• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬೆಂಗಳೂರಿನಲ್ಲಿ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕೆಲ ಚಿತಾಗಾರಗಳು ಮೀಸಲು

ಬೆಂಗಳೂರಿನಲ್ಲಿ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಕೆಲ ಚಿತಾಗಾರಗಳು ಮೀಸಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ಮೃತ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಪರದಾಡುವ ಸಮಸ್ಯೆ ಬಹಳ ದಿನಗಳಿಂದ ಇದೆ. ಹಾಗೆಯೇ ಜಾಗ ಸಿಕ್ಕರೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

  • Share this:

ಬೆಂಗಳೂರು(ಜುಲೈ 25): ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಬರಲಾರದೇ ಚಿತಾಗಾರದ ಸಿಬ್ಬಂದಿಯೇ ಹಣ ಪಾವತಿಸಿ ಅಂತಿಮ ಕಾರ್ಯ ಮಾಡಿದ ಸನ್ನಿವೇಶ ನಿಮಗೆ ನೆನಪಿರಬಹುದು. ಇನ್ಮುಂದೆ ಇಂಥಾ ಪರಿಸ್ಥಿತಿ ಬಾರದಂತೆ ತಡೆಯಲು ಬಿಬಿಎಂಪಿ ಒಂದಷ್ಟು ನೂತನ ಆದೇಶಗಳನ್ನು ಜಾರಿ ಮಾಡಿದೆ.


ಕೋವಿಡ್ ಸೋಂಕಿತ ಮೃತಪಟ್ಟರೆ ವಿದ್ಯುತ್ ಚಿತಾಗಾರದಲ್ಲಿ ಮೃತದೇಹದ ದಹನಕ್ಕೆ ಹಣ ನೀಡುವಂತಿಲ್ಲ. ದಹನದ ವೆಚ್ಚದಿಂದ ವಿನಾಯಿತಿ ನೀಡಬೇಕು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಒಂದು ಮೃತದೇಹದ ದಹನಕ್ಕೆ ಕುಟುಂಬಸ್ಥರು 250 ರೂ ಪಾವತಿಸಬೇಕು. ಈಗ ಆ ಹಣಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇನ್ನುಳಿದಂತೆ ಚಟ್ಟಕ್ಕೆ ತಗಲುವ ವಚ್ಚ 900 ರೂ, ಶವಸಂಸ್ಕಾರದ ನಂತರ ಬೂದಿ ಸಂಗ್ರಹಿಸುವ ಪಾತ್ರೆಗೆ 100 ರೂ, ಸಿಬ್ಬಂದಿಗೆ 500 ರೂ ಪ್ರೋತ್ಸಾಹ ಧನ ಬಿಬಿಎಂಪಿ ಇಂದ ಪಾವತಿ ಮಾಡಲಾಗುತ್ತದೆ. ನೈಸರ್ಗಿಕ ವಿಕೋಪದಡಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಅನ್ವಯವಾಗುವಂತೆ ಈ ಆದೇಶ ಹೊರಡಿಸಲಾಗಿದೆ.


ಅನೇಕ ಕಡೆ ಕೋವಿಡ್ ಸೋಂಕಿತ ಮೃತರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಈ ಅನಾನುಕೂಲಗಳನ್ನು ತಪ್ಪಿಸಲು ಬಿಬಿಎಂಪಿ ಮತ್ತಷ್ಟು ಬದಲಾವಣೆ ತಂದಿದೆ. ಮೃತಪಟ್ಟ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಲ್ಲಿ 4 ಚಿತಾಗಾರ ಮೀಸಲಿಡಲಾಗಿದೆ. ಕೆಂಗೇರಿ (ಆರ್ ಆರ್ ನಗರ), ಮೇಡಿ ಅಗ್ರಹಾರ (ಯಲಹಂಕ), ಕೂಡ್ಲು (ಬೊಮ್ಮನಹಳ್ಳಿ), ಪಣತ್ತೂರು (ಮಹದೇವಪುರ) ಹೀಗೆ ಒಟ್ಟು ನಾಲ್ಕು ವಲಯಗಳ ವಿದ್ಯುತ್ ಚಿತಾಗಾರಗಳನ್ನು ಸಾವನ್ನಪ್ಪಿದ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆಂದೇ ಮೀಸಲಿರಿಸಲಾಗಿದೆ. ಕೋವಿಡ್ ಸೋಂಕಿತ ಮೃತರ ಅಂತ್ಯಸಂಸ್ಕಾರದ ಇನ್ಮುಂದೆ ಬೇಗನೇ ನಡೆಯುವಂತೆ ಮಾಡಲು ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: Gold-Silver Rates | ಇವತ್ತೂ ಚಿನ್ನದ ಬೆಲೆ ಏರಿಕೆ; ಇಲ್ಲಿದೆ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರಗಳು


ಈ 4 ಚಿತಾಗಾರಗಳಲ್ಲಿ ಕೋವಿಡ್ ಸೋಂಕಿತ ಮೃತರ ಅಂತ್ಯಸಂಸ್ಕಾರ ಮಾತ್ರ ಮಾಡಲು ಅವಕಾಶ. ಕೋವಿಡ್ ಅಲ್ಲದ ಮೃತದೇಹಗಳು ಬೇರೆ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶವಿದೆ. ಈ ಎಲ್ಲಾ ಆದೇಶಗಳನ್ನು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೊರಡಿಸಿದ್ದಾರೆ.




ಬೆಂಗಳೂರಿನಲ್ಲಿ ಹಲವು ದಿನಗಳಿಂದ ನಿತ್ಯವೂ 2 ಸಾವಿರಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಲೇ ಇವೆ. ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಲೇ ಇದೆ. ಅಂತ್ಯಸಂಸ್ಕಾರದ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ.

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು