ಬಸವಣ್ಣನ ಬಗ್ಗೆ ಅರುಣ್ ಸಿಂಗ್ ತಿಳಿದುಕೊಳ್ಳಲಿ ಎಂದ ಜಾರಕಿಹೊಳಿ; ಮಂಗಲಾ ಅನನುಭವಿ ಎಂದ ಸಿದ್ದರಾಮಯ್ಯಗೆ ಬಿಜೆಪಿಗರ ಕಿಡಿ
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಭಾರತೀಯ ಇತಿಹಾಸ ಗೊತ್ತಿಲ್ಲ. ಮೌಢ್ಯದ ವಿರುದ್ಧ ಹೋರಾಟ ಆರಂಭವಾಗಿದ್ದು ಆರನೇ ಶತಮಾನದಿಂದಲೇ. ಅವರೇನಾದರೂ ಕೇಳಬೇಕಾದ್ರೆ ಅಂಬೇಡ್ಕರ್, ಬಸವಣ್ಣರನ್ನು ಕೇಳಬೇಕು ಎಂದು ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದರು.
ಡಿಕೆ ಶಿವಕುಮಾರ್, ರಂದೀಪ್ ಸುರ್ಜೆವಾಲ ಮತ್ತು ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ಕಣದಲ್ಲಿ ಇಂದು ಪ್ರಚಾರಕ್ಕಿಂತ ಹೆಚ್ಚು ಸದ್ದು ಮಾಡಿದ್ದು ನಾಯಕರ ಆರೋಪ, ಪ್ರತ್ಯಾರೋಪ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ತಮ್ಮ ಮಾತಿನ ಮೂಲಕವೇ ಟಾಂಟ್ ಕೊಟ್ಟರು. ಇನ್ನು, ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅನನುಭವಿ ರಾಜಕಾರಣಿ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಉಪಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನವಾಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ ಸರ್ಜೆವಾಲಾ ಹೊಸ ಬಾಂಬ್ ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರು. ಇದಕ್ಕೆ ತಿರುಗೇಟ ಕೊಟ್ಟ ಸತೀಶ್ ಜಾರಕಿಹೊಳಿ, ಸಿಂಗ್ ಅವರಿಗೆ ಭಾರತೀಯ ಇತಿಹಾಸ ಗೊತ್ತಿಲ್ಲ. ಮೌಢ್ಯದ ವಿರುದ್ಧ ಹೋರಾಟ ಆರಂಭವಾಗಿದ್ದು ಆರನೇ ಶತಮಾನದಿಂದಲೇ. ಅವರೇನಾದರೂ ಕೇಳಬೇಕಾದ್ರೆ ಅಂಬೇಡ್ಕರ್, ಬಸವಣ್ಣರನ್ನು ಕೇಳಬೇಕು ಎಂದು ಕಿವಿಮಾತು ಹೇಳಿದರು.
ಜನರ ಜಾಗೃತಿಗಾಗಿ ಮೂಢನಂಬಿಕೆ ವಿರುದ್ಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದು ಯಾವುದೇ ಧರ್ಮ, ಜಾತಿಯ ವಿರುದ್ಧ ಕಾರ್ಯಕ್ರಮ ಅಲ್ಲ ಎಂದು ಹೇಳಿದ ಸತೀಶ್ ಜಾರಕಿಹೊಳಿ, ತಾನು ಗೆದ್ದರೆ ಕೋಮುಗಲಭೆ ಹೆಚ್ಚಾಗಲಿದ ಎಂಬ ಯತ್ನಾಳ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೋಮುಗಲಭೆ ಮಾಡಿಸೋದು ಬಿಜೆಪಿಯವರೇ ಎಂದು ತಿರುಗೇಟು ನೀಡಿದರು.
ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅನನುಭವಿ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಇದೇ ವೇಳೆ ಬಿಜೆಪಿ ನಾಯಕರೂ ತಿರುಗೇಟು ನೀಡಿದರು. ಸಿದ್ದರಾಮಯ್ಯಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲ. ರಾಜೀವ ಗಾಂಧಿಯನ್ನು ಪ್ರೀತಿಸಿ ಮದುವೆಯಾದ ಒಂದೇ ಕಾರಣಕ್ಕೆ ಸೋನಿಯಾ ಗಾಂಧಿಗೆ ಕಾಂಗ್ರೆಸ್ ಪಾರ್ಟಿ ನಡೆಸಲು ಸಾಧ್ಯವಾಗುತ್ತದೆ. ಸೋನಿಯಾ ಗಾಂಧಿ ಮಗ ಎನ್ನುವ ಒಂದೇ ಕಾರಣಕ್ಕೆ ರಾಹುಲ್ ಇದು ಸಾಧ್ಯವಾಗುತ್ತದೆ. ಆದರೆ ಹಲವು ಶಿಕ್ಷಣ ಸಂಸ್ಥೆಗಳನ್ನು ನಿಭಾಯಿಸಿದ ಅನುಭವ ಇರೋ ಮಂಗಲಾ ಅಂಗಡಿಗೆ ಯಾಕೆ ಸಾಧ್ಯವಾಗಲ್ಲ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದರು. ಉಪಚುನಾವಣೆ ಫಲಿತಾಂಶದ ಬಳಿಕ ಹೆಚ್ಚು ದಿನ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಉಳಿಯಲ್ಲ ಎಂದು ಕಟೀಲ್ ಆರೋಪ ಮಾಡಿದರು.
ಸಿದ್ದರಾಮಯ್ಯ ಅವರು ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರ ಕ್ಷಮೆ ಕೇಳಬೇಕು ಎಂದು ಇದೇ ವೇಳೆ ಸಚಿವ ಜಗದೀಶ ಶೆಟ್ಟರ್ ಆಗ್ರಹಿಸಿದರು. ಕಿತ್ತೂರು ರಾಣಿ ಚನ್ನಮ್ಮನವರ ನಾಡಿಯಲ್ಲಿ ಮಹಿಳೆಯರಿಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಮೂರು ಸಲ ವಿಧಾನಸಭೆಗೆ ಹಾಗೂ ಎರಡು ಸಲ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದಾಗ ಸದನದಲ್ಲಿ ಎಷ್ಟು ಸಲ ಮಾತನಾಡಿದ್ದಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಫಲಿತಾಂಶ ಸರ್ಕಾರದ ಪತನಕ್ಕೆ ಮುನ್ನುಡಿಯಾಗಲಿದೆ ಎಂದರು. ಆಪರೇಷನ್ ಕಮಲದಿಂದ ರಚನೆಯಾಗಿರೋ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ತನ್ನ ತಪ್ಪಿನಿಂದಲೇ ಸರ್ಕಾರ ಪತನವಾಗಲಿದೆ ಎಂದು ಸಿಂಗ್ ಭವಿಷ್ಯ ನುಡಿದರು.
ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ