• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬನ್ನೇರುಘಟ್ಟ ಪಾರ್ಕ್​ನಿಂದ ಪರಾರಿಯಾಗಿದ್ದ ಕರಡಿ ಸೆರೆ; ಸಾರ್ವಜನಿಕರಲ್ಲಿ ದೂರವಾಗದ ಆತಂಕ

ಬನ್ನೇರುಘಟ್ಟ ಪಾರ್ಕ್​ನಿಂದ ಪರಾರಿಯಾಗಿದ್ದ ಕರಡಿ ಸೆರೆ; ಸಾರ್ವಜನಿಕರಲ್ಲಿ ದೂರವಾಗದ ಆತಂಕ

ಸೆರೆ ಸಿಕ್ಕಿರುವ ಕರಡಿ

ಸೆರೆ ಸಿಕ್ಕಿರುವ ಕರಡಿ

ಕರಡಿ ಸೆರೆ ಸಿಕ್ಕರು ಸಾರ್ವಜನಿಕರಲ್ಲಿ ಗೊಂದಲ ಮುಂದುವರಿದಿದೆ.  ಸೆರೆ ಸಿಕ್ಕಿರುವುದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ತುಮಕೂರು ಕರಡಿನಾ ಅಥವಾ ಬೇರೆ ಕರಡಿನಾ ಎಂಬುದು ಇದೀಗ ಅಧಿಕಾರಿಗಳಲ್ಲಿಯು ಅನುಮಾನವಿದ್ದು, ವೈಜ್ಞಾನಿಕ ವರದಿ ಬಂದ ಬಳಿಕ ಸೆರೆ ಸಿಕ್ಕಿರುವುದು ತುಮಕೂರು ಕರಡಿಯಾದರೆ ರೆಸ್ಕ್ಯೂ ಸೆಂಟರ್​ನಲ್ಲಿ ಪೋಷಣೆ ಮಾಡಲಾಗುತ್ತದೆ. ಇಲ್ಲವಾದರೆ ಕಾಡಿಗೆ ಬಿಡಲಾಗುತ್ತದೆ.

ಮುಂದೆ ಓದಿ ...
  • Share this:

ಆನೇಕಲ್ : ಕಳೆದ ತಿಂಗಳು 28ನೇ ತಾರೀಖು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಸೆರೆಯಾಗಿದೆ. ಇಂದು ಬೆಳಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಉದ್ಯಾನವನ ವ್ಯಾಪ್ತಿಯ ಹುಚ್ಚನಕುಂಟೆ ಬಳಿ ಇರಿಸಿದ್ದ ಬೋನಿಗೆ ಕರಡಿ ಬಿದ್ದಿದೆ. ಸದ್ಯ ಕರಡಿಯನ್ನು ಉದ್ಯಾನವನದ ರೆಸ್ಕ್ಯೂ ಸೆಂಟರ್​ನ ಕೇಜ್​ನಲ್ಲಿ ಇಟ್ಟು ಹಾರೈಕೆ ಮಾಡಲಾಗುತ್ತಿದ್ದು, ಕರಡಿ ಆರೋಗ್ಯವಾಗಿದೆ.


ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ಕೊನೆಗೂ ಬಂಧಿಯಾಗಿದೆ. ಕಳೆದ ತಿಂಗಳು 28ನೇ ತಾರೀಖು ತುಮಕೂರಿನಿಂದ ರಕ್ಷಣೆ ಮಾಡಿ ಇಲ್ಲಿಗೆ ತರಲಾಗಿದ್ದ ಕರಡಿ ಬೋನ್ ನಿಂದ ಕೇಜ್​ಗೆ ಶಿಫ್ಟ್ ಮಾಡುವ ವೇಳೆ ಉದ್ಯಾನವನದ ಸಹಾಯಕ ನಿರ್ದೇಶಕರ ಜೀಪ್ ಚಾಲಕ ಜಯಶಂಕರ್ ಮೇಲೆ ದಾಳಿ ಮಾಡಿ ಸಮೀಪದ ಕಾಡಿಗೆ ಪರಾರಿಯಾಗಿತ್ತು. ಉದ್ಯಾನವನದ ಸಿಬ್ಬಂದಿ ಶೋಧ ನಡೆಸಿದ್ದರೂ ಕರಡಿ ಪತ್ತೆಯಾಗಿರಲಿಲ್ಲ. ಎರಡು ದಿನದ ಬಳಿಕ ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ಕಾರ್ಖಾನೆಯೊಂದರ  ಸೆಕ್ಯೂರಿಟಿ ಗಾರ್ಡ್ ಮೇಲೆ ದಾಳಿ ನಡೆಸಿತ್ತು. ಬಳಿಕ ಅದೇ ದಿನ ಚಂದಾಪುರ ಬಳಿ‌ ಮುಂಜಾನೆ ಕಾಣಿಸಿಕೊಂಡಿದ್ದ ಕರಡಿ ಸಮೀಪದ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಾಲ್ವರ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು. ಅರಣ್ಯ ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದ್ದರು ಪತ್ತೆಯಾಗಿರಲಿಲ್ಲ. ಪುನಃ ಎರಡು ದಿನದ ಬಳಿಕ ಎಲೆಕ್ಟ್ರಾನಿಕ್ ಸಿಟಿ ಸಮೀಪ ಬೇಗೂರಿನ ವಿಶ್ವ ಪ್ರಿಯ ಬಡಾವಣೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆಸಿ ಮಾಯವಾಗಿತ್ತು. ಕಳೆದ ಮೂರು ದಿನಗಳಿಂದ ಜಿಗಣಿ ಸಮೀಪದ ಹುಲ್ಲಹಳ್ಳಿ, ಬನ್ನೇರುಘಟ್ಟ ಸಮೀಪದ ಬೇಗಿಹಳ್ಳಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭೀತಿ ಮೂಡಿಸಿತ್ತು. ಆದ್ರೆ ಇಂದು ಬೆಳಗ್ಗೆ ಕರಡಿ ತಪ್ಪಿಸಿಕೊಂಡಿದ್ದ ರೆಸ್ಕ್ಯೂ ಸೆಂಟರ್​ನಿಂದ ಒಂದು ಕಿ.ಮೀ. ದೂರದಲ್ಲಿ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.


ಇನ್ನೂ ಕರಡಿ ತಪ್ಪಿಸಿಕೊಂಡಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್ ಸಮೀಪದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಕರಡಿ ಸೆರೆಯಾಗಿದ್ದು, ಸದ್ಯ ರೆಸ್ಕ್ಯೂ ಸೆಂಟರ್​ನಲ್ಲಿ ಇರಿಸಲಾಗಿದೆ. ಆದ್ರೆ ಸೆರೆ ಸಿಕ್ಕಿರುವ ಕರಡಿ ತುಮಕೂರಿನಿಂದ ಇಲ್ಲಿಗೆ ತರಲಾಗಿದ್ದ ಕರಡಿಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಿದೆ. ಹಾಗಾಗಿ ಹೆಚ್ಚು ಮಾನವ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕ ಕೇಜ್​ ನಲ್ಲಿರಿಸಿ ಹಾರೈಕೆ ಮಾಡಲಾಗುತ್ತಿದೆ. ಈಗಾಗಲೇ ತುಮಕೂರು ಅರಣ್ಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಸದ್ಯ ಸೆರೆ ಸಿಕ್ಕಿರುವ ಕರಡಿಯ ಕೂದಲು ಮತ್ತು ಇತರೆ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಹೈದರಾಬಾದ್ ನ ಲ್ಯಾಬ್​ಗೆ ಕಳುಹಿಸಲಾಗುವುದು. ಅಲ್ಲಿನ ತಜ್ಞರು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಕರಡಿ ಯಾವುದು ಎಂಬುದನ್ನು ತಿಳಿಸಲಿದ್ದಾರೆ. ಇನ್ನೂ ಕರಡಿ ಹಳ್ಳಿಗಳತ್ತ ಬರಲು, ಹಲವು ಕಾರಣಗಳಿವೆ. ಸಾಮಾನ್ಯವಾಗಿ ಕರಡಿಗಳು ಹಳ್ಳಿಗಳು, ರೆಸಾರ್ಟ್ ಮತ್ತು ನಗರದ ಗಾರ್ಬೆಜ್ ಸುರಿಯುವ ಕಡೆ ಬರುತ್ತವೆ. ಅಲ್ಲಿ ಎಸೆದು ಹೋಗಿರುವ ಆಹಾರಕ್ಕಾಗಿ ಬರುತ್ತದೆ. ಅದರಲ್ಲು ರಾತ್ರಿ ವೇಳೆ ಕರಡಿಗಳು ಹೆಚ್ಚು ಬರುತ್ತವೆ. ಇಂತಹ ಸನ್ನಿವೇಶದಲ್ಲಿ ಕರಡಿಗಳನ್ನು ಅನಗತ್ಯವಾಗಿ ಕೆಣಕಲು ಹೋಗಬಾರದು. ತನ್ನ ಪಾಡಿಗೆ ಅವುಗಳನ್ನು ಬಿಟ್ಟರೆ ಮರಳಿ ಕಾಡಿಗೆ ಹೊರಟು ಹೋಗುತ್ತವೆ. ಜೊತೆಗೆ ರೆಸಾರ್ಟ್ಗಳಲ್ಲಿ ತಿಂದು ಉಳಿದ ಆಹಾರವನ್ನು ಹೊರಗಡೆ ಎಸೆಯಬಾರದು ನಗರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದನ್ನು‌ ನಿಲ್ಲಿಸಿದರೆ ಕರಡಿಗಳು ಸಹ ಹಳ್ಳಿಗಳತ್ತ ಬರುವುದಿಲ್ಲ. ಒಂದು ವೇಳೆ ಕಂಡಲ್ಲಿ ಕೆಣಕುವ ಬದಲು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.


ಇದನ್ನು ಓದಿ: ಮದುವೆ ಆಮಂತ್ರಣ ಪತ್ರಿಕೆ ಮೇಲೆ ಹುಟ್ಟಿದ ವರ್ಷ ಕಡ್ಡಾಯ; ಬಾಲ್ಯವಿವಾಹ ತಡೆಗೆ ರಾಜಸ್ಥಾನ ಸರ್ಕಾರದ ಮಾಸ್ಟರ್ ಪ್ಲಾನ್


ಇನ್ನೂ ಕರಡಿ ಸೆರೆಯಾಗಿದ್ದರು ಸಾರ್ವಜನಿಕರಲ್ಲಿ ಮಾತ್ರ ಆತಂಕ ದೂರವಾಗಿಲ್ಲ. ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಬನ್ನೇರುಘಟ್ಟ ಅರಣ್ಯಕ್ಕೆ ಸಮೀಪದ ಬೇಗಿಹಳ್ಳಿ ಗ್ರಾಮದ ಬಳಿ ಕರಡಿ ಕಾಣಿಸಿಕೊಂಡಿದೆ. ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಕರಡಿಗಾಗಿ ತಡರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಆದ್ರೆ ಇಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಳಿ ಕರಡಿ ಸೆರೆಯಾಗಿದೆ ಎನ್ನುತ್ತಿದ್ದಾರೆ. ಹಳ್ಳಿಗಳ ಕಾಣಿಸಿಕೊಳ್ಳುತ್ತಿರುವ ಕರಡಿ ಬೇರೆ ಇರಬೇಕು. ನಿತ್ಯ ಕರಡಿ ಹಳ್ಳಿ ಆಹಾರಕ್ಕಾಗಿ ಬರುತ್ತಿದೆ. ಹಾಗಾಗಿ ಅರಣ್ಯ ಅಧಿಕಾರಿಗಳು ಇಂದು ಸಹ ಕರಡಿಗಾಗಿ ಶೋಧ ನಡೆಸಿ ಕರಡಿಯನ್ನು ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರಾದ ಬಾಬು ಒತ್ತಾಯಿಸಿದ್ದಾರೆ.


ಒಟ್ಟಿನಲ್ಲಿ ಕರಡಿ ಸೆರೆ ಸಿಕ್ಕರು ಸಾರ್ವಜನಿಕರಲ್ಲಿ ಗೊಂದಲ ಮುಂದುವರಿದಿದೆ.  ಸೆರೆ ಸಿಕ್ಕಿರುವುದು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ತುಮಕೂರು ಕರಡಿನಾ ಅಥವಾ ಬೇರೆ ಕರಡಿನಾ ಎಂಬುದು ಇದೀಗ ಅಧಿಕಾರಿಗಳಲ್ಲಿಯು ಅನುಮಾನವಿದ್ದು, ವೈಜ್ಞಾನಿಕ ವರದಿ ಬಂದ ಬಳಿಕ ಸೆರೆ ಸಿಕ್ಕಿರುವುದು ತುಮಕೂರು ಕರಡಿಯಾದರೆ ರೆಸ್ಕ್ಯೂ ಸೆಂಟರ್​ನಲ್ಲಿ ಪೋಷಣೆ ಮಾಡಲಾಗುತ್ತದೆ. ಇಲ್ಲವಾದರೆ ಕಾಡಿಗೆ ಬಿಡಲಾಗುತ್ತದೆ. ಪುನಃ ಪರಾರಿಯಾಗಿದ್ದ ಕರಡಿಗೆ ಶೋಧ ಮುಂದುವರಿಸಬೇಕಾಗುತ್ತದೆ. ಸದ್ಯ ಕರಡಿ ಸಿಕ್ಕರು ಯಾವ ಕರಡಿ ಎಂಬುವ ಗೊಂದಲ ಮಾತ್ರ ದೂರವಾಗಿಲ್ಲ.


ವರದಿ : ಆದೂರು ಚಂದ್ರು

Published by:HR Ramesh
First published: