ಬೆಂಗಳೂರು: ನಗರದಲ್ಲಿ ಕಸ ಎನ್ನುವುದು ಎಂದೂ ಮುಗಿಯದ ಸಮಸ್ಯೆ. ಎಲ್ಲರೂ ತಮಗೆ ತಿಳಿದ ಮಟ್ಟಿಗೆ ಆ ಸಮಸ್ಯೆಯಿಂದ ಪಾರಾಗೋ ದಾರಿ ಹುಡುಕುತ್ತಾರೆ. ಆದರೆ ಸಮಸ್ಯೆ ಬಗ್ಗೆ ದೂರು ನೀಡಿದ್ದಕ್ಕೆ ಮನೆ ಎದುರು ಜನ ಸೇರಿ ಗೂಂಡಾಗಿರಿ ಮಾಡಿದ ಘಟನೆ ಮಾತ್ರ ಅಚ್ಚರಿ ಹುಟ್ಟಿಸುವಂತಿದೆ. ಇದು ನಡೆದಿದ್ದು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಬೆಮೆಲ್ ಲೇಔಟಿನಲ್ಲಿ. ಇದೆಲ್ಲಾ ಶುರುವಾಗೋಕೆ ಕಾರಣ ಸಹಾಯ ಆಪ್ನ ಟಿಕೆಟ್. ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಹಾಯ ಎನ್ನುವ ಆಪ್ ಇದೆ. ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ, ಬೆಸ್ಕಾಂ ಹೀಗೆ ಯಾವುದೇ ಸಂಸ್ಥೆಯ ಯಾವುದೇ ಸೇವೆಯ ಕುರಿತು ನೀವು ಆ ಆಪ್ ಮೂಲಕ ದೂರು ಸಲ್ಲಿಸಬಹುದು. ನಿಮ್ಮ ಸಮಸ್ಯೆ ಬಗೆಹರಿದ ಮೇಲೆ ಆ ದೂರು ಅಥವಾ ಟಿಕೆಟ್ ಅನ್ನು ಕ್ಲೋಸ್ ಮಾಡಲಾಗುತ್ತದೆ.
ಬೆಮೆಲ್ ಲೇಔಟಿನ ಟೆಕ್ಕಿ ಒಬ್ಬರು ಈ ಆಪ್ ಮೂಲಕ ನಿರಂತರವಾಗಿ ದೂರು ನೀಡುತ್ತಲೇ ಬಂದಿದ್ದರು. ತಮ್ಮ ಮನೆ ಇರುವ ಬೀದಿಯಲ್ಲಿ ಕಸ ಗುಡಿಸುತ್ತಿಲ್ಲ ಎಂದು ಸಹಾಯ ಆಪ್ ಮೂಲಕ ದೂರು ನೀಡಿದರು. ಕಸ ಗುಡಿಸುವ ತನಕ ಪದೇ ಪದೇ ದೂರು ನೀಡುತ್ತಲೇ ಇದ್ದರು. ಇದರ ಪರಿಣಾಮವಾಗಿ ಪೌರಕಾರ್ಮಿಕರು ಇವರ ಮನೆ ಮುಂದೆ ಮಾತ್ರ ಕಸ ಗುಡಿಸಿ ಉಳಿದ ಸ್ಥಳಗಳನ್ನು ಹಾಗೇ ಬಿಟ್ಟು ತೆರಳುತ್ತಿದ್ದರು. ಇದು ಟೆಕ್ಕಿ ಸಂದೀಪ್ ಕೃಷ್ಣಮೂರ್ತಿ ನಂದಿಗ ನಡೆಸಿದ ಟಿಕೆಟ್ ಹೋರಾಟ. ಸಹಾಯ ಆಪ್ನಲ್ಲಿ ದಾಖಲಾಗೋ ಪ್ರತೀ ದೂರನ್ನೂ ಟಿಕೆಟ್ ಎನ್ನಲಾಗುತ್ತದೆ. ನಾಗರಿಕರು ಟಿಕೆಟ್ ತೆಗೆದರೆ ಸಮಸ್ಯೆ ಪರಿಹಾರವಾದ ನಂತರವೇ ಅದನ್ನು ಕ್ಲೋಸ್ ಮಾಡಬೇಕು. ಆದರೆ ಬಿಬಿಎಂಪಿ ಸಮಸ್ಯೆ ಪರಿಹರಿಸದೇ ಟಿಕೆಟ್ಗಳನ್ನು ಮಾತ್ರ ಕ್ಲೋಸ್ ಮಾಡ್ತಿತ್ತು. ಬಿಡದೇ ನಿರಂತರವಾಗಿ ತಮ್ಮ ಪ್ರಯತ್ನ ಮುಂದುವರೆಸಿದರು ಈ ಟೆಕ್ಕಿ. ಅಷ್ಟೇ ಅಲ್ಲ, ಅಕ್ಕಪಕ್ಕದವರಿಗೂ ಈ ಮಾರ್ಗ ಹೇಳಿಕೊಟ್ಟ ಪರಿಣಾಮ ಇಡೀ ಬೀದಿಯ ಜನರಿಂದ ದೂರು ದಾಖಲಾಗುವುದಕ್ಕೆ ಶುರುವಾಯಿತು. ಆದರೆ ಅಧಿಕಾರಿಗಳು ಮಾತ್ರ ಕಸ ಗುಡಿಸಲು ಜನರಿಲ್ಲ ಎಂದು ಸಬೂಬು ಹೇಳುತ್ತಿದ್ದರು.
ಇದನ್ನೂ ಓದಿ: ಬೆಂಗಳೂರಿನ ರಸ್ತೆಯಲ್ಲಿ ಸಿಕ್ಕವರಿಗೆ ಚಾಕು ಹಾಕಿದ ವ್ಯಕ್ತಿ; ಓರ್ವ ಸಾವು, ಐವರಿಗೆ ಗಾಯ
ಒಂದು ಮುಂಜಾನೆ ಹತ್ತಾರು ಪೌರಕಾರ್ಮಿಕರು ದಿಢೀರನೆ ಸಂದೀಪ್ ಮನೆ ಮುಂದೆ ಜಮಾಯಿಸಿದರು. ಜೊತೆಗೆ ಕಸ ತುಂಬಿದ ವಾಹನಗಳನ್ನೂ ಜೊತೆಗೆ ತಂದಿದ್ದರು. ಹೆಚ್ಚು ದೂರು ನೀಡಿದ್ದರಿಂದ ಟೆಕ್ಕಿಯನ್ನು ಹೆದರಿಸಲು ಪೌರಕಾರ್ಮಿಕರು ಹೀಗೆ ಮನೆ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 7.45 ಸುಮಾರಿಗೆ ಮನೆ ಮುಂದೆ ಅಷ್ಟೆಲ್ಲಾ ಪೌರಕಾರ್ಮಿಕರನ್ನು ನೋಡಿ ಇಲ್ಲಿನ ಜನ ದಂಗಾದರು. ಅಷ್ಟೇ ಅಲ್ಲ ಕಸ ಗುಡಿಸಲು ಇಲ್ಲದ ಪೌರಕಾರ್ಮಿಕರು ಹೆದರಿಸಲು ಹೇಗೆ ಬಂದರು ಎನ್ನುವ ಪ್ರಶ್ನೆ ನಾಗರಿಕರನ್ನು ಕಾಡಿದೆ. ಮನೆ ಮುಂದೆ ಕಸ ತೆಗೀರಿ ಅಂದ್ರೆ ಪೌರಕಾರ್ಮಿಕರು ಗೂಂಡಾಗಿರಿ ಮಾಡಿದ್ದಾರೆ. ರಸ್ತೆ ಕಸ ಗುಡಿಸುತ್ತಿಲ್ಲ ಎಂದು ದೂರಿದ್ರೆ ಕಸದ ವಾಹನದ ಸಮೇತ ಮನೆ ಮುಂದೆ ಹಾಜರಾಗಿದ್ದಾರೆ.
ಅಂದ್ಹಾಗೆ ಸಂದೀಪ್ ನಂದಿಗ ಇದುವರೆಗೆ 250ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದ್ದಾರೆ. ಈ ಪ್ರದೇಶದ ರಸ್ತೆ, ಚರಂಡಿ, ಬೀದಿ ದೀಪ, ಕಸ ನಿರ್ವಹಣೆ ಎಲ್ಲದಕ್ಕೂ ಟಿಕೆಟ್ ತೆಗೆಯೋದರ ಮೂಲಕವೇ ಕೆಲಸ ಮಾಡಿಸಿಕೊಳ್ಳಬೇಕಿದೆ. ದೂರಿನ ಒತ್ತಡದಿಂದಲಾದರೂ ಕೆಲಸ ಮಾಡಲಿ ಎನ್ನುವ ನಿರೀಕ್ಷೆ ನಾಗರಿಕರದ್ದು. ತಮ್ಮ ಹಕ್ಕಿನ ಸವಲತ್ತುಗಳಿಗೂ ಈ ಮಟ್ಟಿಗಿನ ಹೋರಾಟ, ಬೆದರಿಕೆ ಎದುರಿಸುವಂತಾಗಿರೋದು ಇವರಿಗೆಲ್ಲಾ ಬೇಸರ ಮೂಡಿಸಿದೆ.
ವರದಿ: ಸೌಮ್ಯಾ ಕಳಸ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ