ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತವೇ ಇಲ್ಲ: ಎಸ್ ಆರ್ ವಿಶ್ವನಾಥ್

ಸಿದ್ದರಾಮಯ್ಯ ಸಿಎಂ ಆಗಿದ್ದವರು. ಈಗ ಆ ಗೌರವಯುತ ಸ್ಥಾನದಲ್ಲಿರುವವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪು. ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಎಸ್ ಆರ್ ವಿಶ್ವನಾಥ್ ಗುಡುಗಿದ್ದಾರೆ.

ಎಸ್​ಆರ್​ ವಿಶ್ವನಾಥ್

ಎಸ್​ಆರ್​ ವಿಶ್ವನಾಥ್

  • Share this:
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಏಕವಚನದಲ್ಲಿ ಟೀಕೆ ಮಾಡಿರುವ ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿರುದ್ಧ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರು ನಾಡಿನ ಮುಖ್ಯಮಂತ್ರಿಯಾಗಿದ್ದು, ಒಂದು ಗೌರವಯುತ ಸ್ಥಾನದಲ್ಲಿದ್ದಾರೆ. ಇಂತಹ ಗೌರವದ ಸ್ಥಾನದಲ್ಲಿ ಕುಳಿತು ಸಿದ್ದರಾಮಯ್ಯನವರೂ ಅಧಿಕಾರ ನಡೆಸಿದ್ದಾರೆ. ಈಗ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದಾರೆ. ಆದರೆ, ತಮ್ಮ ಘನತೆ, ಗೌರವ ಅರಿಯದೇ ಸಿದ್ಧರಾಮಯ್ಯ ಅವರು ನಾಲಗೆ ಇದೆ ಎಂದು ಹರಿಬಿಡಲಾರಂಭಿಸಿರುವುದು ಅವರ ಗೌರವಕ್ಕೆ ಚ್ಯುತಿ ತಂದುಕೊಂಡಿದ್ದಾರೆ ಎಂದು ಯಲಹಂಕ ಶಾಸಕರೂ ಆದ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಹೀಗೆ ಮಾತನಾಡುವುದು ನನಗೆ ರೂಢಿ ಎಂದು ಮಾತು ಮಾತಿಗೆ ಹೇಳುವ ಸಿದ್ದರಾಮಯ್ಯನವರು ಎಂತಹ ಉನ್ನತ ಹುದ್ದೆಯಲ್ಲಿರುವವರನ್ನೂ ಏಕವಚನದಲ್ಲಿ ಸಂಬೋಧಿಸುವುದು ತಪ್ಪು. ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತದೆ ಎಂಬ ಸಾಮಾನ್ಯ ಜ್ಞಾನವನ್ನು ಅವರು ಮೊದಲು ಅರಿತುಕೊಳ್ಳಲಿ ಎಂದು ವಿಶ್ವನಾಥ್ ಕಿಡಿಕಾರಿದರು. ಚುನಾವಣೆ ಸಂದರ್ಭಗಳಲ್ಲಿ ಸಿದ್ದರಾಮಯ್ಯನವರಿಗೆ ತಮ್ಮ ನಾಲಗೆ ಮೇಲೆ ಹಿಡಿತವೇ ಇಲ್ಲದಂತಾಗಿರುತ್ತದೆ. ಈಗ ರಾಜ್ಯದಲ್ಲಿ ಉಪಚುನಾವಣೆಗಳು ನಡೆಯುತ್ತಿರುವ ವೇಳೆ ಜನರನ್ನು ಸೆಳೆದುಕೊಳ್ಳಲೆಂದು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಬಿಡಿಎ ಅಧ್ಯಕ್ಷರು ಆರೋಪಿಸಿದರು.

ಅನ್ನಭಾಗ್ಯದ ವಿಚಾರದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಬಡವರಿಗೆ 7 ಕೆ.ಜಿ. ಅಕ್ಕಿ ಕೊಡುತ್ತಿದ್ದೆ. ಯಡಿಯೂರಪ್ಪ ಅದನ್ನು 5 ಕೆ.ಜಿ.ಗೆ ಇಳಿಸಿದ್ದಾನೆ ಎಂದು ಏಕವಚನದಲ್ಲಿ ಹೇಳುವ ಮೂಲಕ ಸಿದ್ದರಾಮಯ್ಯ ತಮ್ಮ ಸಂಸ್ಕೃತಿಯನ್ನು ರಾಜ್ಯದ ಜನತೆ ಮುಂದಿಟ್ಟಿದ್ದಾರೆ ಎಂದು ಟೀಕಿಸಿದ ವಿಶ್ವನಾಥ್, ಸಿದ್ದರಾಮಯ್ಯನವರಿಗಿಂತ ಎರಡು ಪಟ್ಟು ಮಾತನಾಡಲು ನಾವು ಬಿಜೆಪಿ ನಾಯಕರಿಗೂ ಬರುತ್ತದೆ. ಆದರೆ, ನಾವು ಸಿದ್ದರಾಮಯ್ಯನವರ ಮಟ್ಟಕ್ಕೆ ಇಳಿಯುವುದಿಲ್ಲ. ನಮಗೊಂದು ಸಂಸ್ಕೃತಿಯನ್ನು ಪಕ್ಷ ಕಲಿಸಿಕೊಟ್ಟಿದೆ ಎಂದರು.

ಇದನ್ನೂ ಓದಿ: ಯತ್ನಾಳ ನಾಲಾಯಕ್; ಸರ್ಕಾರ ಟೀಕಿಸಬೇಕೆಂದರೆ ರಾಜೀನಾಮೆ ಕೊಟ್ಟು ಹೋಗಲಿ: ಸಚಿವ ಮುರುಗೇಶ್ ನಿರಾಣಿ

ಯಡಿಯೂರಪ್ಪ ಏನು ಅವರಪ್ಪನ ಮನೆಯಿಂದ ದುಡ್ಡು ತರುತ್ತಾನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಗಾದರೆ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರಪ್ಪನ ಮನೆಯಿಂದ ಹಣ ತಂದು ಆಡಳಿತ ನಡೆಸಿದ್ದರಾ? ಎಂದು ವಿಶ್ವನಾಥ್ ಪ್ರಶ್ನಿಸಿದರು.

ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪನವರು ಅದನ್ನು ಸಮರ್ಥವಾಗಿ ನಿಭಾಯಿಸಿದರು. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಪ್ರತಿಯೊಬ್ಬ ನಾಗರಿಕರಿಗೂ ಊಟ ವಸತಿ ಸೌಲಭ್ಯವನ್ನು ಕಲ್ಪಿಸಿದರು. ಅಸಂಖ್ಯಾತ ಕುಟುಂಬಗಳಿಗೆ ಉಚಿತವಾಗಿ ಆಹಾರ ಧಾನ್ಯಗಳು ತಲುಪುವಂತೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರನ್ನು ತೆಗೆದುಕೊಂಡರು. ಆದರೆ, ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವಂತೆ ವಿನಾ ಕಾರಣ ಯಡಿಯೂರಪ್ಪ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಎಸ್ ಆರ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಈ ಹಿಂದೆ ಹಲವು ಬಾರಿ ಕೆ.ಎಸ್. ಈಶ್ವರಪ್ಪ ಅವರ ತಲೆಯಲ್ಲಿ ಮೆದುಳಿಲ್ಲ. ಅವರೊಬ್ಬ ದಡ್ಡ ಎಂದು ಏಕವಚನದಲ್ಲಿ ಟೀಕಿಸಿದ್ದರು. ಆದರೆ, ಈಗ ಈಶ್ವರಪ್ಪ ಅವರ ಮೇಲೆ ಎಲ್ಲಿಲ್ಲದ ಪ್ರೀತಿಯನ್ನು ತೋರಿಸುತ್ತಿರುವ ಸಿದ್ದರಾಮಯ್ಯ ನಮ್ಮ ಬಿಜೆಪಿ ಪಕ್ಷದ ಆಂತರಿಕ ವ್ಯವಸ್ಥೆಯ ವಿಚಾರದಲ್ಲಿ ರಾಜಕಾರಣ ಮಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅವರ ಇಂತಹ ರಾಜಕಾರಣವನ್ನು ರಾಜ್ಯದ ಜನತೆ ಗಂಭೀರವಾಗಿ ನೋಡುತ್ತಿದ್ದು, ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ವರದಿ: ಶರಣು ಹಂಪಿ
Published by:Vijayasarthy SN
First published: