ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಯಾರು? ಕುತೂಹಲಕ್ಕೆ ಇಂದು ತೆರೆ

ಬೆಳಗಾವಿಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲು ಬಿಜೆಪಿಯ ಮೂರು ಮಂದಿ ಮುಖಂಡರು ನಿನ್ನೆ ಒಮ್ಮತಕ್ಕೆ ಬರಲು ವಿಫಲರಾಗಿದ್ದರು. ಇವತ್ತು ಅಧ್ಯಕ್ಷರ ಆಯ್ಕೆಯಾಗುವ ಸಾಧ್ಯತೆ ಇದೆ.

ಡಿಸಿಎಂ ಲಕ್ಷ್ಮಣ ಸವದಿ

ಡಿಸಿಎಂ ಲಕ್ಷ್ಮಣ ಸವದಿ

  • Share this:
ಬೆಳಗಾವಿ: ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಯಾರು ಎಂಬ ಕುತೂಹಲ ಹಾಗೇ ಉಳಿದಿದೆ. ಇಂದು ಶನಿವಾರ ಬೆಳಗ್ಗೆ 11ಕ್ಕೆ ನಾಯಕರು ‌ಮತ್ತೊಮ್ಮೆ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡಲಿದ್ದಾರೆ. ನಿನ್ನೆ ಶುಕ್ರವಾರ ಸರ್ಕಿಟ್ ಹೌಸ್​ನಲ್ಲಿ ನಡೆದ ಪ್ರಮುಖ ನಾಯಕರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಮಾಡಲು ತೀರ್ಮಾನ ಮಾಡಲಾಯಿತು. ಆದರೆ, ಯಾರು ಎಂಬುದು ಮಾತ್ರ ಇವತ್ತು ಹನ್ನೊಂದು ಗಂಟೆಯವರೆಗೆ ಕುತೂಹಲ ಇರಲಿದೆ.

ಬೆಳಗಾವಿ ಸರ್ಕಿಟ್ ಹೌಸ್​ನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ‌, ಸಂಸದರಾದ ಅಣ್ಣಾಸಾಬ್ ಜೊಲ್ಲೆ, ಈರಣ್ಣ ಕಡಾಡಿ ಭಾಗಿಯಾಗಿದ್ದರು. 2 ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಅನೇಕ‌ ವಿಚಾರಗಳ ಚರ್ಚೆ ನಡೆಯಿತು. ತಮ್ಮತಮ್ಮ ಆಪ್ತರು, ಬಣಗಳ ಮುಖಂಡರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೊಡಿಸಲು ಮೂರು ಜನ ನಾಯಕರು ಯತ್ನ ನಡೆಸಿದ್ದಾರೆ

16 ಜನ ನಿರ್ದೇಶಕ ಬಲವನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ಹೊಂದಿದೆ. ಬಿಜೆಪಿ ವರಿಷ್ಠರು, ಆರ್ ಎಸ್ ಎಸ್ ನಾಯಕರ ಸೂಚನೆ ಹಿನ್ನೆಲೆ ಈ ಸಲ ಅವಿರೋಧ ನಡೆಸಲು ತೀರ್ಮಾನ ಮಾಡಲಾಗಿತ್ತು. ಈ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು 3 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಿರ್ದೇಶಕರ ಅವಿರೋಧ ಆಯ್ಕೆ ಸಂದರ್ಭದಲ್ಲಿ ನಾಯಕರ ನಡುವಿನ ಒಗ್ಗಟ್ಟು ಈಗ ಉಳಿದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕ; ಸಿಟಿ ರವಿಗೆ ಮೂರು ರಾಜ್ಯಗಳ ಹೊಣೆ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್, ಸಚಿವ ಸ್ಥಾನವನ್ನು ವಂಚಿತವಾಗಿರುವ ಕತ್ತಿ ಕುಟುಂಬಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕು ಎಂಬ ತೀರ್ಮಾನ ಹಿಂದೆ ಆಗಿತ್ತು.‌ ಆದರೆ ಬೇರೆ ಬೇರೆ ಕಾರಣ‌ ಮುಂದಿಟ್ಟು ಈಗ ನಾಯಕರು ರಮೇಶ‌ ಕತ್ತಿಗೆ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ನಿನ್ನೆ ‌ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಅವಿರೋಧ ಆಯ್ಕೆ ಆಗೋದು ಶತಃಸಿದ್ಧ.‌ ಅಧ್ಯಕ್ಷ ಯಾರು ಎಂಬುದನ್ನು ನಾಳೆ (ಶನಿವಾರ) ಹೇಳುತ್ತೇವೆ. ಬ್ರಹ್ಮ, ವಿಷ್ಣು, ಮಹೇಶ್ವರ ಇಲ್ಲಿ ಇದ್ದರೂ, ಸೂರ್ಯ, ಚಂದ್ರ‌ ಹಾಗೂ ಅಗ್ನಿ ದೇವರ ಅನುಮತಿ ಬೇಕು ಅಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.

ಮಾಜಿ ಸಚಿವ ಉಮೇಶ ಕತ್ತಿ ನಿನ್ನೆ ಸಭೆ ಬಳಿಕ ‌ಮಾತನಾಡಿ, ನಮ್ಮಲ್ಲಿ‌ ಯಾವುದೇ ಗೊಂದಲ ಇಲ್ಲ. ನಾಳೆ ಎಲ್ಲರೂ ಒಗ್ಗಟ್ಟಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ಈ ಸಲದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಈಗ ಸಚಿವ ಸ್ಥಾನ‌ ಸಿಕ್ಕರೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: