ಚನ್ನಪಟ್ಟಣ ನಗರದಲ್ಲಿ ಕರಡಿ ದಾಳಿ; ಮಹಿಳೆ ಸ್ಥಿತಿ ಗಂಭೀರ; ಕರಡಿ ಕಿಡ್ನಾಪ್ ಎಫೆಕ್ಟಾ?

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಗಾಯಾಳುವಿನ ಕುಟುಂಬಸ್ಥರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಚಿಕಿತ್ಸೆಯ ವೆಚ್ಚ ಭರಿಸುವ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಕರಡಿಯ ಪ್ರಾತಿನಿಧಿಕ ಚಿತ್ರ

ಕರಡಿಯ ಪ್ರಾತಿನಿಧಿಕ ಚಿತ್ರ

  • Share this:
ರಾಮನಗರ(ಮೇ 27): ಕಾಡಿನಿಂದ ಆಹಾರ ಹುಡುಕಿ ಬಂದ ಕರಡಿಯೊಂದು ಮಹಿಳೆಯೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಜನನಿಬಿಡ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಹಲ್ಲೆಗೊಳಗಾದ ಮಹಿಳೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಹೃದಯ ಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಮಾವಿನಕಾಯಿ ಮಂಡಿಯಲ್ಲಿ ಕೆಲಸ ಮಾಡುವ ಕೆಲ ಯುವಕರಿಗೆ ಬೆಳಗಿನ ಜಾವ 3.30 ರ ಸಮಯಕ್ಕೆ ಕಾಣಿಸಿದ ಕರಡಿ ಗುಟುರು ಹಾಕಿಕೊಂಡು ನಗರದಲ್ಲಿ ಅಲ್ಲಲ್ಲಿ ಓಡಾಡಿದೆ. ನಂತರ 21ನೇ ವಾರ್ಡ್​ನ ಸುಣ್ಣದಕೇರಿಗೆ ಕರಡಿ ಬಂದಿದೆ. ಆಗ ಸುತ್ತಮುತ್ತಲಿನ ಜನರು ಮನೆಯಿಂದ ಹೊರಬರಬಾರದೆಂದು ಪೊಲೀಸರು, ಅರಣ್ಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರಿಗೆ ಮೈಕ್ ಮೂಲಕ ಅನೌನ್ಸ್ ಮಾಡಿದ್ದಾರೆ.

ನಂತರ ಸುಣ್ಣದಕೇರಿಯ ರಾಮಮಂದಿರದ ಮುಂಭಾಗದ ಮನೆಯಲ್ಲಿ ವಾಸವಿದ್ದ ಮಾಜಿ ನಗರಸಭಾ ಸದಸ್ಯೆ ಸಾಕಮ್ಮ ಎಂಬುವರ ಮನೆಯ ಹಿಂಭಾಗಕ್ಕೆ ಹೋಗಿ ಶೌಚಗೃಹದ ಬಳಿ ಕರಡಿ ಕುಳಿತಿದೆ. ದೃರದೃಷ್ಟಕ್ಕೆ 5.10 ರ ವೇಳೆಗೆ ಸಾಕಮ್ಮ ಮನೆಯ ಹಿಂಬಾಗಿಲಿನಿಂದ ಹೊರಬಂದು ಶೌಚಗೃಹಕ್ಕೋಗಲು ಬಂದಿದ್ದಾರೆ. ಆಗ ಅಲ್ಲೇ ಇದ್ದ ಕರಡಿ ಸಾಕಮ್ಮ ಮೇಲೆ ಎರಗಿ ಮಾರಣಾಂತಿಕವಾಗಿ ದಾಳಿ ನಡೆಸಿದೆ. ಇನ್ನು, ಕರಡಿ ದಾಳಿಯಿಂದ ಸಾಕಮ್ಮ ಚೀರಾಡುತ್ತಿದ್ದಂತೆ ಮಗ ಸುಧೀರ್ ಬಂದು ಕರಡಿಗೆ ಕಾಲಿನಿಂದ ಒದ್ದಿದ್ದಾರೆ. ಆಗ ಸುಧೀರ್ ಬಲಗಾಲಿಗೂ ಕರಡಿ ಪರಚಿ ಗಾಯಗೊಳಿಸಿ ಅಲ್ಲಿಂದ ಪರಾರಿಯಾಗಿದೆ.

ಇದನ್ನೂ ಓದಿ: ಬಿಜೆಪಿಗೆ ಪರಿಷತ್ ಸುಗ್ಗಿ; ಟಿಕೆಟ್​ಗೆ ಜೋರಾಗಿದೆ ಲಾಬಿ; ಆಕಾಂಕ್ಷಿಗಳದ್ದೇ ದೊಡ್ಡ ಪಟ್ಟಿ

ಕರಡಿ ದಾಳಿಯಿಂದಾಗಿ ಸಾಕಮ್ಮನ ಮುಖ ಸಂಪೂರ್ಣ ಹಾಳಾಗಿದ್ದು, ಒಂದು ಕಣ್ಣು ಸಹ ಸ್ಥಳದಲ್ಲೇ ಕಳಚಿ ಬಿದ್ದಿದೆ. ತಕ್ಷಣವೇ ಗಾಯಾಳು ಸಾಕಮ್ಮರನ್ನ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಸಾಕಮ್ಮರ ಮುಖ ಶೇ. 90 ಭಾಗ ಗಾಯವಾಗಿದ್ದು ಬದುಕುವುದು ಕಷ್ಟಸಾಧ್ಯ ಎನ್ನಲಾಗಿದೆ. ಮಗ ಸುಧೀರ್ ಅವರಿಗೂ ಸಹ ಅಲ್ಲೇ ಚಿಕಿತ್ಸೆ ಕೊಡಿಸಲಾಗಿದೆ.

ಇನ್ನು, ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಬಡಾವಣೆ ಹಾಗೂ ಅಕ್ಕಪಕ್ಕದ ಮನೆಯವರು ಭಯಭೀತರಾಗಿದ್ದಾರೆ. ನಗರದ ಹೃದಯ ಭಾಗದಲ್ಲಿಯೇ ಇಂತಹ ಘಟನೆ ನಡೆದಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಲ್ಲಮೂಲಗಳ ಪ್ರಕಾರ ಕಳೆದ ರಾತ್ರಿ ಕಿಡಿಗೇಡಿಗಳ ತಂಡವೊಂದು ಈ ಕರಡಿಯನ್ನ ದೊಡ್ಡಮಣ್ಣುಗುಡ್ಡೆ ಅರಣ್ಯ ವ್ಯಾಪ್ತಿಯಿಂದ ಯಾವುದೋ ದುರುದ್ದೇಶಕ್ಕಾಗಿ ಅಪಹರಣ ಮಾಡಿದ್ದಾರೆ. ಆದರೆ ಮಾರ್ಗಮಧ್ಯೆ ಕರಡಿ ತಪ್ಪಿಸಿಕೊಂಡು ದಾರಿಕಾಣದೆ ನಗರದೊಳಗೆ ಬಂದು ಈ ಅವಾಂತರ ಮಾಡಿದೆ ಎಂಬ ಮಾಹಿತಿ ನ್ಯೂಸ್18 ಗೆ ಲಭ್ಯವಾಗಿದೆ.

ಇದನ್ನೂ ಓದಿ: ‘ದೇಶದ ಕಾನೂನು ಎಲ್ಲರಿಗೂ ಅನ್ವಯ, ದೇವಸ್ಥಾನ, ಮಸೀದಿ, ಚರ್ಚ್​​​ ಎಲ್ಲವೂ ಒಂದೇ‘ - ಬಿಎಸ್​ವೈ

ಈ ಘಟನೆಯ ಮಾಹಿತಿ ಪಡೆದ ಕ್ಷೇತ್ರದ ಶಾಸಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬಸ್ಥರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಚಿಕಿತ್ಸೆಯ ವೆಚ್ಚ ಭರಿಸುವ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ ಸ್ಥಳದಲ್ಲಿದ್ದರು.

ಒಟ್ಟಾರೆ ಜನನಿಬಿಡ ಪ್ರದೇಶದಲ್ಲಿ ಈ ರೀತಿ ಕಾಡುಪ್ರಾಣಿ ಕಾಣಿಸಿಕೊಂಡು ಮನುಷ್ಯರ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಪ್ರಕರಣ ಚನ್ನಪಟ್ಟಣ ನಗರದ ಇತಿಹಾಸದಲ್ಲೇ ಮೊದಲಾಗಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿದರೆ ಸತ್ಯಾಸತ್ಯತೆ ಬಟಾಬಯಲಾಗಲಿದೆ. ಸದ್ಯ ಹಲ್ಲೆ ಮಾಡಿರುವ ಕರಡಿ ಅಬ್ಬೂರು ಅರಣ್ಯ ವ್ಯಾಪ್ತಿಯ ಕಡೆಗೆ ಹೋಗಿದೆ, ತಕ್ಷಣವೇ ಪತ್ತೆ ಮಾಡಿ ಅದನ್ನ ಹಿಡಿಯಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ನ್ಯೂಸ್ 18 ಗೆ ಮಾಹಿತಿ ಕೊಟ್ಟಿದ್ದಾರೆ.

ವರದಿ: ಎ.ಟಿ. ವೆಂಕಟೇಶ್

First published: