಿರಾರು ಮನೆಗಳು ಹಾನಿಯಾಗಿದ್ದು, ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಆದರೆ ಇನ್ನೂ ಸರ್ಕಾರ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುವಲ್ಲಿ ವಿಫಲವಾಗಿದೆ. ಅನೇಕರು ದೇವಸ್ಥಾನ, ಸಮುದಾಯ ಭವನದಲ್ಲಿ ಜೀವನ ನಡೆಸುತ್ತಿದ್ದಾರೆ.
ರಾಮದುರ್ಗ ತಾಲೂಕಿನ ಪ್ರವಾಹ ಸಂತ್ರಸ್ತರು ಎರಡು ತಿಂಗಳ ಹಿಂದೆ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ರಮೇಶ ಜಾರಕಿಹೊಳಿ 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ್ದರು. ಬಿದ್ದು ಹೋಗಿರುವ ಮನೆಗಳನ್ನು ರಾಜೀವ ಗಾಂಧಿ ವಸತಿ ಯೋಜನೆ ಸೇರಿಸಿ ಸೂಕ್ತ ಪರಿಹಾರದ ಭರವಸೆ ನೀಡಿದ್ದರು. ಆದರೆ ಇನ್ನೂ ಬೇಡಿಕೆ ಈಡೇರಿಲ್ಲ, ಸದ್ಯ ಸೈಟ್ ಓಪನ್ ಆಗಿದ್ದು, ಕೇವಲ 2020ರಲ್ಲಿ ಆಗಿರೋ ಮನೆ ಹಾನಿಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಇದರಿಂದ 2019ರ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂದು ನೊಂದವರ ಅಳಲು.
ಇದನ್ನು ಓದಿ: ಬಂಗಾಳದ ಹೆಸರಾಂತ ಹಿರಿಯ ನಟ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಸೌಮಿತ್ರ ಚಟರ್ಜಿ ನಿಧನ
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರಾಮದುರ್ಗದ ಪ್ರವಾಹ ಸಂತ್ರಸ್ತರು ಧರಣಿ ನಡೆಸಿದರು. ತಮ್ಮ ಬೇಡಿಕೆ ಶೀಘ್ರದಲ್ಲೇ ಈಡೇರಿಸಬೇಕು ಎಂದು ಆಗ್ರಹ ಮಾಡಿದ್ರು. ಇಲ್ಲವಾದಲ್ಲಿ ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ಸಂತ್ರಸ್ತರ ವೇದಿಕೆ ಅಧ್ಯಕ್ಷ ಚನ್ನಬಸವರಾಜ್ ಕುಲಕರ್ಣಿ ನೀಡಿದ್ದಾರೆ.
ರಾಮದುರ್ಗದಲ್ಲಿ ಸಂತ್ರಸ್ತರು ಇನ್ನೂ ಬೀದಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಬಿದ್ದ ಮನೆಗೆ ಪರಿಹಾರ ಇಲ್ಲ. ಎರಡು ವರ್ಷಗಳಿಂದ ಬೆಳೆ ಹಾನಿಯಾಗಿದೆ, ಕೂಲಿ ಕೆಲಸವೂ ಇಲ್ಲದಾಗಿದೆ. ಲಾಕ್ ಡೌನ್ ನಿಂದ ಜೀವನ ನಡೆಸುವುದು ಕಷ್ಟವಾಗಿದೆ. ಸರ್ಕಾರ ಸಂತ್ರಸ್ತರ ಬೇಡಿಕೆಕ್ಕೆ ತಕ್ಷಣ ಸ್ಪಂದಿಸಬೇಕು ಎಂದು ಸಂತ್ರಸ್ತ ಮಹಿಳೆ ಹನುಮವ್ವ ಕಟ್ಟಿಮನಿ ಕಣ್ಣಿರು ಹಾಕುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ